
ಕಲಬುರಗಿ (ಏ.30): ಪಿಎಸ್‌ಐ ಹಗರಣದ (PSI Recruitment Scam) ಪ್ರಮುಖ ಆರೋಪಿ ಎಂದೇ ಗುರುತಿಸಲಾಗಿರುವ ದಿವ್ಯಾ ಹಾಗರಗಿ (Divya Hagaragi) ಮತ್ತು ತಂಡ 18 ದಿನ ಸಿಐಡಿ ಪೊಲೀಸರ (Police) ಕಣ್ಣು ತಪ್ಪಿಸಿ ತಲೆ ಮರೆಸಿಕೊಂಡಿದ್ದೇ ಒಂದು ರೋಚಕ ಕತೆ. ಪಿಎಸ್‌ಐ ಪರೀಕ್ಷೆಯ ಒಎಂಆರ್ ಶೀಟ್ ತಿದ್ದುಪಡಿ ಸಂಗತಿ ಹೊರಬೀಳುತ್ತಿದ್ದಂತೆ ದಿವ್ಯಾ ಇಡೀ ಹಗರಣದ ಕೇಂದ್ರ ಬಿಂದುವಾಗಿದ್ದಳು. ಪ್ರಕರಣವನ್ನು ಸಿಐಡಿಗೆ (CID) ವಹಿಸಿ ಸರ್ಕಾರ ಆದೇಶ ಹೊರಡಿಸುತ್ತಿದ್ದಂತೆ ದಿವ್ಯಾ ನಾಪತ್ತೆಯಾಗಿದ್ದಳು. ತನ್ನ ತಂಡದೊಂದಿಗೆ ನಿಂತಲ್ಲಿ ನಿಲ್ಲದೆ 18 ದಿನ ಅನೇಕ ಊರೂರು ಸುತ್ತಿದ್ದಾಳೆ.
ಸಿಐಡಿಯ ದಿಕ್ಕು ತಪ್ಪಿಸಲು ಕಾಶ್ಮೀರಕ್ಕೆ ತೆರಳಿದ್ದಾರೆ ಎನ್ನುವ ಸುಳಿವುಗಳನ್ನು ನೀಡುವಲ್ಲಿಯೂ ದಿವ್ಯಾ ಯಶಸ್ವಿಯಾಗಿದ್ದಳು. ಇತ್ತ ಸಿಐಡಿ 6 ತಂಡಗಳನ್ನು ರಚಿಸಿಕೊಂಡು ಕಲಬುಗರಿಯಿಂದ ಕಾಶ್ಮೀರದವರೆಗೂ ಹುಡುಕಾಟ ನಡೆಸಿತ್ತು. ದಿವ್ಯಾ ಮತ್ತು ತಂಡ ಏ.2ರಂದೇ ತಮ್ಮ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದರು. ಇತ್ತ ಏ.12ರಿಂದ ಆರೋಪಿಗಳಿಗಾಗಿ ಸಿಐಡಿ ತೀವ್ರ ಹುಡುಕಾಟ ಶುರು ಮಾಡಿತ್ತು. ಇತ್ತ ದಿವ್ಯಾ ಮತ್ತು ಗ್ಯಾಂಗ್ ಹೋದಲೆಲ್ಲ ಮೊಬೈಲ್ ಮತ್ತು ಸಿಮ್ ಕಾರ್ಡ್ಗಳನ್ನು ಬದಲಿಸಿದ್ದರು. ಅಲ್ಲದೆ ತಮ್ಮ ಕಾರಿನ ಡ್ರೈವರ್ ಮೊಬೈಲನ್ನು ಕೂಡ ಸ್ವಿಚ್ಆಫ್ ಮಾಡಿದ್ದರು. ಅದು ಯಾವಗಲೋ ಒಮ್ಮೊಮ್ಮೆ ಆನ್ ಆಗುತ್ತಿತ್ತು.
Divya hagargiಗೆ ಆಶ್ರಯ ನೀಡಿದ್ದ ಮಹಾ ಉದ್ಯಮಿಯೂ ಅರೆಸ್ಟ್
ಇದರ ಜಾಡು ಹಿಡಿದ ಸಿಡಿಐಗೆ ದಿವ್ಯಾ ರಾಜ್ಯದ ಗಡಿ ದಾಟಿದ್ದಾರೆ ಎನ್ನುವ ಸುಳಿವು ಸಿಕ್ಕಿತ್ತು. ಆದರೆ ಯಾವುದೂ ಕೂಡ ಖಚಿತವಾಗುತ್ತಿರಲಿಲ್ಲ. ಹೀಗಾಗಿ ಸಿಐಡಿಗೆ ದಿವ್ಯಾ ಜಾಡು ಹಿಡಿಯುವುದು ದೊಡ್ಡ ಸವಾಲಾಗಿ ಪರಿಣಮಿಸಿತ್ತು. ಪ್ರತಿ ಬಾರಿಯೂ ಆಕೆ ತಲೆ ಮರೆಸಿಕೊಳ್ಳಲು ಹಲವರು ಸಹಾಯ ಮಾಡಿದ್ದಾರೆ ಎನ್ನಲಾಗಿದೆ. ಆದರೆ ಇದನ್ನು ಸಿಐಡಿ ಖಚಿತ ಪಡಿಸುತ್ತಿಲ್ಲ. ಇತ್ತ ಸಿಐಡಿ ಬಲೆಯಿಂದ ತಪ್ಪಿಸಿಕೊಳ್ಳಲು ಮೊದಲು ಆಲಮೇಲ ಮಾರ್ಗವಾಗಿ ಸಂಚಾರ ಶುರು ಮಾಡಿದ ದಿವ್ಯಾ ಮತ್ತು ತಂಡ ಮುಂದೆ 4 ದಿನ ವಿಜಯಪುರ, ನಂತರ ಸೊಲ್ಲಾಪುರ, ಅಲ್ಲಿಂದ ಮತ್ತೆ ಕಲಬುರಗಿಗೆ ಬಂದು ತಲೆ ಮರೆಸಿಕೊಂಡಿತ್ತು.
ಬಳಿಕ ಪುಣೆಗೆ ಸಾಗಿ ಅಲ್ಲಿ ಉದ್ಯಮಿಯ ಸುರೇಶ್ ಕಾಟೆಗಾಂವ್ ಮನೆಯಲ್ಲಿ ಆಸರೆ ಪಡೆದಿತ್ತು. 18 ದಿನಗಳಲ್ಲಿ ದಿವ್ಯಾ 5 ದಿನ ಕಲಬುರಗಿ ಹೊರ ವಲಯದಲ್ಲೇ ಇದ್ದಳು ಎಂಬ ಮಾಹಿತಿ ಇದೆ. ಇವೆಲ್ಲದ್ದಕ್ಕೂ ಸಿಐಡಿ ವಿಚಾರಣೆಯೇ ಇದನ್ನು ಖಚಿತ ಪಡಿಸಬೇಕಿದೆ. ಆಸರೆ ಪಡೆದ ಮನೆ ಬಾಗಿಲಲ್ಲೇ ಸಿಐಡಿ ಕಂಡು ದಿವ್ಯಾ ಗಡಗಡ!; 18 ದಿನ ಸಿಐಡಿ ಕಣ್ಣು ತಪ್ಪಿಸಿ ತಲೆ ಮರೆಸಿಕೊಂಡಿದ್ದ ಪಿಎಸ್‌ಐ ಹಗರಣದ ರೂವಾರಿ ದಿವ್ಯ ಹಾಗರಗಿ ಕೊನೆಗೂ ಸಿಕ್ಕಿದ್ದು ಮಹಾರಾಷ್ಟ್ರದ ಪುಣೆಯಲ್ಲಿ. ದಿವ್ಯಾ ಮತ್ತು ಆಕೆಯ ಪಟಾಲಂನನ್ನು ಬಂಧಿಸಲು ಸಿಐಡಿ 6 ತಂಡ ರಚಿಸಿಕೊಂಡು ಕಲಬುರಗಿಯಿಂದ ಕಾಶ್ಮೀರವರೆಗೂ ಸುತ್ತಾಡಿತ್ತು.
ಆಕೆ ಪುಣೆಯಲ್ಲಿದ್ದಾಳೆಂಬ ಸುಳಿವು ಸಿಕ್ಕ 11 ತಾಸಿನಲ್ಲೇ ದಿವ್ಯಾ ಮತ್ತವರ 6 ಜನರ ಪಟಾಲಂನನ್ನು ಬಂಧಿಸಿದ್ದಾರೆ. ಹಗರಣದ ರೂವಾರಿ ದಿವ್ಯಾ ಪುಣೆಯಲ್ಲಿದ್ದಾಳೆಂದು ಗೊತ್ತಾಗಿದ್ದೆ ಗುರುವಾರ ಸಂಜೆ 6.30ಕ್ಕೆ, ದಿವ್ಯಾಳ ಆಪ್ತೆ ಶಹಾಬಾದ್‌ನ ಜ್ಯೋತಿ ಪಾಟೀಲ್ ಮೊಬೈಲ್‌ನಿಂದ ಈ ಸಂಗತಿ ಗೊತ್ತಾಗಿದ್ದೇ ತಡ ಸಿಐಡಿ ವಿಳಂಬ ಮಾಡದೆ ಪುಣೆ ದಾರಿ ಹಿಡಿದಿತ್ತು. ಪುಣೆಯ ಉದ್ಯಮಿ ಸುರೇಶ ಕಾಯೆಗಾಂವ್ ಆಸರೆ ನೀಡಿರೋ ಸುಳಿವು ಜ್ಯೋತಿ ನೀಡಿದ್ದಳು. ಜ್ಯೋತಿ ಪಾಟೀಲ್ ಮೂಲಕವೇ ಮಹತ್ವದ ವ್ಯಕ್ತಿಯೊಬ್ಬರಿಗೆ ಕರೆ ಮಾಡಿಸಿದ ಸಿಐಡಿ, ಆ ಕರೆ ಮೂಲಕ ದಿವ್ಯಾ ಇರುವಿಕೆಯನ್ನು ಖಚಿತಪಡಿಸಿಕೊಂಡಿತು.
ಮಹಾರಾಷ್ಟ್ರ ಪೊಲೀಸ್ ನೆರವಿನಿಂದ ಪುಣೆಯಲ್ಲಿರೋ ಉದ್ಯಮಿ ಸುರೇಶ್ ಕಾಟೆಗಾಂವ್ ಮನೆ ಮೇಲೆ ದಾಳಿ ನಡೆಸಿತ್ತು. ಮಧ್ಯರಾತ್ರಿ 2.30ಕ್ಕೆ ನಡೆದ ದಾಳಿಯಲ್ಲಿ ಸುರೇಶ್ ಕಾಟೆಗಾಂವ್, ದಿವ್ಯಾಳನ್ನು ತನ್ನ ಇನ್ನೊಂದು ಮನೆಯಲ್ಲಿಟ್ಟಿದ್ದಾಗಿ ಬಾಯಿಬಿಟ್ಟ. ಆತನನ್ನೇ ಮುಂದಿಟ್ಟುಕೊಂಡು ಬಂದ ಸಿಐಡಿ ರಾತ್ರಿಯೇ ದಿವ್ಯಾ ತಂಗಿದ್ದ ಮನೆ ಬಾಗಿಲು ಬಡಿದಿದ್ದಾರೆ. ಹೊರಗಡೆಯಿಂದ ಸುರೇಶ್ ತಾನು ಬಂದಿದ್ದಾಗಿ ಹೇಳಿದಾಗ ಒಳಗಿದ್ದ ದಿವ್ಯಾ, ಬಾಗಿಲು ತೆರೆಯುತ್ತಿದ್ದಂತೆ ಎದುರಿಗೆ ಕಂಡದ್ದು ಡಿವೈಎಸ್ಪಿ ಶಂಕರಗೌಡ ಪಾಟೀಲ್ ಮತ್ತವರ ತಂಡ. ತಾನಡಿಗಿದ್ದ ಮನೆ ಮನೆ ಮುಂದೆಯೇ ಸಿಐಡಿ ತಂಡವನ್ನು ಕಂಡು ದಿವ್ಯಾ ಕಂಗಾಲು, ಏನೊಂದೂ ತೋಚದೆ ಹೌಹಾರಿದ್ದಾಳೆ, ತಡವರಿಸಿದ್ದಾಳೆ, ತನ್ನ ಮುಂದೆಯೇ ಏನಾಗುತ್ತದೆ ಎಂಬುದು ಅರಿವಿಗೆ ಬಾರದಂತೆ ದಿಗ್ಭ್ರಾಂತಳಾಗಿದ್ದಾಳೆ.
ಕರ್ನಾಟಕದಲ್ಲಿ 'ಸಿಂಘಂ'ನಂಥ ಅಧಿಕಾರಿಗಳಿದ್ರೂ ಪಿಎಸ್‌ಐ ಅಕ್ರಮ ಹೇಗಾಯ್ತು?: ಡಿ. ರೂಪಾ ಪ್ರಶ್ನೆ
11 ಗಂಟೆಯಲ್ಲೇ ಕಾರಾರಯಚರಣೆ ಖತಂ: ಇದೇ ಸ್ಥಿತಿಯಲ್ಲಿ ದಿವ್ಯಾಳ ವಶಕ್ಕೆ ಪಡೆದ ಸಿಐಡಿ ಶಂಕರಗೌಡ ಪಾಟೀಲ್ ಅದೇ ಮನೆಯಲ್ಲಿದ್ದ ಜ್ಞಾನ ಜ್ಯೋತಿ ಶಾಲೆಯ ಶಿಕ್ಷಕಿಯರಾದ ಅರ್ಚನಾ, ಸುನಿತಾರನ್ನು ವಶಕ್ಕೆ ಪಡೆದಿದ್ದಾರೆ. ಜೊತೆಗೆ ಆಶ್ರಯ ನೀಡಿದ್ದ ಸುರೇಶ ಕಾಟೇಗಾಂವ ಮತ್ತು ಆ ಮನೆಯಲ್ಲಿ ಅವರಿಗೆ ಸಹಾಯಕ್ಕಾಗಿ ಇದ್ದ ಕಾಳಿದಾಸ ಎನ್ನುವ ವ್ಯಕ್ತಿಯ ಬಂಧಿಸಿ ಬೆಳಗಿನ 5ಗಂಟೆಗೆ ಎಲ್ಲಾ ಕೆಲಸ ಮುಗಿಸಿ ಮಧ್ಯಾಹ್ನ 12ಕ್ಕೆ ಕಲಬುರಗಿಗೆ ಬಂದಿಳಿದಿದರು. 18 ದಿನಗಳ ಕಾಲ ತಲೆಮರೆಸಿಕೊಂಡಿದ್ದ ದಿವ್ಯಾ ಹಾಗೂ ತಂಡದ ಹಲವರು ಸೆರೆ ಸಿಕ್ಕರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ