ಭ್ರಷ್ಟಾಚಾರ ಆರೋಪ ಪ್ರಕರಣ ಸಂಬಂಧ ಭೋವಿ ಅಭಿವೃದ್ಧಿ ನಿಗಮದ ಇಬ್ಬರು ಹಿರಿಯ ಅಧಿಕಾರಿಗಳ ಕಚೇರಿ ಹಾಗೂ ಮನೆಗಳ ಮೇಲೆ ಎಸಿಬಿ ಪೊಲೀಸರು ಗುರುವಾರ ದಾಳಿ ನಡೆಸಿ ನಗದು ಹಾಗೂ ಮಹತ್ವದ ದಾಖಲೆಗಳನ್ನು ಜಪ್ತಿ ಮಾಡಿದ್ದಾರೆ.
ಬೆಂಗಳೂರು (ಏ.30): ಭ್ರಷ್ಟಾಚಾರ (Corruption) ಆರೋಪ ಪ್ರಕರಣ ಸಂಬಂಧ ಭೋವಿ ಅಭಿವೃದ್ಧಿ (Bhovi Development) ನಿಗಮದ ಇಬ್ಬರು ಹಿರಿಯ ಅಧಿಕಾರಿಗಳ ಕಚೇರಿ ಹಾಗೂ ಮನೆಗಳ ಮೇಲೆ ಎಸಿಬಿ ಪೊಲೀಸರು (ACB Raid) ಗುರುವಾರ ದಾಳಿ ನಡೆಸಿ ನಗದು ಹಾಗೂ ಮಹತ್ವದ ದಾಖಲೆಗಳನ್ನು ಜಪ್ತಿ ಮಾಡಿದ್ದಾರೆ. ಭೋವಿ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಲೀಲಾವತಿ ಮತ್ತು ಪ್ರಧಾನ ವ್ಯವಸ್ಥಾಪಕ ನಾಗರಾಜಪ್ಪ ಅವರಿಗೆ ಸೇರಿದ ಬೆಂಗಳೂರಿನ ನಿವಾಸ ಹಾಗೂ ಕಚೇರಿ ಸೇರಿ ಐದು ಸ್ಥಳಗಳಲ್ಲಿ ಎಸಿಬಿ ಪೊಲೀಸರು ದಾಳಿ ಮಾಡಿದ್ದಾರೆ.
ದಾಳಿ ವೇಳೆ 10 ಲಕ್ಷ ರು. ನಗದು ಹಾಗೂ ಕೋಟ್ಯಂತರ ವ್ಯವಹಾರದ ಮಹತ್ವದ ದಾಖಲಾತಿಗಳನ್ನು ವಶಕ್ಕೆ ಪಡೆದಿದ್ದಾರೆ. ಸರ್ಕಾರದ ವಿವಿಧ ಯೋಜನೆಗಳು ಹಾಗೂ ಸೌಲಭ್ಯಗಳನ್ನು ನೀಡಲು ಅರ್ಜಿದಾರರಿಗೆ ಲಂಚಕ್ಕೆ ಬೇಡಿಕೆ ಇರಿಸುವುದು ಮತ್ತು ಫಲಾನುಭವಿಗಳಿಗೆ ನೇರ ಸೌಲಭ್ಯ ದೊರಕಿಸದೆ ದಲ್ಲಾಳಿಗಳ ಮುಖಾಂತರ ಲಂಚ ಪಡೆಯುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಎಸಿಬಿ ಪೊಲೀಸರು ಇದೀಗ ಮಾಡಿದ್ದಾರೆ.
Bengaluru: ಲಂಚಕ್ಕೆ ಕೈ ಚಾಚಿ ಜೈಲು ಸೇರಿದ ಲೇಡಿ ಇನ್ಸ್‌ಪೆಕ್ಟರ್
ಈ ಇಬ್ಬರು ಅಧಿಕಾರಿಗಳು ನಿಗಮದ ಉದ್ಯಮಶೀಲತೆ ಯೋಜನೆ, ಐರಾವತ ಯೋಜನೆ, ಗಂಗಾಕಲ್ಯಾಣ, ಭೂ ಒಡೆತನ, ಸಮೃದ್ಧಿ, ನೇರ ಸಾಲ ಹಾಗೂ ಇತರೆ ಯೋಜನೆಗಳಲ್ಲಿ ಸರ್ಕಾರ ನಿಗದಿಪಡಿಸಿರುವ ಸಹಾಯಧನ, ಸಬ್ಸಿಡಿ ಸೌಲಭ್ಯ ನೀಡಲು ಅರ್ಜಿದಾರರಿಂದ ಲಂಚ ಪಡೆಯುತ್ತಿದ್ದರು. ಅನರ್ಹರಿಂದ ಲಂಚ ಪಡೆದು ಸೌಲಭ್ಯಗಳನ್ನು ನೀಡುವುದು, ಲಂಚ ನೀಡಲು ನಿರಾಕರಿಸುವವರ ಕೆಲಸ ವಿಳಂಬ ಮಾಡುತ್ತಿರುವ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಎಸಿಬಿ ಪೊಲೀಸರು ದಾಳಿ ಮಾಡಿದ್ದು, ಪರಿಶೀಲನೆ ವೇಳೆ ಇಬ್ಬರು ಅಧಿಕಾರಿಗಳು ನಿಗಮದ ಕೋಟ್ಯಂತರ ರು. ದುರುಪಯೋಗಪಡಿಸಿಕೊಂಡು ಭ್ರಷ್ಟಾಚಾರದಲ್ಲಿ ತೊಡಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಇಬ್ಬರ ಕಚೇರಿ ಹಾಗೂ ಮನೆಗಳಲ್ಲಿ ವಶಕ್ಕೆ ಪಡೆದಿರುವ ದಾಖಲೆಗಳ ಪರಿಶೀಲನೆ ಮುಂದುವರಿದಿದೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.
ಭ್ರಷ್ಟರ ಬೆನ್ನಿಗೆ ನಿಂತಿತಾ ಸರ್ಕಾರ? ಎಸಿಬಿ ತನಿಖೆಗೆ ಸರ್ಕಾರವೇ ಅಡ್ಡಗಾಲು!
ಎಲ್ಲೆಲ್ಲಿ ದಾಳಿ?: ಭೋವಿ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಲೀಲಾವತಿ ಅವರ ಮಹಾಲಕ್ಷ್ಮಿಪುರಂನ ಭೋವಿ ಅಭಿವೃದ್ಧಿ ನಿಗಮದ ಕಚೇರಿ, ಜಾಲಹಳ್ಳಿಯ ವಾಸದ ಮನೆ ಹಾಗೂ ನಿಗಮದ ಪ್ರಧಾನ ವ್ಯವಸ್ಥಾಪಕ ನಾಗರಾಜಪ್ಪ ಅವರ ಮಹಾಲಕ್ಷ್ಮಿಪುರಂನ ಭೋವಿ ಅಭಿವೃದ್ಧಿ ನಿಗಮದ ಕಚೇರಿ, ವಿಜಯನಗರ ಎಂ.ಸಿ. ಲೇಔಟ್‌ನ ಮನೆ ಹಾಗೂ ಮಾಗಡಿ ರಸ್ತೆಯ ಮನೆ ಮೇಲೆ ದಾಳಿ ನಡೆದಿದೆ.