
ವೈದ್ಯೋ ನಾರಾಯಣೋ ಹರಿಃ ಎನ್ನುತ್ತಾರೆ. ಜೀವವನ್ನು ಕಾಪಾಡುವ ವೈದ್ಯ ದೇವರಿಗೆ ಸಮ ಎನ್ನುವುದು. ಆದರೆ ಇಂದು ಹಲವು ಕಡೆಗಳಲ್ಲಿ, ರೋಗಿಗಳ ಪ್ರಾಣ ತೆಗೆಯುವ, ದುಡ್ಡಿಗಾಗಿ ಏನೂ ಮಾಡಲು ಹೇಸದ, ಸ್ವಲ್ಪ ದುಡ್ಡು ಉಳಿಸಿಕೊಂಡರೆ ಹೆಣವನ್ನೂ ನೀಡದ, ರೋಗಿ ಸತ್ತಿರುವುದು ತಿಳಿದರೂ ದುಡ್ಡಿನ ಹಪಾಹಪಿಗಾಗಿ ಐಸಿಯುವಿನಲ್ಲಿ ಜೀವರಕ್ಷಕ ಅಳವಡಿಸಿ ಇಟ್ಟಿರುವುದಾಗಿ ಸುಳ್ಳು ಹೇಳುತ್ತಾ ಹಣ ಪೀಕುವ ವೈದ್ಯರೂ ಸಿಗುತ್ತಿರುವುದು ದೊಡ್ಡ ದುರಂತ. ಆದರೆ ಎಲ್ಲರೂ ಹಾಗಲ್ಲವಲ್ಲ. ರೋಗಿಗಳ ಪ್ರಾಣ ಕಾಪಾಡಲು ತಮ್ಮ ಜೀವವನ್ನೇ ಮುಡುಪಾಗಿಟ್ಟಿರುವ ವೈದ್ಯರೂ ಇದ್ದಾರೆ. ಇಂಥವರನ್ನೇ ದೇವರು ಎಂದು ಕರೆದಿರುವುದು. ರೋಗಿಗಳಿಗೆ ಶಸ್ತ್ರಚಿಕಿತ್ಸೆ ಮಾಡಲು ಸಾಧ್ಯವಾಗುತ್ತಿಲ್ಲವೆಂದು ನೊಂದು ವಿಶ್ವಖ್ಯಾತಿಯ ವೈದ್ಯರೊಬ್ಬರು ತಮ್ಮ ಪ್ರಾಣವನ್ನೇ ತೆಗೆದುಕೊಂಡಿರುವ ಆಘಾತಕಾಗಿ ಘಟನೆಯೊಂದು ಕೇರಳದಲ್ಲಿ ನಡೆದಿದೆ.
ಕೇರಳದ ಎರ್ನಾಕುಲಂನ ತುರುತಿಸ್ಸೆರಿಯಲ್ಲಿ ಈ ಘಟನೆ ನಡೆದಿದೆ. 74 ವಯಸ್ಸಿನ ಹಿರಿಯ ಮೂತ್ರಪಿಂಡಶಾಸ್ತ್ರಜ್ಞ ಮತ್ತು ಶಸ್ತ್ರಚಿಕಿತ್ಸಕ ಜಾರ್ಜ್ ಪಿ. ಅಬ್ರಹಾಂ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ. ತಮ್ಮ ತೋಟದ ಮನೆಯಲ್ಲಿ ಅವರು ಈ ಕೃತ್ಯ ಮಾಡಿಕೊಂಡಿದ್ದಾರೆ. ಅವರ ದೇಹ ಪತ್ತೆಯಾದ ಬಳಿಕ, ಎಲ್ಲರಿಗೂ ಅಚ್ಚರಿಯಾಗಿತ್ತು. ಇಂಥದ್ದೊಂದು ಭಯಾನಕ ಕ್ರಮವನ್ನು ಅವರು ಯಾಕೆ ತೆಗೆದುಕೊಂಡರು ಎನ್ನುವುದೇ ಎಲ್ಲರಿಗೂ ತಿಳಿಯದ ವಿಷಯವಾಗಿತ್ತು. ಪೊಲೀಸರು ಅಸ್ವಾಭಾವಿಕ ಸಾವು ಪ್ರಕರಣ ಎಂದು ದಾಖಲಿಸಿಕೊಂಡು ತನಿಖೆ ನಡೆಸಿದ್ದರು.
ಕೊನೆಗೆ ತಿಳಿದುಬಂದುದು ಮಾತ್ರ ನೋವಿನ ಸಂಗತಿಯೇ. ಸುಮಾರು ಆರು ತಿಂಗಳ ಹಿಂದೆ ಈ ವೈದ್ಯರಿಗೆ ಬೆನ್ನಿನ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಇದರಿಂದ ಅವರು ಶಸ್ತ್ರಚಿಕಿತ್ಸೆ ಮಾಡುವಾಗ ಕೈ ನಡುಗುತ್ತಿತ್ತು. ಇದರಿಂದ ರೋಗಿಗಳಿಗೆ ಚಿಕಿತ್ಸೆ ನೀಡಲು ಸಾಧ್ಯವಾಗಲಿಲ್ಲ. ಅ ವಯಸ್ಸಿನಲ್ಲಿಯೂ ಹಲವಾರು ಯಶಸ್ವಿ ಚಿಕಿತ್ಸೆ ನೀಡಿ ತಮ್ಮ ಜೀವನವನ್ನೇ ಇದಕ್ಕೆ ಮುಡುಪಾಗಿಟ್ಟಿದ್ದ ಜಾರ್ಜ್ ಪಿ. ಅಬ್ರಹಾಂ ಅವರು, ಹಿಂದಿನಂತೆಯೇ ವೈದ್ಯಕೀಯ ವೃತ್ತಿಯನ್ನು ಮುಂದುವರಿಸಲು ಸಾಧ್ಯವಾಗದ ಕಾರಣದಿಂದ ತಾವು ಹೀಗೆ ಮಾಡಿಕೊಳ್ಳುತ್ತಿರುವುದಾಗಿ ಪತ್ರ ಬರೆದಿದ್ದಾರೆ. ಕೈಯಲ್ಲಿ ನಡುಕ ಕಾಣಿಸಿಕೊಂಡಿದ್ದು, ಇದು ಶಸ್ತ್ರಚಿಕಿತ್ಸಕರಾಗಿ ವೃತ್ತಿಯ ಮೇಲೂ ಪ್ರತಿಕೂಲ ಪರಿಣಾಮ ಬೀರಿರುವ ಕಾರಣ ಸಾವೇ ತಮಗೆ ಮೇಲು ಎಂದು ಬಗೆದಿದ್ದಾರೆ.
ಅವರು ವಾರಾಂತ್ಯದಲ್ಲಿ ಆಗಾಗ್ಗೆ ತೋಟದ ಮನೆಗೆ ಹೋಗುತ್ತಿದ್ದರು. ಮೊನ್ನೆ ಕೂಡ ಹಾಗೆಯೇ ಮಾಡಿದ್ದಾರೆ. ಅವರು ಎಷ್ಟು ಹೊತ್ತಾದರೂ ಮನೆಗೆ ವಾಪಸಾಗದ್ದರಿಂದ ಎಲ್ಲೆಡೆ ಹುಡುಕಾಟ ನಡೆದಿತ್ತು. ಬಳಿಕ ಮೊಬೈಲ್ ಫೋನ್ ಮೂಲಕ ಸ್ಥಳ ಪತ್ತೆಹಚ್ಚಿದಾಗ ತೋಟದ ಮನೆಯಲ್ಲಿರುವುದು ತಿಳಿಯಿತು. ಅಲ್ಲಿಗೆ ಹೋಗಿ ನೋಡುವಷ್ಟರಲ್ಲಿ ಈ ದುರ್ಘಟನೆ ನಡೆದಿದೆ. ಒಬ್ಬ ಪ್ರಸಿದ್ಧ ವೈದ್ಯರಾಗಿದ್ದ ಅವರು ಸುಮಾರು 25 ವರ್ಷಗಳ ವೃತ್ತಿಜೀವನದಲ್ಲಿ ಎರಡು ಸಾವಿರಕ್ಕೂ ಹೆಚ್ಚು ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆಗಳು ಮತ್ತು ಇನ್ನೂ ಅನೇಕ ಲ್ಯಾಪರೊಸ್ಕೋಪಿಕ್ ಮೂತ್ರಶಾಸ್ತ್ರೀಯ ಶಸ್ತ್ರಚಿಕಿತ್ಸೆಗಳನ್ನು ಮಾಡಿದ್ದಾರೆ. ಬದುಕಿನುದ್ದಕ್ಕೂ ಇದೇ ವೃತ್ತಿಯಲ್ಲಿ ಮುಂದುವರೆಯಬೇಕು ಎನ್ನುವ ಅವರ ಕನಸಿಗೆ ಬೆನ್ನಿನ ಶಸ್ತ್ರಚಿಕಿತ್ಸೆ ಮುಳುವಾಗಿಬಿಟ್ಟಿತು. ಓರ್ವ ವೈದ್ಯರಾಗಿ, ಶಸ್ತ್ರಚಿಕಿತ್ಸೆಯಿಂದಲೇ ಅವರಿಗೆ ಈ ಪರಿಯ ಸಾವು ಬಂದಿರುವುದು ಮಾತ್ರ ವಿಪರ್ಯಾಸ.
ಮೊದಲ ರಾತ್ರಿಯ ಬಳಿಕ ವಧುವಿಗೆ ಹೀಗೊಂದು ಪರೀಕ್ಷೆ: ಥೂ.. ಎಂಥ ಅಸಹ್ಯ ಪದ್ಧತಿ ಇದು? ಶಾಕಿಂಗ್ ವಿಡಿಯೋ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ