ಏನಾಗ್ತಿದೆ ಬೆಂಗಳೂರಲ್ಲಿ? ರಸ್ತೆಯಲ್ಲಿ ಮದ್ಯ ಸೇವನೆ ಮಾಡಿದ್ದನ್ನು ಪ್ರಶ್ನಿಸಿದ ದಂಪತಿಗೆ ಚಾಕು ಇರಿದ ಪುಂಡರು!

By Kannadaprabha News  |  First Published Oct 29, 2024, 4:48 AM IST

ಸಾರ್ವಜನಿಕ ರಸ್ತೆಯಲ್ಲಿ ಕುಳಿತು ಮದ್ಯ ಸೇವಿಸುತ್ತಿದ್ದ ಪುಂಡರ ಗುಂಪೊಂದು ಬುದ್ಧಿವಾದ ಹೇಳಿದ ದಂಪತಿ ಮೇಲೆ ಚಾಕು, ಇಟ್ಟಿಗೆಯಿಂದ ಮಾರಣಾಂತಿಕ ಹಲ್ಲೆ ನಡೆಸಿ ಕಾರನ್ನು ಜಖಂಗೊಳಿಸಿರುವ ಘಟನೆ ಭಾನುವಾರ ರಾತ್ರಿ ಬ್ಯಾಡರಹಳ್ಳಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.


ಬೆಂಗಳೂರು (ಅ.29): ಸಾರ್ವಜನಿಕ ರಸ್ತೆಯಲ್ಲಿ ಕುಳಿತು ಮದ್ಯ ಸೇವಿಸುತ್ತಿದ್ದ ಪುಂಡರ ಗುಂಪೊಂದು ಬುದ್ಧಿವಾದ ಹೇಳಿದ ದಂಪತಿ ಮೇಲೆ ಚಾಕು, ಇಟ್ಟಿಗೆಯಿಂದ ಮಾರಣಾಂತಿಕ ಹಲ್ಲೆ ನಡೆಸಿ ಕಾರನ್ನು ಜಖಂಗೊಳಿಸಿರುವ ಘಟನೆ ಭಾನುವಾರ ರಾತ್ರಿ ಬ್ಯಾಡರಹಳ್ಳಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಮಾಗಡಿ ಮುಖ್ಯರಸ್ತೆಯ ಹೇರೋಹಳ್ಳಿಯ ತುಂಗಾನಗರ ನಿವಾಸಿ ಶಿವಗಂಗೇಗೌಡ(38) ಮತ್ತು ಅವರ ಪತ್ನಿ ಜಯಲಕ್ಷ್ಮೀ(35) ಹಲ್ಲೆ ಒಳಗಾದವರು. ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಒಳರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Tap to resize

Latest Videos

undefined

ಶಿವಗಂಗೇಗೌಡ ನೀಡಿದ ದೂರಿನ ಮೇರೆಗೆ ಧನು, ಆನಂದ, ಸಂಜು ಹಾಗೂ ಇತರರ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ. ಹಲ್ಲೆಯ ದೃಶ್ಯಾವಳಿ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಏನಿದು ಘಟನೆ?: 
ದೂರುದಾರ ಶಿವಗಂಗೇಗೌಡ ತಮ್ಮ ಮನೆ ಬಳಿ ರಸ್ತೆ ಪಕ್ಕದಲ್ಲಿ ತಮ್ಮ ಇನೋವಾ ಕಾರು ಪಾರ್ಕ್‌ ಮಾಡಿದ್ದರು. ಭಾನುವಾರ ರಾತ್ರಿ ಸುಮಾರು 7ಕ್ಕೆ ಆರೋಪಿಗಳಾದ ಸಂಜು, ಆನಂದ, ಧನು ಕಾರಿನ ಪಕ್ಕದಲ್ಲಿಯೇ ಕುಳಿತು ಮದ್ಯ ಸೇವಿಸುತ್ತಿದ್ದರು. ಇದನ್ನು ಮನೆಯ ಕಿಟಕಿಯಿಂದ ನೋಡಿದ ಶಿವಗಂಗೇಗೌಡ, ಸಾರ್ವಜನಿಕರು ಓಡಾಡುವ ರಸ್ತೆಯಲ್ಲಿ ಕುಳಿತು ಮದ್ಯ ಸೇವಿಸುತ್ತಿದ್ದೀರಿ. ಇಲ್ಲಿಂದ ಎದ್ದು ಹೋಗಿ ಎಂದು ಹೇಳಿದ್ದಾರೆ. ಎದ್ದು ಹೋಗುತ್ತೇವೆ ಎಂದ ಆರೋಪಿಗಳು ನಂತರವೂ ಅಲ್ಲಿಯೇ ಕುಳಿತು ಮದ್ಯ ಸೇವನೆ ಮುಂದುವರೆಸಿದ್ದಾರೆ.

ಕರ್ನಾಟಕ ಲಾರಿ ಡ್ರೈವರ್ ಮೇಲೆ ಮನಸೋ ಇಚ್ಛೆ ಹಲ್ಲೆ ಮಾಡಿದ ತಮಿಳನಾಡು ಟ್ರಾಫಿಕ್ ಪೊಲೀಸ್!

ರಾತ್ರಿ ಸುಮಾರು 9ಕ್ಕೆ ಶಿವಗಂಗೇಗೌಡ ತಮ್ಮ ನಾಯಿಯನ್ನು ಹಿಡಿದುಕೊಂಡು ಮನೆಯಿಂದ ಹೊರಗೆ ಬಂದಿದ್ದಾರೆ. ಆಗಲೂ ಆರೋಪಿಗಳು ರಸ್ತೆಯಲ್ಲೇ ಕುಳಿತು ಮದ್ಯಪಾನ ಮಾಡುತ್ತಿರುವುದು ಕಂಡು ಬಂದಿದೆ. ಈ ವೇಳೆ ಇಲ್ಲಿಂದ ಎದ್ದು ಹೋಗಿ ಎಂದು ಶಿವಗಂಗೇಗೌಡ ಬುದ್ಧಿವಾದ ಹೇಳಿದ್ದಾರೆ. ಅಷ್ಟಕ್ಕೇ ಕೆರಳಿದ ಆರೋಪಿಗಳು ಅವಾಚ್ಯ ಶಬ್ದಗಳಿಂದ ಶಿವಗಂಗೇಗೌಡರನ್ನು ನಿಂದಿಸಿದ್ದಾರೆ. ಈ ವೇಳೆ ಆರೋಪಿ ಯಾರಿಗೋ ಮೊಬೈಲ್‌ ಕರೆ ಮಾಡಿದ್ದು, ಐದಾರು ಮಂದಿ ಸ್ಥಳಕ್ಕೆ ಬಂದು ಏಕಾಏಕಿ ಜಗಳ ತೆಗೆದಿದ್ದಾರೆ.

ಚಾಕುವಿನಿಂದ ಹಲ್ಲೆ: ಓರ್ವ ಆರೋಪಿ ಚಾಕುವಿನಿಂದ ಚುಚ್ಚಲು ಮುಂದಾದಾಗ ಶಿವಗಂಗೇಗೌಡರ ಕೈನಿಂದ ಚಾಕು ಹಿಡಿದಿದ್ದಾರೆ. ಇದರಿಂದಾಗಿ ಅವರ ಕೈಗೆ ಗಾಯವಾಗಿದೆ. ಬಳಿಕ ಆರೋಪಿ ಚಾಕುವಿನಿಂದ ಎಡ ತೋಳಿಗೆ ಚುಚ್ಚಿದ್ದಾನೆ. ಉಳಿದ ಆರೋಪಿಗಳು ಕ್ರಿಕೆಟ್‌ ಬ್ಯಾಟ್‌, ಸಿಮೆಂಟ್ ಇಟ್ಟಿಗೆಯಿಂದ ಶಿವಗಂಗೇಗೌಡರ ಮೇಲೆ ಹಲ್ಲೆ ಮಾಡಿದ್ದಾರೆ. ಪತಿಗೆ ಹಲ್ಲೆ ಮಾಡುತ್ತಿರುವುದನ್ನು ಕಂಡು ಹೊರಗೆ ಬಂದ ಜಯಲಕ್ಷ್ಮೀ ಅವರ ಮೇಲೂ ಆರೋಪಿಗಳು ಕ್ರಿಕೆಟ್‌ ಬ್ಯಾಟ್‌ ಹಾಗೂ ಇಟ್ಟಿಗೆಯಿಂದ ಹಲ್ಲೆ ಮಾಡಿದ್ದಾರೆ.

ಪ್ರೇಯಸಿ ದಲಿತೆ ಎಂದು ತಿಳಿದು ಮದುವೆಗೆ ನಿರಾಕರಿಸಿದ್ದ ವ್ಯಕ್ತಿಗೆ ಹೈಕೋರ್ಟ್ ಜಾಮೀನು

ಕಾರು ಜಖಂ: ಶಿವಗಂಗೇಗೌಡ ಅವರ ಇನೋವಾ ಕಾರಿನ ಮೇಲೆ ಸಿಮೆಂಟ್‌ ಇಟ್ಟಿಗೆ ಎತ್ತಿ ಹಾಕಿ ಜಖಂಗೊಳಿಸಿದ್ದಾರೆ. ಹಲ್ಲೆಯಿಂದ ಕುಸಿದು ಬಿದ್ದ ಶಿವಗಂಗೇಗೌಡ ಮತ್ತು ಜಯಲಕ್ಷ್ಮೀಯನ್ನು ಸ್ಥಳೀಯರು ಕೂಡಲೇ ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಬಳಿಕ ಆರೋಪಿಗಳು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಈ ಸಂಬಂಧ ಬ್ಯಾಡರಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

click me!