ಬೇಲ್‌ಗಾಗಿ ಹರಸಾಹಸ: ರಾಗಿಣಿ ಸುಪ್ರೀಂಗೆ, ಸಂಜನಾ ಹೈಕೋರ್ಟ್‌ಗೆ

By Kannadaprabha NewsFirst Published Nov 29, 2020, 7:58 AM IST
Highlights

ನ.30ರಂದು ಸಂಜನಾ ಅರ್ಜಿ, ಡಿ.4ಕ್ಕೆ ರಾಗಿಣಿ ಅರ್ಜಿ ವಿಚಾರಣೆ| ಡ್ರಗ್ಸ್‌ ಕೇಸ್‌ನಲ್ಲಿ ಎರಡೂವರೆ ತಿಂಗಳಿಂದ ನಟಿಯರ ಜೈಲುವಾಸ| ಜಾಮೀನಿಗಾಗಿ ನಟಿಯರ ಶತಪ್ರಯತ್ನ| 
 

ಬೆಂಗಳೂರು(ನ.29): ಡ್ರಗ್ಸ್‌ ಜಾಲದೊಂದಿಗೆ ನಂಟು ಹೊಂದಿರುವ ಆರೋಪದಲ್ಲಿ ಸುಮಾರು ಎರಡೂವರೆ ತಿಂಗಳಿನಿಂದ ಜೈಲಿನಲ್ಲಿರುವ ನಟಿ ಸಂಜನಾ ಗಲ್ರಾನಿ ಎರಡನೇ ಬಾರಿ ಜಾಮೀನು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಇದೇ ವೇಳೆ, ಇದೇ ಆರೋಪದಲ್ಲಿ ಬಂಧನಕ್ಕೆ ಒಳಗಾಗಿರುವ ನಟಿ ರಾಗಿಣಿ ದ್ವಿವೇದಿ ಜಾಮೀನು ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಸಂಜನಾ ಮತ್ತಿತರ ಆರೋಪಿಗಳು ಸಲ್ಲಿಸಿದ್ದ ಜಾಮೀನು ಅರ್ಜಿಗಳನ್ನು ಹೈಕೋರ್ಟ್‌ ಏಕಸದಸ್ಯ ಪೀಠ ಕಳೆದ ನ.3ರಂದು ವಜಾಗೊಳಿಸಿತ್ತು. ಇದೀಗ ಮತ್ತೆ ಹೈಕೋರ್ಟ್‌ ಮೆಟ್ಟಿಲೇರಿರುವ ಸಂಜನಾ, ಅನಾರೋಗ್ಯದ ಕಾರಣ ನೀಡಿ ಜಾಮೀನಿಗೆ ಮನವಿ ಮಾಡಿದ್ದಾರೆ.

ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಶ್ರೀನಿವಾಸ್‌ ಹರೀಶ್‌ ಕುಮಾರ್‌ ಅವರಿದ್ದ ಪೀಠ, ಪ್ರತಿವಾದಿಗಳಾದ ಸಿಸಿಬಿ ಹಾಗೂ ಪ್ರಕರಣ ದಾಖಲಿಸಿರುವ ಕಾಟನ್‌ ಪೇಟೆ ಠಾಣೆ ಪೊಲೀಸರಿಗೆ ನೋಟಿಸ್‌ ಜಾರಿಗೊಳಿದೆ. ಆಕ್ಷೇಪಣೆಗಳಿದ್ದರೆ ಸಲ್ಲಿಸುವಂತೆ ಸೂಚಿಸಿ ವಿಚಾರಣೆ ನ.30ಕ್ಕೆ ಮುಂದೂಡಿದೆ. ಇನ್ನೊಂದೆಡೆ ಜಾಮೀನು ನಿರಾಕರಿಸಿ ರಾಜ್ಯ ಹೈಕೋರ್ಟ್‌ ನವೆಂಬರ್‌ 3ರಂದು ನೀಡಿರುವ ಆದೇಶ ಪ್ರಶ್ನಿಸಿ ರಾಗಿಣಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದು, ಡಿ.4 ರಂದು ವಿಚಾರಣೆಗೆ ಬರಲಿದೆ.

ದೀಪಾವಳಿ ದಿನವೂ ಬಿಡಲಿಲ್ಲ; ಜೈಲಿನಲ್ಲಿ ಅಧಿಕಾರಿಗಳ ಜೊತೆ ರಾಗಿಣಿ-ಸಂಜನಾ ಗಲಾಟೆ!

ಏನಿದು ಪ್ರಕರಣ?:

ಡ್ರಗ್ಸ್‌ ಜಾಲ ಪ್ರಕರಣದ ಸಂಬಂಧ ಸಿಸಿಬಿ ಪೊಲೀಸರು ಸೆ.4 ರಂದು ರಾಗಿಣಿ ಮತ್ತು ಸೆ.8ರಂದು ಸಂಜನಾರನ್ನು ಬಂಧಿಸಿದ್ದರು. ಪೊಲೀಸ್‌ ಕಸ್ಟಡಿ ಮುಗಿದ ಬಳಿಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದ ಎನ್‌ಡಿಪಿಎಸ್‌ ವಿಶೇಷ ನ್ಯಾಯಾಲಯ, ಸೆ.28ರಂದು ಜಾಮೀನು ಅರ್ಜಿ ವಜಾಗೊಳಿಸಿತ್ತು.

ಇದರಿಂದ, ರಾಗಿಣಿ ಮತ್ತು ಸಂಜನಾ ಜಾಮೀನು ಕೋರಿ ಹೈಕೋರ್ಟ್‌ ಮೊರೆ ಹೋಗಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್‌, ಅರ್ಜಿದಾರರ ವಿರುದ್ಧ ಡ್ರಗ್ಸ್‌ ಪೂರೈಕೆ, ಮಾರಾಟ ಹಾಗೂ ಸೇವನೆಯಂಥಹ ಗಂಭೀರ ಆರೋಪಗಳಿದ್ದು, ಎನ್‌ಡಿಪಿಎಸ್‌ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ. ಪ್ರಕರಣದ ತನಿಖೆ ಮುಂದುವರೆದಿದ್ದು, ಈ ಹಂತದಲ್ಲಿ ಜಾಮೀನು ನೀಡುವುದು ಸೂಕ್ತವಲ್ಲ ಎಂದು ಅಭಿಪ್ರಾಯಪಟ್ಟು, ನ.3ರಂದು ಜಾಮೀನು ಅರ್ಜಿಗಳನ್ನು ವಜಾಗೊಳಿಸಿತ್ತು.
 

click me!