ಚಮನ್‌ಸಿಂಗ್ ಹಾಗೂ ತಿಮ್ಮಯ್ಯ ಎಂಬುವರ ವಿರುದ್ಧ ಸಿಟಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲು| ರೈಲ್ವೆ ಇಲಾಖೆಯ ಸಿ ಗ್ರೂಪ್ ನೌಕರ ಹುದ್ದೆ ಕೊಡಿಸುತ್ತೇನೆ ಎಂದು 8 ಲಕ್ಷ ಕೇಳಿದ್ದ ತಿಮ್ಮಯ್ಯ, ಇದನ್ನು ನಂಬಿದ ಪ್ರವೀಣಕುಮಾರ್ ಹಂತ-ಹಂತವಾಗಿ ಆರೋಪಿಗಳಿಗೆ ಮೂರು ಲಕ್ಷ ಹಣ ನೀಡಿದ್ದ|
ಬೆಂಗಳೂರು(ಸೆ.11): ರೈಲ್ವೆ ಇಲಾಖೆಯಲ್ಲಿ ಕೆಲಸ ಹಾಗೂ ನಿವೇಶನ ಕೊಡಿಸುವುದಾಗಿ ಹಣ ಪಡೆದು ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.
ಈ ಸಂಬಂಧ ಬಾಬು, ಚಮನ್‌ಸಿಂಗ್ ಹಾಗೂ ತಿಮ್ಮಯ್ಯ ಎಂಬುವರ ವಿರುದ್ಧ ಸಿಟಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ವಂಚನೆಗೊಳಗಾದ ಪ್ರವೀಣ್ ಕುಮಾರ್ ಎಂಬುವರು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
ಗದಗ: ಕಾರ್ ಆಸೆಗೆ ಬಿದ್ದು ಲಕ್ಷಾಂತರ ರೂ. ಕಳೆದುಕೊಂಡ ತಾಯಿ-ಮಗಳು..!
ಪ್ರವೀಣ್‌ಕುಮಾರ್ ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿದ್ದು, ತಿಮ್ಮಯ್ಯನ ಪರಿಚಯವಾಗಿತ್ತು. ಈ ವೇಳೆ ತಿಮ್ಮಯ್ಯ, ಆರೋಪಿ ಬಾಬು ಎಂಬಾತನ ಬಳಿ ಕರೆದೊಯ್ದಿದ್ದ. ರೈಲ್ವೆ ಇಲಾಖೆಯ ಸಿ ಗ್ರೂಪ್ ನೌಕರ ಹುದ್ದೆ ಕೊಡಿಸುತ್ತೇನೆ ಎಂದು 8 ಲಕ್ಷ ಕೇಳಿದ್ದ. ಇದನ್ನು ನಂಬಿದ ಪ್ರವೀಣಕುಮಾರ್ ಹಂತ-ಹಂತವಾಗಿ ಆರೋಪಿಗಳಿಗೆ ಮೂರು ಲಕ್ಷ ಹಣ ನೀಡಿದ್ದ. ಹಣ ನೀಡಿ ಮೂರು ವರ್ಷವಾದರೂ ಕೆಲಸವನ್ನು ಕೊಡಿಸಲ್ಲ, ಹಣವನ್ನು ವಾಪಸ್ ನೀಡಿಲ್ಲ. ಹಣ ಪಡೆದು ವಂಚನೆ ಮಾಡಿರುವ ಆರೋಪಿ ವಿರುದ್ಧ ಕ್ರಮಕೈಗೊಳ್ಳುವಂತೆ ದೂರು ನೀಡಿದ್ದಾರೆ.
ತಿಮ್ಮಯ್ಯ ನಿವೃತ್ತ ಸರ್ಕಾರಿ ಕಾರು ಚಾಲಕನಾಗಿದ್ದರೆ, ಬಾಬು ರೈಲ್ವೆ ಇಲಾಖೆಯ ಉದ್ಯೋಗಿಯಾಗಿದ್ದಾನೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ. ಇದೇ ರೀತಿ ಬಾಬು ರೈಲ್ವೆ ಹೌಸಿಂಗ್ ಸೊಸೈಟಿಯಲ್ಲಿ ನಿವೇಶನ ಕೊಡಿಸುವುದಾಗಿ ರಾಚಯ್ಯ ಮತ್ತು ಗಿರೀಶ್ ಎಂಬುವರಿಂದ 4.25 ಲಕ್ಷ ಹಣ ಪಡೆದು ವಂಚಿಸಿದ್ದಾನೆ. ಈ ಸಂಬಂಧ ಕೂಡ ಪ್ರತ್ಯೇಕ ದೂರು ದಾಖಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.