ಬೆಂಗಳೂರಿನ ಕುಂದಲಹಳ್ಳಿಯ ದಿ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣ ಸಂಬಂಧಿಸಿದಂತೆ ಕೆಫೆಗೆ ಬಾಂಬ್ ಇಟ್ಟ ಇಬ್ಬರು ಉಗ್ರರನ್ನು ಬಂಧಿಸಲಾಗಿದೆ.
ಬೆಂಗಳೂರು (ಏ.12): ಬೆಂಗಳೂರಿನ ಕುಂದಲಹಳ್ಳಿಯ ದಿ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣ ಸಂಬಂಧಿಸಿದಂತೆ ಕೆಫೆಗೆ ಬಾಂಬ್ ಇಟ್ಟ ಇಬ್ಬರು ಉಗ್ರರನ್ನು ಬಂಧಿಸಲಾಗಿದೆ. ಮಾರ್ಚ್ 1ರಂದು ನಡೆದಿದ್ದ ಬಾಂಬ್ ಸ್ಫೋಟ ಪ್ರಕರಣದ ಸಂಚಿನಲ್ಲಿ ಶಿವಮೊಗ್ಗ ಐಸಿಸ್ ಮಾಡ್ಯೂಲ್ ಶಂಕಿತ ಉಗ್ರರಾದ ಅಬ್ದುಲ್ ಮತೀನ್ ತಾಹಾ ಹಾಗೂ ಮುಸಾವೀರ್ ಶಾಜಿಬ್ ನನ್ನು ಎನ್‌ಐಎ ಬಂಧಿಸಿದೆ.
ಈ ಬಗ್ಗೆ ಎನ್‌ಐಎ ಹೇಳಿಕೆ ಬಿಡುಗಡೆ ಮಾಡಿದ್ದು, ಉಗ್ರರು ಅಸ್ಸಾಂ, ಪಶ್ಚಿಮ ಬಂಗಾಳದಲ್ಲಿ ತಲೆ ಮರೆಸಿಕೊಂಡಿದ್ದರು. ಇಂದು ಬೆಳಗ್ಗೆ ಬಾಂಬ್ ಇಟ್ಟವರನ್ನು ಎನ್‌ಐಎ ಬಂಧಿಸಿದೆ. ಕೊಲ್ಕಾತ್ತದಲ್ಲಿ ಉಗ್ರ ಅಬ್ದುಲ್ ಮತೀನ್ ತಾಹಾ ಹಾಗೂ ಮುಸಾವಿರ್ ಹುಸೇನ್ ಶಾಜಿಬ್ ಬಂಧನವಾಗಿದೆ. ಮುಸಾವಿರ್ ಹುಸೇನ್ ಶಾಜಿಬ್ ಕೆಫೆಯಲ್ಲಿ ಐಇಡಿ ಇಟ್ಟು ಸ್ಪೋಟಿಸಿದ್ದ, ಅಬ್ದುಲ್ ಮತೀನ್ ತಾಹಾ ಬಾಂಬ್ ಹಿಡಲು ಪ್ಲಾನ್ ಮಾಡಿದ್ದ. ಈ ಪ್ರಕರಣದಲ್ಲಿ ಮತೀನ್ ಮಾಸ್ಟರ್ ಮೈಂಡ್ ಆಗಿ ಕೆಲಸ ಮಾಡಿದ್ದ. ಬಾಂಬ್ ಇಡಲು ಸಂಚು, ಪ್ಲಾನ್ ಎಕ್ಸ್ಯೂಷನ್ , ಬ್ಲಾಸ್ಟ್ ಮಾಡಲು ಎಲ್ಲಾ ರೀತಿ ಪ್ಲಾನ್ ಮಾಡಿದ್ದ.
ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟ: ಆರೋಪಿಗಳ ಸುಳಿವು ಕೊಟ್ಟ ಚಿಕ್ಕಮಗಳೂರಿನ ಮುಜಮಿಲ್ ಶರೀಫನ ಸಿಮ್ ಕಾರ್ಡ್!
ಕೋಲ್ಕಾತ್ತಾದಲ್ಲಿ ಉಗ್ರರು ನಕಲಿ ದಾಖಲೆ ನೀಡಿ ,ಹೆಸರು ಬದಲಿಸಿಕೊಂಡು ವಾಸ್ತವ್ಯ ಹೂಡಿದ್ದರು. ಈ ಕಾರ್ಯಾಚರಣೆಗೆ ಎನ್ ಐಎ ಜೊತೆ ಐಬಿ ,ಪಶ್ಚಿಮ ಬಂಗಾಳ ತೆಲಂಗಾಣ ,ಕರ್ನಾಟಕ ,ಕೇರಳ ಪೊಲೀಸರ ಸಹಕಾರ ನೀಡಿದ್ದರು. ಎಲ್ಲಾ ಏಜೆನ್ಸಿಗಳ ಸಹಾಯದಿಂದ ಉಗ್ರರ ಬಂಧನವಾಗಿದೆ ಎಂದು ಎನ್ ಐಎ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಕೊಲ್ಕಾತಾದ ಹೊರವಲಯದ ಪೂರ್ವ ಮಿಡ್ನಾಪುರ ದಿಘಾ ಎಂಬಲ್ಲಿ ಉಗ್ರರು ಹೆಸರು ಬದಲಿಸಿಕೊಂಡು ವಾಸವಿದ್ದರು. ಇಂದು ಬೆಳಗ್ಗಿನ ಜಾವ 2.30 ರ ಸುಮಾರಿಗೆ ಉಗ್ರರಿದ್ದ ಮನೆ ಮೇಲೆ ದಾಳಿ ನಡೆಸಿದ ಎನ್‌ಐಎ ನಿದ್ದೆಯಲ್ಲಿದ್ದ ಇಬ್ಬರು ಉಗ್ರರನ್ನು ವಶಕ್ಕೆ ಪಡೆದಿದೆ. ಸದ್ಯ ಇಬ್ಬರನ್ನು ಬಂಧಿಸಿದ್ದು, ತೀವ್ರ ವಿಚಾರಣೆ ನಡೆಸಲಾಗುತ್ತಿದೆ.
ಉಗ್ರರನ್ನು ಸ್ಥಳೀಯ ನ್ಯಾಯಾಲಯಕ್ಕೆ ಹಾಜರು ಪಡಿಸಲಿರುವ ಎನ್ ಐಎ ತಂಡ ಬಳಿಕ ಬೆಂಗಳೂರಿಗೆ ಕರೆತರಲಿದೆ. ಇಂದು ಸಂಜೆ 6 ಗಂಟೆಗೆ ದೇವನಹಳ್ಳಿ ಕೆಂಪೇಗೌಡ ಇಂಟರ್ ನ್ಯಾಷನಲ್ ಏರ್ ಪೋರ್ಟ್ ಗೆ ಉಗ್ರರನ್ನು ಎನ್‌ಐಎ ಕರೆತರಲಿದೆ.