* ದೇಶಾದ್ಯಂತ ಸದ್ದು ಮಾಡಿದ್ದ ರಾಜಸ್ಥಾನದಲ್ಲಿ ನಡೆದ ಅಪ್ರಾಪ್ತೆ ಮೇಲಿನ ಗ್ಯಾಂಗ್‌ರೇಪ್
* ಅತ್ಯಾಚಾರ ನಡೆಸಿದ 13 ಮಂದಿಗೆ 20 ವರ್ಷ, ಮೂವರಿಗೆ 4 ವರ್ಷ ಜೈಲು
* ಪೋಕ್ಸೋ ಕಾಯ್ದೆಯಡಿ ದಾಖಲಾಗಿದ್ದ ಪ್ರಕರಣ
ಕೋಟಾ(ಡಿ,19): ಈ ವರ್ಷದ ಆರಂಭದಲ್ಲಿ ಒಂಭತ್ತು ದಿನಗಳ ಕಾಲ 15 ವರ್ಷದ ಬಾಲಕಿಯ ಮೇಲೆ ಹಲವಾರು ಬಾರಿ ಅತ್ಯಾಚಾರವೆಸಗಿದ ಪ್ರಕರಣದಲ್ಲಿ 13 ಜನರಿಗೆ ತಲಾ 20 ವರ್ಷ ಮತ್ತು ಇತರ ಮೂವರಿಗೆ ತಲಾ ನಾಲ್ಕು ವರ್ಷಗಳ ಶಿಕ್ಷೆಯನ್ನು ರಾಜಸ್ಥಾನದ ಕೋಟಾದ ನ್ಯಾಯಾಲಯ ಶನಿವಾರ ವಿಧಿಸಿದೆ. ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯಿದೆ (ಪೋಕ್ಸೊ) ಅಡಿಯಲ್ಲಿ ಸ್ಥಾಪಿಸಲಾದ ವಿಶೇಷ ನ್ಯಾಯಾಲಯದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಅಶೋಕ್ ಚೌಧರಿ ಈ ಪ್ರಕರಣದ ತೀರ್ಪು ಪ್ರಕಟಿಸಿದ್ದು, 15 ವರ್ಷದ ಬಾಲಕಿಯನ್ನು ಆಕೆಯ ಮನೆಯಿಂದ ಅಪಹರಿಸಿ ಜಲಾವರ್‌ಗೆ ಕರೆದೊಯ್ದು ಅತ್ಯಾಚಾರಕ್ಕಾಗಿ ಹಲವಾರು ಜನರಿಗೆ ಮಾರಾಟ ಮಾಡಲು ಆದೇಶಿಸಿದ ಒಬ್ಬ ಮಹಿಳೆಗೆ ನಾಲ್ಕು ವರ್ಷಗಳ ಕಠಿಣ ಜೈಲು ಶಿಕ್ಷೆಯನ್ನೂ ವಿಧಿಸುವಂತೆ ಆದೇಶಿಸಿದ್ದಾರೆ.
ನ್ಯಾಯಾಲಯವು 16 ಜನರಿಗೆ ಶಿಕ್ಷೆ ವಿಧಿಸಿ, ಅಪರಾಧದಲ್ಲಿ ಭಾಗಿಯಾಗಿರುವ ಇತರ 12 ಮಂದಿಯನ್ನು ಖುಲಾಸೆಗೊಳಿಸಿದೆ. ನಾಲ್ವರು ಬಾಲಾಪರಾಧಿಗಳು ಇನ್ನೂ ಸ್ಥಳೀಯ ಬಾಲ ನ್ಯಾಯ ಮಂಡಳಿಯಲ್ಲಿ ಪ್ರತ್ಯೇಕವಾಗಿ ವಿಚಾರಣೆ ಎದುರಿಸುತ್ತಿದ್ದಾರೆ. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಚೌಧರಿ ಅವರು 20 ವರ್ಷಗಳ ಶಿಕ್ಷೆಗೆ ಗುರಿಯಾದವರಿಗೆ ತಲಾ 10,000 ರೂ. ಮತ್ತು ನಾಲ್ಕು ವರ್ಷಗಳ ಶಿಕ್ಷೆಗೆ ಒಳಗಾದವರಿಗೆ ತಲಾ 7,000 ರೂ. ದಂಡ ವಿಧಿಸಿದೆ.
ಈ ವರ್ಷದ ಮಾರ್ಚ್ 6 ರಂದು ಅಪ್ರಾಪ್ತೆಯ ಸಾಮೂಹಿಕ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಸುಕೇತ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಕೋಟಾದಲ್ಲಿ ಬುಲ್ಬುಲ್ ಅಲಿಯಾಸ್ ಪೂಜಾ ಜೈನ್ ಎಂಬ ಮಹಿಳೆ ತನ್ನನ್ನು ಬ್ಯಾಗ್ ಖರೀದಿಸುವ ನೆಪದಲ್ಲಿ ಮನೆಯಿಂದ ಕರೆದೊಯ್ದಿದ್ದರು ಎಂದು ಅಪ್ರಾಪ್ತೆ ತನ್ನ ದೂರಿನಲ್ಲಿ ತಿಳಿಸಿದ್ದರು. ಜೈನ್ ತನ್ನನ್ನು ಝಾಲಾವರ್‌ಗೆ ಕರೆದೊಯ್ದು ಅಲ್ಲಿ ಒಬ್ಬರ ನಂತರ ಒಬ್ಬರಂತೆ ಹಲವಾರು ಪುರುಷರಿಗೆ ಹಸ್ತಾಂತರಿಸಿದರು ಮತ್ತು ಒಂಭತ್ತು ದಿನಗಳ ಕಾಲ ತನ್ನ ಮೇಲೆ ಅತ್ಯಾಚಾರವೆಸಗಿದರು ಎಂದು ಬಾಲಕಿ ದೂರಿನಲ್ಲಿ ಆರೋಪಿಸಿದ್ದಾರೆ.
ರಾಜಸ್ಥಾನ ಸರ್ಕಾರಕ್ಕೆ ಉರುಳಾಗಿದ್ದ ಪ್ರಕರಣ
ಈ ಸಾಮೂಹಿಕ ಅತ್ಯಾಚಾರ ಪ್ರಕರಂ ರಾಜಸ್ಥಾನದಲ್ಲಿ ಭಾರೀ ಕಾವು ಪಡೆದಿತ್ತು. ವಿರೋಧ ಪಕ್ಷಗಳು ಮಹಿಳಾ ಹಾಗೂ ಮಕ್ಕಳ ಸುರಕ್ಷತೆ ಬಗ್ಗೆ ಅಧಿವೇಶನದಲ್ಲಿ ಗೆಹ್ಲೋಟ್ ಸರ್ಕಾರವನ್ನು ಗುರಿಯಾಗಿಸಿ ಅನೇಕ ಪ್ರಶಗನೆಗಳನ್ನೆಸೆದಿತ್ತು. ಅಲ್ಲದೇ ಪೊಲೀಸ್ ಇಲಾಖೆ ಕಾರ್ಯ ವೈಖರಿ ಬಗ್ಗೆಯೂ ಧ್ವನಿ ಎತ್ತಿದ್ದವು. ಆದರೀಗ ಕೊನೆಗೂ ಆರೋಪಿಗಳಿಗೆ ಶಿಕ್ಷೆ ವಿಧಿಸಲಾಗಿದೆ.