Drugs Case : ಪ್ರೆಸ್ಟೀಜ್‌ ಗ್ರೂಪ್‌ನ ಉನ್ನತ ಅಧಿಕಾರಿಗೆ ಸಂಕಷ್ಟ

By Kannadaprabha News  |  First Published Dec 17, 2021, 9:05 AM IST
  • ಪ್ರೆಸ್ಟೀಜ್‌ ಗ್ರೂಪ್‌ನ ಉನ್ನತ ಅಧಿಕಾರಿಗೆ ಸಂಕಷ್ಟ
  •  ಸಮೂಹದ ಮಾಲಿಕರ ಸೋದರಿಗೆ ಮೆಡಿಕಲ್‌ ಟೆಸ್ಟ್‌
  •   ಡ್ರಗ್ಸ್‌ ಪೆಡ್ಲರ್‌ ಜೊತೆ ನಂಟು ಹೊಂದಿರುವ ಆರೋಪ

 ಬೆಂಗಳೂರು (ಡಿ.17):  ಮಾದಕ ವಸ್ತು (Drug) ಮಾರಾಟ ಜಾಲದ ಜತೆ ನಂಟು ಆರೋಪದ ಎದುರಿಸುತ್ತಿದ್ದ ಪ್ರತಿಷ್ಠಿತ ರಿಯಲ್‌ ಎಸ್ಟೇಟ್‌ (Real Estate) ಕಂಪನಿ ಪ್ರೆಸ್ಟೀಜ್‌ ಗ್ರೂಪ್‌ನ (Prestige Group) ಕಾರ್ಯನಿರ್ವಾಹಕ ನಿರ್ದೇಶಕಿ ಅಂಜುಂ ಜಂಗ್‌ ಅವರನ್ನು ಪೊಲೀಸರು ವೈದ್ಯಕೀಯ ಪರೀಕ್ಷೆಗೆ (Medical Test) ಒಳಪಡಿಸಿದ್ದಾರೆ. ಈ ಪ್ರಕರಣದ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ (Notice) ನೀಡಿದ್ದ ಹಿನ್ನೆಲೆಯಲ್ಲಿ ಗುರುವಾರ ಅಜುಂ ಅವರು ನಗರದ  ಗೋವಿಂದಪುರ ಠಾಣೆ ಪೊಲೀಸರ ಎದುರು ಹಾಜರಾಗಿದ್ದರು. ಈ ವೇಳೆ ಪೊಲೀಸರು (Police) ಖಾಸಗಿ ಆಸ್ಪತ್ರೆಯಲ್ಲಿ (Hospital) ವೈದ್ಯಕೀಯ ಪರೀಕ್ಷೆಗೆ ಹಾಜರುಪಡಿಸಿದ್ದಾರೆ.

ಸುಮಾರು ಎರಡೂವರೆ ತಾಸು ತನಿಖಾಧಿಕಾರಿ ಆರ್‌.ಪ್ರಕಾಶ್‌ ಅವರು ಅಜುಂ ಅವರನ್ನು ಪ್ರಶ್ನಿಸಿದರು. ನಂತರ ಅಂಜುಂ ಅವರು ಡ್ರಗ್ಸ್‌ (Drugs) ಸೇವಿಸಿದ್ದಾರೆಯೇ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳಲು ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗಿದೆ. ಈ ವರದಿ ಬಳಿಕ ಮುಂದಿನ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Latest Videos

undefined

‘ನನಗೆ ಪೆಡ್ಲರ್‌ ಪರಿಚಯವಿಲ್ಲ. ನನ್ನ ಕಾರು ಚಾಲಕರಿಗೆ (Driver) ಸಂಪರ್ಕವಿರಬಹುದು. ಅದಕ್ಕೂ ನನಗೂ ಸಂಬಂಧವಿಲ್ಲ ಎಂದು ಅಂಜುಂ ವಿಚಾರಣೆ ವೇಳೆ ಹೇಳಿಕೆ ಕೊಟ್ಟಿದ್ದಾರೆ’ ಎಂದು ಮೂಲಗಳು ಹೇಳಿವೆ. ಪ್ರತಿಷ್ಠಿತ ರಿಯಲ್‌ ಎಸ್ಟೇಟ್‌ (Real estate) ಸಂಸ್ಥೆಯಾದ ಪ್ರೆಸ್ಟೀಜ್‌ ಗ್ರೂಪ್‌ನ ಮುಖ್ಯಸ್ಥರ ಸೋದರಿ ಆಗಿರುವ ಅಂಜುಂ, ಒಳಾಂಗಣ ವಿನ್ಯಾಸಕಿ ಆಗಿ ಖ್ಯಾತಿ ಪಡೆದಿದ್ದಾರೆ. ತಮ್ಮ ಕುಟುಂಬದ ಜತೆ ಜೆ.ಸಿ.ನಗರದ ನಂದಿದುರ್ಗ ರಸ್ತೆಯಲ್ಲಿ (Road) ಅವರು ನೆಲೆಸಿದ್ದು, ಪ್ರೆಸ್ಟೀಜ್‌ ಗ್ರೂಪ್‌ ಕಂಪನಿಯಲ್ಲಿ ಕಾರ್ಯನಿರ್ವಾಹಕ ನಿರ್ದೇಶಕಿಯಾಗಿದ್ದಾರೆ.

ಕೆಲ ದಿನಗಳ ಹಿಂದೆ ಡ್ರಗ್ಸ್‌(Drugs) ಮಾರಾಟದ ವೇಳೆ ಪೆಡ್ಲರ್‌ ಥಾಮಸ್‌ ಎಂಬುವನನ್ನು ಗೋವಿಂದಪುರ ಠಾಣೆ ಪೊಲೀಸರು(Police) ಬಂಧಿಸಿದ್ದರು. ಬಳಿಕ ಆತನ ವಿಚಾರಣೆ ವೇಳೆ ಅಂಜುಂ ಸಹ ಪೆಡ್ಲರ್‌ ಜತೆ ಸಂಪರ್ಕದಲ್ಲಿದ್ದ ಸಂಗತಿ ಗೊತ್ತಾಯಿತು. ಈ ಮಾಹಿತಿ ಮೇರೆಗೆ ವಿಚಾರಣೆಗೆ ಹಾಜರಾಗುವಂತೆ ಅಂಜುಂಗೆ ಪೊಲೀಸರು ನೋಟಿಸ್‌ ನೀಡಿದ್ದರು. ಎರಡು ಬಾರಿ ಗೈರಾಗಿದ್ದ ಅವರು, ಮೂರನೇ ಬಾರಿ ವಿಚಾರಣೆಗೆ ಹಾಜರಾಗಿದ್ದರು ಎಂದು ತಿಳಿದು ಬಂದಿದೆ.

ಮಾದಕ ವಸ್ತು ಕಳ್ಳ ಸಾಗಣೆಗೆ ಭಾರತವೇ ಹೆದ್ದಾರಿ :   ವಿಶ್ವದಲ್ಲೇ ಅತಿ ಹೆಚ್ಚು ಮಾದಕ (Drug) ವಸ್ತು ಬೆಳೆಯುವ ದೇಶವಾದ ಅಫ್ಘಾನಿಸ್ತಾನವನ್ನು (Afghanistan) ನೆರೆಯಲ್ಲೇ ಹೊಂದಿರುವ ಭಾರತ, ಇತ್ತೀಚಿನ ವರ್ಷಗಳಲ್ಲಿ ಮಾದಕ ವಸ್ತು ಕಳ್ಳಸಾಗಣೆದಾರರ ಪ್ರಮುಖ ಸಾಗಣೆ ಕೇಂದ್ರವಾಗಿ ಹೊರಹೊಮ್ಮಿದೆ. ಕಳೆದ 4 ವರ್ಷಗಳಲ್ಲಿ ಹೆರಾಯಿನ್‌ ಜಪ್ತಿ ಪ್ರಮಾಣದಲ್ಲಿ ಶೇ.37,000 ದಷ್ಟುಹೆಚ್ಚಳವಾಗಿರುವುದೇ ಇದಕ್ಕೆ ಪ್ರತ್ಯಕ್ಷ ಸಾಕ್ಷಿ ಎಂದು ಅಧಿಕಾರಿಗಳು ಹೇಳಿದ್ದಾರೆ. 2018ರಲ್ಲಿ ಕಂದಾಯ ಗುಪ್ತಚರ ನಿರ್ದೇಶನಾಲಯ ( DRI) ಮತ್ತು ಮಾದಕ ವಸ್ತು ನಿಯಂತ್ರಣ ಮಂಡಳಿ (NCB) ಅಧಿಕಾರಿಗಳು 7.98 ಕೆಜಿ ಹೆರಾಯಿನ್‌ ವಶಪಡಿಸಿಕೊಂಡಿದ್ದರು. 2019ರಲ್ಲಿ ಜಪ್ತಿ ಪ್ರಮಾಣ ಶೇ.25ರಷ್ಟುಹೆಚ್ಚಳದ ಮೂಲಕ 9.16 ಕೆಜಿಗೆ ತಲುಪಿತು.

ಇನ್ನು ಕೋವಿಡ್‌ ಕಾಣಿಸಿಕೊಂಡ 2020ರಲ್ಲಿ 202 ಕೆಜಿ ವಶದ ಮೂಲಕ ಜಪ್ತಿ ಪ್ರಮಾಣದಲ್ಲಿ ಶೇ.2000ರಷ್ಟುಹೆಚ್ಚಳವಾಯಿತು. 2021ರಲ್ಲಿ ಗುಜರಾತ್‌ನ ಮುಂದ್ರಾ ಬಂದರಿನಲ್ಲಿ ಒಂದೇ ಪ್ರಕರಣದಲ್ಲಿ 21000 ಕೋಟಿ ಮೌಲ್ಯದ 3000 ಕೆಜಿ ಹೆರಾಯಿನ್‌ ವಶದೊಂದಿಗೆ ಜಪ್ತಿ ಪ್ರಮಾಣದಲ್ಲಿ ಶೇ.37000ರಷ್ಟುಹೆಚ್ಚಳ ದಾಖಲಾಗಿದೆ. ಅಷ್ಘಾನಿಸ್ತಾನದ ಮೇಲೆ ತಾಲಿಬಾನ್‌ (Taliban) ಹಿಡಿತದ ಬಳಿಕ ಅಲ್ಲಿ ಮಾದಕ ವಸ್ತು ತಯಾರಿಕೆಗೆ ಬಳಸುವ ಗಸಗಸೆ ಗಿಡ ಕೃಷಿ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿರುವುದೇ, ಭಾರತದಲ್ಲಿ ಜಪ್ತಿ ಪ್ರಮಾಣ ಹೆಚ್ಚಳಕ್ಕೆ ಕಾರಣ ಎಂದು ಅಧಿಕಾರಿಗಳು ವಿಶ್ಲೇಷಿಸಿದ್ದಾರೆ.

ರಾಜ್ಯಗಳಲ್ಲೂ ಹೆಚ್ಚಳ:  ಇನ್ನು ಕಳೆದ 4 ವರ್ಷದಲ್ಲಿ ವಿವಿಧ ರಾಜ್ಯಗಳಲ್ಲಿ ವಶಪಡಿಸಿಕೊಂಡ ಹೆರಾಯಿನ್‌ ಪ್ರಮಾಣದಲ್ಲಿ ಭಾರೀ ಏರಿಕೆ ಕಂಡುಬಂದಿದೆ. 2017ರಲ್ಲಿ 825 ಕೆಜಿ, 2019ರಲ್ಲಿ 913 ಕೆಜಿ, 2020ರಲ್ಲಿ 2308 ಕೆಜಿ ಹೆರಾಯಿನ್‌ ವಶಪಡಿಸಿಕೊಂಡಿದ್ದರೆ, 2021ರಲ್ಲಿ ಈ ಪ್ರಮಾಣ 3276 ಕೆಜಿಗೆ ಏರಿದೆ. ಅಂದರೆ 2017-2020ರ ಅವಧಿಯಲ್ಲಿ ಶೇ.400ರಷ್ಟುಏರಿಕೆ ಕಂಡುಬಂದಿದೆ.

ಕಳ್ಳಸಾಗಣೆದಾರರಿಗೆ ಭಾರತವೇ ರಹದಾರಿ:  ಕಳ್ಳ ಸಾಗಣೆದಾರರು ವಿದೇಶಗಳಿಗೆ  ಮಾದಕ ವಸ್ತು (Drugs) ರವಾನಿಸಲು ನಾನಾ ಮಾರ್ಗಗಳನ್ನು ಬಳಸುತ್ತಾರೆ. ಅಫ್ಘಾನಿಸ್ತಾನದಿಂದ ಯುರೋಪ್‌, ಅಮೆರಿಕಕ್ಕೆ ಕಳ್ಳಸಾಗಣೆಗೆ ಇರಾನ್‌, ಇರಾಕ್‌ ಮಾರ್ಗವನ್ನು ಹೆಚ್ಚಾಗಿ ಬಳಸಲಾಗುತ್ತದೆ. ಆದರೆ ಈ ಮಾರ್ಗಗಳಲ್ಲಿ ಇದೀಗ ತಪಾಸಣೆ ಬಿಗಿ ಮಾಡಿರುವುದು, ಇಂಥ ಮಾದಕ ವಸ್ತು ದೋಚುವ ಪ್ರಕರಣ ಹೆಚ್ಚಳ ಮತ್ತು ಈ ದೇಶಗಳೊಂದಿಗೆ ಸಂಬಂಧ ಹಾಳು ಮಾಡಿಕೊಳ್ಳಲು ಪಾಕಿಸ್ತಾನ (Pakistan) ಹಿಂದು ಮುಂದು ನೋಡುತ್ತಿರುವ ಕಾರಣ, ಕಳ್ಳಸಾಗಣೆದಾರರು ಕೆಲ ವರ್ಷಗಳಿಂದ ಭಾರತವನ್ನೇ ತಮ್ಮ ಪ್ರಮುಖ ಕೇಂದ್ರವನ್ನಾಗಿ ಮಾಡಿಕೊಳ್ಳುತ್ತಿದ್ದಾರೆ.

ಅದರಲ್ಲೂ ಭಾರತ (India) ಅತ್ಯಂತ ವಿಶಾಲವಾದ ಕರಾವಳಿ ಮತ್ತು ಹಲವು ಬಂದರುಗಳನ್ನು ಹೊಂದಿರುವ ಕಾರಣ, ಕಳ್ಳಸಾಗಣೆದಾರರಿಗೆ ಭಾರತ ಪ್ರಮುಖ ರಹದಾರಿಯಾಗಿ ಕಾಣಿಸಿದೆ. ಹೀಗೆ ಭಾರತಕ್ಕೆ ನಾನಾ ಮಾರ್ಗಗಳ ಮೂಲಕ ತಲುಪುವ ಮಾದಕ ವಸ್ತು, ಇಲ್ಲಿಂದ ಅಮೆರಿಕ, ಯುರೋಪ್‌ ದೇಶಗಳಿಗೆ ರವಾನೆಯಾಗುತ್ತದೆ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

click me!