ಕೌಟುಂಬಿಕ ಕಲಹದ ಹಿನ್ನಲೆಯಲ್ಲಿ ತಾಯಿಯೊಬ್ಬಳು ಹೆತ್ತ ಮಕ್ಕಳನ್ನೇ ಬಾವಿಗೆ ನೂಕಿ, ತಾನೂ ಬಾವಿಗೆ ಹಾರಿ ಸಾವನ್ನಪ್ಪಿರುವ ದುರ್ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ.
ರಾಯಚೂರು (ಆ.10): ಕೌಟುಂಬಿಕ ಕಲಹದ ಹಿನ್ನಲೆಯಲ್ಲಿ ಮನನೊಂದು ತಾಯಿಯೊಬ್ಬಳು ತಾನು ಹೆತ್ತ ಮಕ್ಕಳನ್ನೇ ಬಾವಿಗೆ ನೂಕಿ ಕೊಲೆ ಮಾಡಿದ್ದಾಳೆ. ಕೊನೆಗೆ ತಾನೂ ಬಾವಿಗೆ ಹಾರಿ ಸಾವನ್ನಪ್ಪಿರುವ ದುರ್ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ.
ರಾಯಚೂರು ಜಿಲ್ಲೆ ಲಿಂಗಸೂಗೂರು ತಾ.ಮುದಗಲ್ ಪಟ್ಟಣದಲ್ಲಿ ಘಟನೆ ನಡೆದಿದೆ. ಮುದಗಲ್ ಪಟ್ಟಣದ ಮೇಗಳಪೇಟೆ ನಿವಾಸಿ ಚೌಡಮ್ಮ (34) ಹಾಗೂ ಆಕೆಯ ಮಕ್ಕಳಾದ ರಾಮಣ್ಣ (4) ಮುತ್ತಣ್ಣ(3) ಮೃತರಾಗಿದ್ದಾರೆ. ಕುಟುಂಬ ಕಲಹದ ಹಿನ್ನೆಲೆಯಲ್ಲಿ ಬೇಸತ್ತಿದ್ದ ಮಹಿಳೆ ಮನೆಯಲ್ಲಿ, ಜಗಳ ಮಾಡಿಕೊಂಡು ಮಕ್ಕಳನ್ನು ಕರೆದುಕೊಂಡು ಹೊಲದತ್ತ ಹೋಗಿದ್ದಾಳೆ. ಇನ್ನು ಸಿಟ್ಟಿನಲ್ಲಿ ಹೋಗಿದ್ದ ಹೆಂಡತಿ ಮನೆಗೆ ವಾಪಸ್ ಬರುತ್ತಾಳೆ ಎಂದು ಗಂಡನೂ ಸುಮ್ಮನಾಗಿದ್ದಾನೆ. ಆದರೆ, ಮಕ್ಕಳನ್ನು ಜೊತೆಗೆ ಕರೆದುಕೊಂಡು ಹೋದ ಮಹಿಳೆ ಊರಿನ ಹೊರಭಾಗದಲ್ಲಿದ್ದ ಬಾವಿಯ ಬಳಿ ಕರೆದುಕೊಂಡು ಹೋಗಿದ್ದಾಳೆ.
Bengaluru: ಬಿಬಿಎಂಪಿ ಮಾಜಿ ಕಾಪೋರೇಟರ್ ಪುತ್ರ ನೇಣಿಗೆ ಶರಣು: ಸಾವಿನ ಸತ್ಯ ಬಿಚ್ಚಿಟ್ಟ ತಂದೆ
ಮಕ್ಕಳು ಬೇಡವೆಂದರೂ ಬಾವಿಗೆ ತಳ್ಳಿದ ತಾಯಿ: ಇನ್ನು ಬಾವಿಯ ಪಕ್ಕದಲ್ಲಿದ್ದ ಬೇವಿನ ಮರದ ಬಳಿ ಮಕ್ಕಳನ್ನು ಕೂರಿಸಿಕೊಂಡು ಅತ್ತಿದ್ದಾಳೆ. ನಂತರ, ಮನೆಯವರ ಕಾಟ ಸಹಿಸೋಕೆ ಆಗುತ್ತಿಲ್ಲ ನಾವು ಎಲ್ಲರೂ ಸತ್ತುಹೋಗೋಣ ಎಂದು ಮಕ್ಕಳಿಗೆ ಹೇಳಿದ್ದಾರೆ. ಸಾವು ಎಂಬುದರ ಅರಿವೇ ಇಲ್ಲದ ಚಿಕ್ಕ ಮಗು ಹೂಂ ಎಂದು ತಲೆ ಆಡಿಸಿದೆ. ಆದರೆ, ಹಿರಿಯ ಮಗ ರಾಮಣ್ಣ ಬೇಡ ಎಂದು ಹೇಳಿದ್ದಾನೆ. ಆದರೂ, ತಾಯಿ ತನ್ನ ಇಬ್ಬರು ಮಕ್ಕಳನ್ನು ಬಾವಿಗೆ ತಳ್ಳಲು ಕರೆದುಕೊಂಡು ಹೋದಾಗ ಎರಡೂ ಮಕ್ಕಳು ಅಳುತ್ತಾ ಬೇಡ ಬೇಡ ಎಂದು ಬೇಡಿಕೊಂಡಿವೆ. ಆದರೂ, ನಿಷ್ಕರುಣೆ ತಾಯಿ ಇಬ್ಬರು ಮಕ್ಕಳನ್ನು ಒದಲು ಬಾವಿಗೆ ತಳ್ಳಿ ಸಾಯಿಸಿದ್ದಾಳೆ. ಮಕ್ಕಳು ನೀರಿನಲ್ಲಿ ಮುಳುಗಿದ ನಂತರ ತಾನೂ ಬಾವಿಗೆ ಹಾರಿ ಸಾವನ್ನಪ್ಪಿದ್ದಾಳೆ ಎಂದು ತಿಳಿದು ಬಂದಿದೆ.
ಬಾವಿಯ ಬಳಿ ಚಪ್ಪಲಿಗಳು ಪತ್ತೆ: ಮನೆಯಿಂದ ಜಗಳ ಮಾಡಿಕೊಂಡು ಮಕ್ಕಳನ್ನು ಕರೆದುಕೊಂಡು ಹೋದ ಪತ್ನಿ ಎಷ್ಟೊತ್ತಾದರೂ ಬರಲಿಲ್ಲವೆಂದು ಗಂಡ ಮತ್ತು ಆಕೆಯ ಇತರೆ ಕುಟುಂಬ ಸದಸ್ಯರು ಗ್ರಾಮದಲ್ಲಿ ಹುಡುಕಾಡಿದ್ದಾರೆ. ಎಲ್ಲಿಯೂ ಸಿಗದಿದ್ದಾಗ ನೆಂಟರಿಷ್ಟರಿಗೆ ಫೋನ್ ಮಾಡಿ ವಿಚಾರಿಸಿದ್ದಾರೆ. ಎಲ್ಲಿಯೂ ಪತ್ತೆಯಾಗದ ಹಿನ್ನೆಲೆಯಲ್ಲಿ ನಂತರ, ಸಾವಿನ ಬಗ್ಗೆ ಅನುಮಾನ ಬಂದು ಎಲ್ಲ ಬಾವಿಗಳ ಬಳಿ ಹೋಗಿ ನೋಡಿದ್ದಾರೆ. ಗ್ರಾಮದ ಹೊರಭಾಗದಲ್ಲಿದ್ದ ಬಾವಿಯ ಬಳಿ ಹೋಗಿ ನೋಡಿದಾಗ ಚಪ್ಪಲಿಗಳು ಪತ್ತೆಯಾಗಿವೆ. ಬಾವಿಗೆ ಇಳಿದು ನೋಡಿದಾಗ ಮೂವರ ಹೆಣಗಳು ಇರುವುದು ಪತ್ತೆಯಾಗಿವೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಗೂಡ್ಸ್ ವಾಹನ ಡಿಕ್ಕಿ: ಟ್ಯೂಷನ್ ಮುಗಿಸಿ ಮನೆಗೆ ವಾಪಸ್ ಆಗುತ್ತಿದ್ದ ಮಕ್ಕಳು, ಇಬ್ಬರ ಸಾವು
ಮುದಗಲ್ ಪೊಲೀಸರಿಂದ ತನಿಖೆ ಆರಂಭ: ಇನ್ನು ಸಾವಿನ ಬಗ್ಗೆ ಗ್ರಾಮಸ್ಥರು ಸ್ಥಳೀಯ ಪೊಲೀಸ್ ಠಾಣೆಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಮುದಗಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಈ ಘಟನೆ ಕುರಿತು ಮುದಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ. ಪ್ರಾಥಮಿಕವಾಗಿ ಕೌಟುಂಬಿಕ ಕಲಹದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದ್ದು, ಪೊಲೀಸ್ ತನಿಖೆ ನಂತರ ಸತ್ಯಾಸತ್ಯತೆ ಹೊರಬೀಳಲಿದೆ.