ಇಯರ್‌ ಫೋನ್‌ ಖರೀದಿಸೋಕೆ ಬಂದು ಅಂಗಡಿಯನ್ನೇ ಸುಲಿಗೆ ಮಾಡಿದ್ರು

By Kannadaprabha NewsFirst Published Jan 3, 2021, 7:29 AM IST
Highlights

ಇಯರ್‌ ಫೋನ್‌ ಖರೀದಿ ನೆಪದಲ್ಲಿ ಸುಲಿಗೆ: ಬಂಧನ | ರೌಡಿಯಿಂದ 13 ಲಕ್ಷ ಮೌಲ್ಯದ 255 ಗ್ರಾಂ ಚಿನ್ನಾಭರಣ ವಶ

ಬೆಂಗಳೂರು(ಜ.03): ಇಯರ್‌ ಪೋನ್‌ ಕೊಳ್ಳುವ ನೆಪದಲ್ಲಿ ಮೊಬೈಲ್‌ ಅಂಗಡಿಗೆ ತೆರಳಿ ನೌಕರನಿಗೆ ಮಾರಕಾಸ್ತ್ರದಿಂದ ಬೆದರಿಸಿ ಸುಲಿಗೆ ಮಾಡಿದ್ದ ರೌಡಿಯೊಬ್ಬನನ್ನು ಉಪ್ಪಾರಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಜೆ.ಜೆ.ನಗರದ ತೌಫಿಕ್‌ ಪಾಷ ಬಂಧಿತನಾಗಿದ್ದು, .13.15 ಲಕ್ಷ ಮೌಲ್ಯದ 255 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ. ಈ ಕೃತ್ಯದಲ್ಲಿ ತಲೆಮರೆಸಿಕೊಂಡಿರುವ ಆತನ ಸಹಚರರಾದ ಸಂತೋಷ್‌ ಹಾಗೂ ಅರ್ಷದ್‌ ಪತ್ತೆಗೆ ತನಿಖೆ ನಡೆದಿದೆ. ಕೆಲ ದಿನಗಳ ಹಿಂದೆ ಗಾಂಧಿನಗರದ 5ನೇ ಮುಖ್ಯರಸ್ತೆಯಲ್ಲಿ ಹಾಂಕಾಂಗ್‌ ಬಜಾರ್‌ನಲ್ಲಿರುವ ಅಂಗಡಿಗೆ ಇಯರ್‌ ಪೋನ್‌ ಖರೀದಿಗಾಗಿ ತೆರಳಿದ್ದ.

ಉತ್ತರಪ್ರದೇಶದಿಂದ ಕಾರಲ್ಲಿ ಬಂದ ಕಳ್ಳರು: ಬೆಂಗ್ಳೂರು ಮನೆಗಳಲ್ಲಿ ಕಳ್ಳತನ

ಆ ವೇಳೆ ಅಂಗಡಿಯಲ್ಲಿದ್ದ ನೌಕರ, ಇಯರ್‌ ಫೋನ್‌ ಖಾಲಿಯಾಗಿದೆ ಎಂದು ಹೇಳುತ್ತಿದ್ದಂತೆ ಜಗಳ ತೆಗೆದಿದ್ದಾನೆ. ಬಳಿಕ ಜರ್ಕಿನ್‌ನಲ್ಲಿ ಅಡಗಿಸಿಕೊಂಡಿದ್ದ ಮಚ್ಚು ತೆಗೆದು ತೋರಿಸಿದ ತೌಫಿಕ್‌, ನೌಕರನ ಬ್ಲೂಟೂತ್‌ ಕಿತ್ತುಕೊಂಡು ಪರಾರಿಯಾಗಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಈ ಕೃತ್ಯದ ಸಂಬಂಧ ಸಿಸಿಟಿವಿ ಹಾಗೂ ಮೊಬೈಲ್‌ ಕರೆಗಳ ಮಾಹಿತಿ ಆಧರಿಸಿ ಆರೋಪಿಯನ್ನು ಬಂಧಿಸಲಾಯಿತು. ತೌಫಿಕ್‌ ವೃತ್ತಿಪರ ಕ್ರಿಮಿನಲ್‌ ಆಗಿದ್ದು, ಆತನ ವಿರುದ್ಧ ಆಡುಗೋಡಿ ಠಾಣೆಯಲ್ಲಿ ಕೊಲೆ ಪ್ರಕರಣ ಸೇರಿದಂತೆ ನಗರದ ವಿವಿಧ ಠಾಣೆಗಳಲ್ಲಿ ಹಲವು ಪ್ರಕರಣಗಳು ದಾಖಲಾಗಿವೆ. ಈ ಕ್ರಿಮಿನಲ್‌ ಚರಿತ್ರೆ ಹಿನ್ನೆಲೆಯಲ್ಲಿ ಆತನ ಮೇಲೆ ಆಡುಗೋಡಿ ಠಾಣೆಯಲ್ಲಿ ರೌಡಿಪಟ್ಟಿಸಹ ತೆರೆಯಲಾಗಿದೆ.

ಅತ್ತ ಗಂಡನ ಕಿರುಕುಳ, ಇತ್ತ ಪಾಗಲ್ ಪ್ರೇಮಿ ಕಾಟ: ಬೆಳ್ಳಂ ಬೆಳಗ್ಗೆ ಮಾರಣ ಹೋಮ!

ತನ್ನ ಸಹಚರರ ಜತೆ ಸರಗಳ್ಳತನ ಹಾಗೂ ಮನೆಗಳ್ಳತನ ಕೃತ್ಯಗಳಲ್ಲೂ ಆತ ಪಾಲ್ಗೊಂಡಿದ್ದಾನೆ. ಈಗ ತೌಫಿಕ್‌ ಬಂಧನದಿಂದ ಕೆ.ಪಿ.ಅಗ್ರಹಾರ, ಬ್ಯಾಟರಾಯನಪುರ, ಜ್ಞಾನಭಾರತಿ, ಉಪ್ಪಾರಪೇಟೆ, ಹಾಗೂ ರಾಜರಾಜೇಶ್ವರಿ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಸರಗಳ್ಳತನ ನಡೆದಿದ್ದ ಕೃತ್ಯಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ. ಇನ್‌ಸ್ಪೆಕ್ಟರ್‌ ಶಿವಸ್ವಾಮಿ ನೇತೃತ್ವದ ತಂಡ ಪ್ರಕರಣ ಬೇಧಿಸಿದೆ.

click me!