ಕೊಲೆ ಆರೋಪಿ ದರ್ಶನ್ ಜೈಲಿನಲ್ಲಿ ರಾಜಾತಿಥ್ಯ ಅನುಭವಿಸುತ್ತಿದ್ದಾರೆ ಎಂದು ರೇಣುಕಾಸ್ವಾಮಿ ತಂದೆ ಕಾಶೀನಾಥಯ್ಯ ಶಿವನಗೌಡ್ರು ಆರೋಪಿಸಿದ್ದಾರೆ.
ಚಿತ್ರದುರ್ಗ (ಆ.25): ನನ್ನ ಮಗ ರೇಣುಕಾಸ್ವಾಮಿಯನ್ನು ಕೊಲೆ ಮಾಡಿದ ದರ್ಶನ್ ಜೈಲಿನಲ್ಲಿದ್ದಾರೋ ಇಲ್ಲ ಹೊರಗೆ ರೆಸಾರ್ಟ್‌ನಲ್ಲಿದ್ದಾರೋ ಗೊತ್ತಾಗುತ್ತಿಲ್ಲ. ಕೊಲೆ ಮಾಡಿದ ತಪ್ಪು ಭಾವನೆ ಅವರ ಮುಖದಲ್ಲಿ ಕಾಣುತ್ತಿಲ್ಲ. ಸಾಮಾನ್ಯ ಕೈದಿಯಂತೆ ಶಿಕ್ಷೆ ಅನುಭವಿಸಿದೇ ರೆಸಾರ್ಟ್‌ನಲ್ಲಿ ಕುಳಿತಂತೆ ಕುಳಿತಿರುವ ಆರೋಪಿಯನ್ನು ಕಂಡು ನನಗೆ ಶಾಕ್ ಆಗಿದೆ ಎಂದು ರೇಣುಕಾಸ್ವಾಮಿ ತಂದೆ ಕಾಶೀನಾಥಯ್ಯ ಶಿವನಗೌಡ್ರು ಕಣ್ಣೀರಿಟ್ಟಿದ್ದಾರೆ.
ಬೆಂಗಳೂರಿನ ನಟೋರಿಯಸ್ ರೌಡಿ ವಿಲ್ಸನ್ ಗಾರ್ಡನ್ ನಾಗ ಹಾಗೂ ಕುಳ್ಳ ಸೀನನೊಂದಿಗೆ ಜೈಲಿನ ಆವರಣದಲ್ಲಿ ರೇಣುಕಾಸ್ವಾಮಿ ಕೊಲೆ ಆರೋಪಿ ದರ್ಶನ್ ಚೇರಿನಲ್ಲಿ ಕುಳಿತುಕೊಂಡು, ದೊಡ್ಡ ಮಗ್‌ನಲ್ಲಿ ಕಾಫಿ ಹೀರುತ್ತಾ, ಸಿಗರೇಟ್ ಸೇದುತ್ತಾ ಮಜಾ ಮಾಡುತ್ತಿದ್ದಾನೆ. ಈ ದೃಶ್ಯವನ್ನು ನೋಡಿದ ರೇಣುಕಾಸ್ವಾಮಿ ತಂದೆಗೆ ಒಮ್ಮೆಲೆ ಶಾಕ್ ಆಗಿದೆ. ಇದ್ದೊಬ್ಬ ಮಗನನ್ನು ಕೊಲೆ ಮಾಡಿ ಜೈಲಿನಲ್ಲಿಯೂ ಶಿಕ್ಷೆ ಅನುಭವಿಸದೇ ರಾಜಾತಿಥ್ಯದಿಂದ ಮೆರೆಯುವುದನ್ನು ನೋಡಿ, ಮಗನನ್ನು ಕಳೆದುಕೊಂಡ ನೋವು ಉಮ್ಮಳಿಸಿದೆ. ಇದರಿಂದ ಮಾಧ್ಯಮಗಳ ಕ್ಯಾಮೆರಾಗಳನ್ನು ನೋಡುತ್ತಿದ್ದಂತೆಯೇ ದುಃಖ ತಡೆಯಲಾಗದೇ ಕಣ್ಣೀರಿಟ್ಟಿದ್ದಾರೆ.
undefined
ನಟ ದರ್ಶನ್ ಜೈಲಿನಿಂದಲೇ ವಿಡಿಯೋ ಕಾಲ್: ಐಷಾರಾಮಿ ಜೀವನಕ್ಕೆ ಮತ್ತಷ್ಟು ಸಾಕ್ಷಿ!
ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ರೇಣುಕಾಸ್ವಾಮಿ ತಂದೆ ಕಾಶೀನಾಥಯ್ಯ ಶಿವನಗೌಡ ಅವರು, ಕೊಲೆ ಆರೋಪಿ ದರ್ಶನ್ ಜೈಲಿನಲ್ಲಿದ್ದಾರೋ ಇಲ್ಲವೋ ಎಂಬ ಭಾವನೆ ಬರುತ್ತಿದೆ. ಸಾಮಾನ್ಯ ಖೈದಿಯಂತೆ ನಟ ದರ್ಶನ್ ಸಹ ಇರಬೇಕು. ಆದರೆ, ರೆಸಾರ್ಟ್ ನಲ್ಲಿ ಕುಳಿತಂತೆ ನಟ ದರ್ಶನ್ ಕುಳಿತಿರುವುದು ಕಂಡು ಶಾಕ್ ಆಗಿದ್ದೇನೆ. ಪೊಲೀಸ್ ತನಿಖೆ, ನ್ಯಾಯಾಂಗ ಬಗ್ಗೆ ನಮಗೆ ಈವರೆಗೆ ನಂಬಿಕೆಯಿದೆ. ತಪ್ಪಿತಸ್ಥರಿಗೆ ತಕ್ಕ ಶಿಕ್ಷೆ ಆಗಬೇಕು. ಅದೇ ರೀತಿ ನಟ ದರ್ಶನ್‌ಗೂ ಇದೇ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಇನ್ನು ಜೈಲಿನಲ್ಲಿ ರಾಜಾತಿಥ್ಯ ವ್ಯವಸ್ಥೆ ಕಲ್ಪಿಸಿದವರಿಗೆ ಶಿಕ್ಷೆ ಆಗಬೇಕು. ನಾವು ಸರ್ಕಾರವನ್ನು ನಂಬಿದ್ದೇವೆ. ಅದೇ ರೀತಿ ಜನರು ಕೂಡ ಸರ್ಕಾರದ ಮೇಲೆ ನಂಬಿಕೆ ಇಟ್ಟುಕೊಂಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಮಂತ್ರಿ ಪರಮೇಶ್ವರ ಅವರು ಈ ಬಗ್ಗೆ ಗಮನಹರಿಸಬೇಕು. ನನ್ನ ಮಗನನ್ನು ಕಳೆದುಕೊಂಡು ಇಡೀ ಕುಟುಂಬಸ್ಥರು ಕಣ್ಣೀರಲ್ಲಿ ಕೈತೊಳೆಯುತ್ತಿದ್ದೇವೆ. ಆರೋಪಿ ಜೈಲಿನಲ್ಲಿ ಚೈನಿ ಹೊಡೆಯುತ್ತಿದ್ದಾರೆ. ನಮಗೆ ನೋವು, ಸಂಕಟ ಆಗುತ್ತಿದೆ ಎಂದು ನೋವು ತೋಡಿಕೊಂಡರು.
ಜೈಲಲ್ಲಿರೋ ದರ್ಶನ್‌ಗೆ ರಾಜಾತಿಥ್ಯ ಕೊಡೋ ವಿಲ್ಸನ್ ಗಾರ್ಡನ್ ನಾಗ ಯಾರು? ಈತನ ಕ್ರೈಂ ಹಿಸ್ಟರಿ ಗೊತ್ತಾ.!
ಕೊಲೆ ಕೇಸಿನ ಬಗ್ಗೆ ಸರ್ಕಾರದಿಂದ ಹಾಗೂ ಪೊಲೀಸರು ಸರಿಯಾದ ತನಿಖೆ ಮಾಡಿ ಸೂಕ್ತ ಕ್ರಮ ಕೈಗೊಳ್ಳಬೇಕು. ಆದರೆ, ಇಲ್ಲಿ ಆರೋಪಿ ಚೈನಿ ಮಾಡುತ್ತಿರುವುದನ್ನು ನೋಡಿದರೆ ಈ ಕೇಸನ್ನು ಸಿಬಿಐ ತನಿಖೆಗೆ ವಹಸಿಬೇಕೆಂದು ಅನಿಸುತ್ತದೆ. ಈವರೆಗೆ ಸರ್ಕಾರದಿಂದ ಉತ್ತಮ ರೀತಿ ತನಿಖೆ ನಡೆದಿದೆ. ಆದರೆ, ಇಲ್ಲಿ ನನ್ನ ಮಗನನ್ನು ಕೊಲೆ ಮಾಡಿದ ದರ್ಶನ್‌ಗೆ ತಪ್ಪು ಮಾಡಿದ ಭಾವನೆ ಇದ್ದಂತೆ ಕಾಣುತ್ತಿಲ್ಲ ಎಂದು ರೇಣುಕಾಸ್ವಾಮಿ ತಂದೆ ಶಿವನಗೌಡರ ಆಕ್ರೋಶ ವ್ಯಕ್ತಪಡಿಸಿದರು.
ರೇಣುಕಾಸ್ವಾಮಿ ಚಿಕ್ಕಪ್ಪ ಷಡಕ್ಷರಿ ಅವರು ಮಾತನಾಡಿ, ನಟ ದರ್ಶನ್ ಜೈಲಿನಲ್ಲಿ ಕಾಫಿ, ಸಿಗರೇಟ್ ವ್ಯವಸ್ಥೆ ಮಾಡಿರುವುದು ಮಾಧ್ಯಮಗಳ ಮೂಲಕ ತಿಳಿಯಿತು. ನಾವು ಸರಿಯಾದ ದಿಕ್ಕಿನಲ್ಲಿ ತನಿಖೆ ನಡೆಯುತ್ತಿದೆ ಎಂದು ಭಾವಿಸಿದ್ದೆವು. ಯಾಕೆ ಈ ರೀತಿ ಆಗುತ್ತಿದೆ ಎಂಬ ಅನುಮಾನ ಮೂಡಿದೆ. ಸರ್ಕಾರದ ಮೇಲೆ ನಮಗೆ ಇನ್ನೂ ನಂಬಿಕೆಯಿದೆ. ನ್ಯಾಯ ಸಿಗುತ್ತದೆ ಎಂಬ ನಂಬಿಕೆ ನಮ್ಮಲ್ಲಿದೆ. ಜೈಲಿನಲ್ಲಿ ನಟ ದರ್ಶನ್ ಗೆ ಸಕಲ ವ್ಯವಸ್ಥೆ ಕಲ್ಪಿಸಿದ್ದ ಬಗ್ಗೆ ತನಿಖೆ ಆಗಲಿ. ಈ ರೀತಿಯ ಘಟನೆಗಳು ಮರುಕಳಿಸದಿರಲಿ. ನಟ ದರ್ಶನ್ ಗೆ ಸಿಗರೇಟ್ ನೀಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.