
ದಾವಣಗೆರೆ (ಡಿ.6): ಡೆಡ್ಲಿ ರಾಟ್‌ವೀಲರ್ ನಾಯಿಗಳ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ದಾವಣಗೆರೆಯ ಮಲ್ಲಶೆಟ್ಟಿಹಳ್ಳಿ ನಿವಾಸಿ ಅನಿತಾ (38) ಎಂಬ ಮಹಿಳೆ ಆಸ್ಪತ್ರೆಗೆ ತಲುಪುವ ಮೊದಲೇ ಉಸಿರು ಚೆಲ್ಲಿದ ಆಘಾತಕಾರಿ ಘಟನೆ ನಡೆದಿದೆ.
ಗುರುವಾರ ರಾತ್ರಿ ಹೊನ್ನೂರು ಗೊಲ್ಲರಹಟ್ಟಿ ಬಳಿ ಅನಿತಾ ಮೇಲೆ ಏಕಾಏಕಿ ಎರಡು ರಾಟ್‌ವೀಲರ್ ನಾಯಿಗಳು ದಾಳಿ ಮಾಡಿ ಎರಡು ತಾಸುಗಳ ಕಾಲ ಮೈಮೇಲೆಲ್ಲ ಕಚ್ಚಿ ಎಳೆದಾಡಿದ್ದವು. ರಕ್ತಸಿಕ್ತವಾಗಿ ಬಿದ್ದ ಮಹಿಳೆಯನ್ನ ತಕ್ಷಣ ದಾವಣಗೆರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಹೆಚ್ಚಿನ ಚಿಕಿತ್ಸೆಗಾಗಿ ವೈದ್ಯರ ಸಲಹೆಯ ಮೇರೆಗೆ ಬೆಂಗಳೂರಿನ ಆಸ್ಪತ್ರೆಗೆ ಸಾಗಿಸಲಾಗುತ್ತಿತ್ತು. ಆದರೆ, ಬೆಂಗಳೂರಿಗೆ ಕರೆದೊಯ್ಯುವ ಮಾರ್ಗಮಧ್ಯೆ ತುಮಕೂರು ಜಿಲ್ಲೆಯ ಶಿರಾ ಬಳಿ ಅನಿತಾ ಕೊನೆಯುಸಿರೆಳೆದಿದ್ದಾರೆ.
ಮೃತ ಅನಿತಾ ಅವರ ಸಹೋದರ ಹಾಗೂ ಸಂಬಂಧಿಕರು ನಾಯಿ ದಾಳಿಯ ಭೀಕರತೆಯನ್ನು ಬಿಚ್ಚಿಟ್ಟಿದ್ದಾರೆ. ಸುಮಾರು ಎರಡು ಗಂಟೆಗೂ ಹೆಚ್ಚು ಕಾಲ ನಾಯಿಗಳು ಅನಿತಾ ಅವರನ್ನು ಎಳೆದಾಡಿ ಕಚ್ಚಿವೆ. ದೇಹದ ಯಾವ ಭಾಗವನ್ನೂ ಬಿಡದೇ ನಾಯಿಗಳು ಕಚ್ಚಿ ಹಾಕಿವೆ. ಈ ಕ್ರೂರಿ ನಾಯಿಗಳನ್ನು ಜನವಸತಿ ಪ್ರದೇಶದ ಬಳಿ ಬಿಟ್ಟು ಹೋದವರಲ್ಲಿ ಮನುಷ್ಯತ್ವವೇ ಇಲ್ಲ ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ.
ಐದು ವರ್ಷದಲ್ಲೇ ತಂದೆ-ತಾಯಿ ಸಾವು: ಮೂವರು ಮಕ್ಕಳು ಅನಾಥ
ಈ ದುರಂತದಿಂದಾಗಿ ಮಲ್ಲಶೆಟ್ಟಿಹಳ್ಳಿ ಗ್ರಾಮಸ್ಥರು ಕಂಬನಿ ಮಿಡಿದಿದ್ದಾರೆ. ಐದು ವರ್ಷಗಳ ಹಿಂದೆಯೇ ಅನಿತಾ ಅವರ ಪತಿ ಹಾಲೇಶ್ ಅವರು ಮೃತಪಟ್ಟಿದ್ದರು. ಇದೀಗ ತಾಯಿ ಅನಿತಾ ಕೂಡ ನಾಯಿ ದಾಳಿಗೆ ಬಲಿಯಾಗಿರುವುದರಿಂದ ಇಬ್ಬರು ಹೆಣ್ಣುಮಕ್ಕಳು ಮತ್ತು ಒಬ್ಬ ಗಂಡು ಮಗು ಸೇರಿದಂತೆ ಮೂವರು ಮಕ್ಕಳು ಅನಾಥರಾಗಿದ್ದಾರೆ. ಶಿರಾದ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮೃತದೇಹವನ್ನು ಮಲ್ಲಶೆಟ್ಟಿಹಳ್ಳಿಯ ನಿವಾಸಕ್ಕೆ ತರಲಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.
ನಾಯಿ ಮಾಲೀಕರಿಗೆ ಕಠಿಣ ಶಿಕ್ಷೆಗೆ ಆಗ್ರಹ;
ಮೃತ ಅನಿತಾ ಅವರ ಕುಟುಂಬಸ್ಥರು ಮತ್ತು ಸಂಬಂಧಿಕರು ನಾಯಿ ಮಾಲೀಕರ ವಿರುದ್ಧ ತಕ್ಷಣ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಅಲ್ಲದೆ, ತಂದೆ-ತಾಯಿಯನ್ನು ಕಳೆದುಕೊಂಡು ಅನಾಥರಾದ ಮೂವರು ಮಕ್ಕಳ ವಿದ್ಯಾಭ್ಯಾಸ ಮತ್ತು ಭವಿಷ್ಯಕ್ಕಾಗಿ ಸರ್ಕಾರ ಮತ್ತು ಸಂಬಂಧಪಟ್ಟವರು ಸಹಾಯ ಮಾಡಬೇಕು ಎಂದು ಕಣ್ಣೀರಿನ ಮನವಿ ಮಾಡಿದ್ದಾರೆ. ಹಳ್ಳಿಗಳ ಬಳಿ ಇಂತಹ ಕ್ರೂರಿ ನಾಯಿಗಳನ್ನು ನಿರ್ಲಕ್ಷ್ಯದಿಂದ ಬಿಟ್ಟು ಹೋದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಕೂಡ ಆಗ್ರಹಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ