ಜೂಜಿನ ಚಟಕ್ಕೆ ಮನೆ ದರೋಡೆಗಿಳಿದ ಅರಣ್ಯಾಧಿಕಾರಿ..!

By Kannadaprabha News  |  First Published Dec 24, 2023, 2:00 AM IST

ಬಂಧಿತ ಆರೋಪಿಗಳಿಂದ ₹45.52 ಲಕ್ಷ ಮೌಲ್ಯದ 273 ಗ್ರಾಂ ಚಿನ್ನಾಭರಣ, ₹23 ಲಕ್ಷ ನಗದು, 370 ಗ್ರಾಂ ಬೆಳ್ಳಿ ವಸ್ತುಗಳು, 13 ಮೊಬೈಲ್‌ ಫೋನ್‌ಗಳು ಹಾಗೂ ಮಾರಕಾಸ್ತ್ರಗಳನ್ನು ಜಪ್ತಿ ಮಾಡಲಾಗಿದೆ: ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್  


ಬೆಂಗಳೂರು(ಡಿ.24):  ಇತ್ತೀಚೆಗೆ ಉದ್ಯಮಿಯೊಬ್ಬರ ಮನೆಗೆ ಪೊಲೀಸರ ಸೋಗಿನಲ್ಲಿ ನುಗ್ಗಿ ಮನೆಯ ಸದಸ್ಯರಿಗೆ ಮಾರಕಾಸ್ತ್ರಗಳಿಂದ ಬೆದರಿಸಿ ಕೈ-ಕಾಲು ಕಟ್ಟಿ, ಲಕ್ಷಾಂತರ ರುಪಾಯಿ ನಗದು ಹಾಗೂ ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಪ್ರಕರಣ ಸಂಬಂಧ ಉಪ ಅರಣ್ಯಾಧಿಕಾರಿ, ಇಬ್ಬರು ರೌಡಿಗಳು ಸೇರಿದಂತೆ ಒಟ್ಟು 11 ಮಂದಿ ಆರೋಪಿಗಳನ್ನು ಪೀಣ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ.

ತುಮಕೂರಿನ ಎ.ಸುರೇಶ್ ಅಲಿಯಾಸ್ ಸೂರ್ಯ (33), ಚಿಕ್ಕಮಗಳೂರಿನ ಚೆನ್ನಗಿರಿ ಅರಣ್ಯ ವಲಯ ಉಪ ಅರಣ್ಯಾಧಿಕಾರಿ ಸುರೇಂದ್ರ (40), ಚಿತ್ರದುರ್ಗದ ಹಣ್ಣಿನ ವ್ಯಾಪಾರಿ ಆರ್.ಎಸ್.ಶ್ರೀಧರ್ (27), ನೆಲಮಂಗಲದ ಫೈನಾನ್ಸಿಯರ್ ವಸಂತ್ ಕುಮಾರ್ ಅಲಿಯಾಸ್ ಕುಳ್ಳವಾಸು (41), ಅನಿಲ್ ಕುಮಾರ್ (34), ಕ್ಯಾಬ್ ಚಾಲಕ ಡಿ.ನಾಗರಾಜ್ (33), ಕೆ.ಜಿ. ಹಳ್ಳಿಯ ರೌಡಿಗಳಾದ ನವಾಜ್ ಪಾಷಾ (27), ಶೇಕ್ ಷಹಬಾಜ್ ಖಲಂದರ್ (27) ಮತ್ತು ಇವರ ಸಹಚರರಾದ ರಾಹಿಲ್ ಪಾಷಾ (26), ಉಸ್ಮಾನ್ ಖಾನ್ (24) ಬಂಧಿತರು.

Latest Videos

undefined

ಕೊಡಗು: ಕೇರಳ ವ್ಯಕ್ತಿಯಿಂದ 61 ಲಕ್ಷ ದರೋಡೆ, 6 ಜನರ ಬಂಧನ

ಆರೋಪಿಗಳಿಂದ ₹45.52 ಲಕ್ಷ ಮೌಲ್ಯದ 273 ಗ್ರಾಂ ಚಿನ್ನಾಭರಣ, ₹23 ಲಕ್ಷ ನಗದು, 370 ಗ್ರಾಂ ಬೆಳ್ಳಿ ವಸ್ತುಗಳು, 13 ಮೊಬೈಲ್‌ ಫೋನ್‌ಗಳು ಹಾಗೂ ಮಾರಕಾಸ್ತ್ರಗಳನ್ನು ಜಪ್ತಿ ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ತಿಳಿಸಿದ್ದಾರೆ.

ಈ ಆರೋಪಿಗಳು ಡಿ.4ರಂದು ಸಂಜೆ ಎಚ್‌ಎಂಟಿ ಲೇಔಟ್‌ ನಿವಾಸಿ ರೂಪೇಶ್ ಎಂಬುವರ ಮನೆಗೆ ನುಗ್ಗಿ ದರೋಡೆ ಮಾಡಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಇನ್‌ಸ್ಪೆಕ್ಟರ್ ಅನಿಲ್‌ ಕುಮಾರ್‌ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದೆ.

ಮಾಹಿತಿ ಕೊಟ್ಟ ಹಳೆ ಕೆಲಸಗಾರ:

ದೂರುದಾರ ರೂಪೇಶ್‌ ಅವರ ತಂದೆ ಮನೋಹರ್‌ ಕಾರ್ಖಾನೆ ಮಾಲೀಕರಾಗಿದ್ದಾರೆ. ಇವರ ಬಳಿ ಲಾರಿ ಚಾಲಕನಾಗಿದ್ದ ಆರೋಪಿ ನಾಗರಾಜ್‌ ವೈಯಕ್ತಿಕ ಕಾರಣಕ್ಕೆ 2022ರ ಡಿಸೆಂಬರ್‌ನಲ್ಲಿ ಕೆಲಸ ತೊರೆದಿದ್ದ. ಮಾಲೀಕ ಮನೋಹರ್‌ ಅವರ ಹಣಕಾಸು ವ್ಯವಹಾರದ ಬಗ್ಗೆ ಚೆನ್ನಾಗಿ ತಿಳಿದುಕೊಂಡಿದ್ದ ನಾಗರಾಜ್‌, ಕೆಲಸ ಬಿಟ್ಟ ಬಳಿಕ ತನ್ನ ಸ್ನೇಹಿತ ಅನಿಲ್‌ ಕುಮಾರ್‌ ಬಳಿ ಉದ್ಯಮಿ ಮನೋಹರ್‌ ಅವರ ವ್ಯವಹಾರದ ಬಗ್ಗೆ ಹೇಳಿಕೊಂಡಿದ್ದ. ಅವರ ಮನೆಯಲ್ಲಿ ನೋಟು ಎಣಿಸುವ ಯಂತ್ರಗಳಿರುವ ವಿಚಾರವನ್ನೂ ತಿಳಿಸಿದ್ದ.

ದರೋಡೆಗೆ ಸಂಚು

ಕೈ ಸಾಲ ಮಾಡಿಕೊಂಡಿದ್ದ ಅನಿಲ್‌ ಕುಮಾರ್‌, ಉದ್ಯಮಿ ಮನೋಹರ್‌ ವ್ಯವಹಾರದ ಬಗ್ಗೆ ಸ್ನೇಹಿತ ಫೈನಾನ್ಸಿಯರ್‌ ವಸಂತ್‌ ಬಳಿ ಹೇಳಿಕೊಂಡಿದ್ದ. ಈತ ಕೂಡ ವ್ಯವಹಾರದಲ್ಲಿ ನಷ್ಟ ಅನುಭವಿಸಿದ್ದ ಹಿನ್ನೆಲೆಯಲ್ಲಿ ಆರೋಪಿಗಳಾದ ಶ್ರೀಧರ್‌ ಮತ್ತು ಸುರೇಶ್‌ ಮೂಲಕ ಉಪ ಅರಣ್ಯಾಧಿಕಾರಿ ಸುರೇಂದ್ರನನ್ನು ಸಂಪರ್ಕಿಸಿ ಪೊಲೀಸರ ಸೋಗಿನಲ್ಲಿ ಉದ್ಯಮಿ ಮನೋಹರ್‌ ಅವರ ಮನೆ ನುಗ್ಗಿ ದರೋಡೆ ಮಾಡಲು ಸಂಚು ರೂಪಿಸಿದ್ದರು. ಆರೋಪಿ ಸುರೇಶ್‌ ತನಗೆ ಪರಿಚಯವಿದ್ದ ಕೆ.ಜಿ.ಹಳ್ಳಿಯ ರೌಡಿಗಳು ಸೇರಿ ಐವರನ್ನು ಈ ದರೋಡೆಗೆ ಸಾಥ್‌ ನೀಡುವಂತೆ ಕೇಳಿಕೊಂಡಿದ್ದ.

ಖಾಕಿ ಸಮವಸ್ತ್ರದಲ್ಲಿ ಮನೆಗೆ ಎಂಟ್ರಿ

ಪೂರ್ವ ಸಂಚಿನಂತೆ ಉಪ ಅರಣ್ಯಾಧಿಕಾರಿ ಸುರೇಂದ್ರ ಖಾಕಿ ಸಮವಸ್ತ್ರದಲ್ಲಿ ಡಿ.4ರ ಸಂಜೆ ಉದ್ಯಮಿ ಮನೋಹರ್‌ ಮನೆಗೆ ಬಂದು ಮನೆಯ ಕಾಲಿಂಗ್‌ ಬೆಲ್‌ ಒತ್ತಿದ್ದಾನೆ. ಮನೆಯಲ್ಲಿದ್ದ ಉದ್ಯಮಿ ಪುತ್ರ ರೂಪೇಶ್‌ ಹಾಗೂ ಆತನ ತಾಯಿ ಸುಜಾತಾ ಅವರು ಕಿಟಿಕಿಯಲ್ಲಿ ನೋಡಿದಾಗ ಪೊಲೀಸ್‌ ಸಮವಸ್ತ್ರದಲ್ಲಿ ಸುರೇಂದ್ರ ಹೊರಗೆ ನಿಂತಿರುವುದು ಕಂಡು ಬಂದಿದೆ. ಪೊಲೀಸರೇ ಇರಬೇಕು ಎಂದು ಭಾವಿಸಿ ರೂಪೇಶ್‌, ಬಾಗಿಲು ತೆರೆದಾಗ, ಆರೋಪಿ ಸುರೇಂದ್ರ ಪೊಲೀಸ್‌ ಎಂದು ಪರಿಚಯ ಹೇಳಿಕೊಂಡು ಮನೆ ಪ್ರವೇಶಿಸಿದ್ದಾನೆ.

ಮಾರಕಾಸ್ತ್ರ ಹಿಡಿದು ಒಳಗೆ ನುಗ್ಗಿದರು:

ಇದೇ ಸಮಯದಲ್ಲಿ ಉಳಿದ ಆರೋಪಿಗಳು ಮಾರಕಾಸ್ತ್ರ ಹಿಡಿದು ಮನೆಗೆ ನುಗ್ಗಿ ರೂಪೇಶ್‌ ಹಾಗೂ ಆತನ ತಾಯಿಗೆ ಬೆದರಿಸಿದ್ದಾರೆ. ಬಳಿಕ ಇಬ್ಬರ ಕೈ-ಕಾಲುಗಳಿಗೆ ಟೇಪ್‌ ಸುತ್ತಿ ರೂಮ್‌ನಲ್ಲಿ ಕೂಡಿ ಹಾಕಿದ್ದಾರೆ. ಬಳಿಕ ಮನೆಯಲ್ಲಿದ್ದ ₹60 ಲಕ್ಷ ನಗದು ಹಾಗೂ 500 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿದ್ದರು.

ಕಾರಿನ ಸುಳಿವು

ಪ್ರಕರಣ ದಾಖಲಾದ ಬೆನ್ನಲ್ಲೇ ಪೊಲೀಸರು ಉದ್ಯಮಿ ಮನೆ ಹಾಗೂ ಸುತ್ತಮುತ್ತಲ ಕಟ್ಟಡಗಳ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಸಂಗ್ರಹಿಸಿ ಪರಿಶೀಲಿಸಿದಾಗ ದುಷ್ಕರ್ಮಿಗಳು ಬಂದಿದ್ದ ಕಾರೊಂದರ ಸುಳಿವು ಲಭ್ಯವಾಗಿದೆ. ಈ ಸುಳಿವು ಆಧರಿಸಿ ತನಿಖೆ ಮಂದುವರೆಸಿದಾಗ ಆ ಕಾರು ಕುಣಿಗಲ್‌ ಟೋಲ್‌ ದಾಟಿರುವುದು ಕಂಡು ಬಂದಿತ್ತು.

ದುಬೈ ಚಿನ್ನದ ಆಸೆ ತೋರಿಸಿ 60 ಲಕ್ಷ ದೋಚಿದ್ದ  ಐವರು ಆರೋಪಿಗಳು ಅರೆಸ್ಟ್

ಅರಣ್ಯಾಧಿಕಾರಿ ಮೊಬೈಲ್‌ ಸಕ್ರಿಯ

ಘಟನಾ ಸ್ಥಳದ ಮೊಬೈಲ್‌ ಟವರ್‌ ಡಂಪ್‌ ಮಾಡಿ ಪರಿಶೀಲನೆ ಮಾಡಿದಾಗ ಅರಣ್ಯಾಧಿಕಾರಿ ಸುರೇಂದ್ರನ ಮೊಬೈಲ್‌ ಸಂಖ್ಯೆ ಮಾತ್ರ ಸಕ್ರಿಯವಾಗಿರುವುದು ಕಂಡು ಬಂದಿದೆ. ಸಿಡಿಆರ್‌ ಪರಿಶೀಲಿಸಿದಾಗ ಸುರೇಂದ್ರನ ಜತೆಗೆ ಶ್ರೀಧರ್‌ ಮತ್ತು ವಸಂತ್‌ ಸಂಪರ್ಕದಲ್ಲಿ ಇರುವುದು ತಿಳಿದು ಬಂದಿದೆ. ಈ ಸುಳಿವಿನ ಮೇರೆಗೆ ತನಿಖೆ ಮುಂದುವರೆಸಿದಾಗ ಆರೋಪಿಗಳು ಚಿತ್ರದುರ್ಗ, ಕೊಡೈಕೆನಾಲ್‌ನಲ್ಲಿ ತಲೆಮರೆಸಿಕೊಂಡಿರುವುದು ಗೊತ್ತಾಗಿದೆ. ಬಳಿಕ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅರಣ್ಯಾಧಿಕಾರಿಗೆ ಜೂಜಿನ ಚಟ

ಆರೋಪಿ ಅರಣ್ಯಾಧಿಕಾರಿ ಸುರೇಂದ್ರ ಜೂಜಾಟದ ಚಟಕ್ಕೆ ಬಿದ್ದು ಸಾಕಷ್ಟು ಸಾಲ ಮಾಡಿಕೊಂಡಿದ್ದ. ಈ ವಿಚಾರ ತಿಳಿದಿದ್ದ ಆರೋಪಿಗಳು ಸುರೇಂದ್ರಗೆ ಹಣದಾಸೆ ತೋರಿಸಿ ದರೋಡೆಗೆ ಒಪ್ಪಿಸಿದ್ದರು. ಕೆಲಸ ಸುಲಭವಾಗಿಸಲು ಖಾಕಿ ಸಮವಸ್ತ್ರದಲ್ಲೇ ಬರುವಂತೆ ಸೂಚಿಸಿದ್ದರು ಎಂಬುದು ತನಿಖೆಯಿಂದ ತಿಳಿದು ಬಂದಿದೆ.

click me!