ಬೆಂಗಳೂರು: ದಂತ ಕಳ್ಳತನವಾಗಿದ್ದ ಮೃತ ಆನೆಯ ಅವಶೇಷ ಪತ್ತೆ

By Kannadaprabha NewsFirst Published Jun 3, 2023, 6:14 AM IST
Highlights

ಕನಕಪುರ ತಾಲೂಕಿನ ಅರಣ್ಯ ಪ್ರದೇಶದಲ್ಲಿ ತಾವು ದಂತ ದೋಚಿದ್ದ ಆನೆಯ ಅಸ್ಥಿಪಂಜರವನ್ನು ಆರೋಪಿಗಳು ತೋರಿಸಿದರು. ಘಟನಾ ಸ್ಥಳದಲ್ಲಿ ಪರಿಶೀಲಿಸಿದಾಗ ಆನೆಯ ಮೂಳೆಗಳು ಹಾಗೂ ತಲೆಬುರಡೆ ಪತ್ತೆಯಾಗಿವೆ. ಇವುಗಳನ್ನು ಅರಣ್ಯ ಇಲಾಖೆಯ ಅಧಿಕಾರಿಗಳ ಸಹಕಾರದಲ್ಲಿ ತಪಾಸಣೆ ನಡೆಸಿದಾಗ ಮೃತಪಟ್ಟ ಆನೆ ವಯಸ್ಸು 25ರಿಂದ 26 ವರ್ಷವಾಗಿರಬಹುದು ಎಂದು ಅಂದಾಜಿಸಲಾಗಿದೆ

ಬೆಂಗಳೂರು(ಜೂ.03):  ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಕೋಡಿಹಳ್ಳಿ ಸಮೀಪದ ಬೆಟ್ಟದಲಸೂರಿನ ಅರಣ್ಯ ಪ್ರದೇಶದಲ್ಲಿ ದಂತ ಕಳ್ಳತನವಾಗಿದ್ದ ಮೃತ ಆನೆಯ ಅವಶೇಷಗಳನ್ನು ಗಿರಿನಗರ ಠಾಣೆ ಪೊಲೀಸರು ಶುಕ್ರವಾರ ಪತ್ತೆ ಹಚ್ಚಿದ್ದಾರೆ.

ಕನಕಪುರ ತಾಲೂಕಿನ ಅರಣ್ಯ ಪ್ರದೇಶದಲ್ಲಿ ತಾವು ದಂತ ದೋಚಿದ್ದ ಆನೆಯ ಅಸ್ಥಿಪಂಜರವನ್ನು ಆರೋಪಿಗಳು ತೋರಿಸಿದರು. ಘಟನಾ ಸ್ಥಳದಲ್ಲಿ ಪರಿಶೀಲಿಸಿದಾಗ ಆನೆಯ ಮೂಳೆಗಳು ಹಾಗೂ ತಲೆಬುರಡೆ ಪತ್ತೆಯಾಗಿವೆ. ಇವುಗಳನ್ನು ಅರಣ್ಯ ಇಲಾಖೆಯ ಅಧಿಕಾರಿಗಳ ಸಹಕಾರದಲ್ಲಿ ತಪಾಸಣೆ ನಡೆಸಿದಾಗ ಮೃತಪಟ್ಟ ಆನೆ ವಯಸ್ಸು 25ರಿಂದ 26 ವರ್ಷವಾಗಿರಬಹುದು ಎಂದು ಅಂದಾಜಿಸಲಾಗಿದೆ. ಹತ್ತು ದಿನಗಳ ಹಿಂದೆ ಆನೆ ಸಾವನ್ನಪ್ಪಿರುವುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೆಂಗ್ಳೂರಲ್ಲಿ ಆನೆ ದಂತ ಮಾರಾಟಕ್ಕೆ ಯತ್ನ, ಇಬ್ಬರ ಬಂಧನ

ಆದರೆ ಆನೆಯ ಸಾವು ಹೇಗಾಗಿದೆ ಎಂಬುದು ಖಚಿತವಾಗಿಲ್ಲ. ಆರೋಪಿಗಳು ತಾವು ಬೇಟೆಗೆ ಹೋದಾಗ ಆನೆ ಸತ್ತು ಬಿದ್ದಿತ್ತು ಎಂದು ಹೇಳಿಕೆ ಕೊಟ್ಟಿದ್ದಾರೆ. ಮೊದಲು ಅರಣ್ಯದಲ್ಲಿ ಆನೆ ಮೃತದೇಹವನ್ನು ಜಾನಿ ಎಂಬಾತ ನೋಡಿ ಇನ್ನುಳಿದ ಆರೋಪಿಗಳಿಗೆ ಹೇಳಿದ್ದಾನೆ. ಹೀಗಾಗಿ ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿಗಳ ಬಂಧನದ ಬಳಿಕ ಆನೆ ಮತ್ತೊಂದು ದಂತದ ಬಗ್ಗೆ ಮಾಹಿತಿ ಸಿಗಲಿದೆ. ಪ್ರಯೋಗಾಲಯಕ್ಕೆ ಮೃತ ಆನೆ ಅವಶೇಷಗಳನ್ನು ಕಳುಹಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇತ್ತೀಚೆಗೆ ಬನಶಂಕರಿ 3ನೇ ಹಂತದಲ್ಲಿ ಆನೆ ದಂತ ಮಾರಾಟಕ್ಕೆ ಯತ್ನಿಸಿದ್ದಾಗ ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಹೇರಿಂದ್ಯಾಪನಹಳ್ಳಿ ಗ್ರಾಮದ ರವಿಕುಮಾರ್‌ ಹಾಗೂ ಹಾರೋಹಳ್ಳಿ ತಾಲೂಕಿನ ಕುಲುಮೆ ಭೀಮಸಂದ್ರದ ನಿವಾಸಿ ಸೋಮಶೇಖರ್‌ ಬಂಧಿತರಾಗಿದ್ದರು. ಆರೋಪಿಗಳಿಂದ 25.5 ಕೇಜಿ ತೂಕದ ಒಂದು ಆನೆ ದಂತ ಜಪ್ತಿ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಆರೋಪಿಗಳನ್ನು ವಶಕ್ಕೆ ಪಡೆದ ಗಿರಿನಗರ ಠಾಣೆ ಸಬ್‌ ಇನ್‌ಸ್ಪೆಕ್ಟರ್‌ ಮನೋಜ್‌ ನೇತೃತ್ವದ ತಂಡವು, ಕನಕಪುರ ತಾಲೂಕಿನ ಅರಣ್ಯಕ್ಕೆ ಆರೋಪಿಗಳು ಮಹಜರ್‌ಗೆ ಕರೆದೊಯ್ದಿದ್ದರು. ಆಗ ಕಾಡಿನಲ್ಲಿ ಮೃತ ಆನೆಯ ಆವಶೇಷಗಳನ್ನು ಆರೋಪಿಗಳು ತೋರಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

click me!