
ಬೆಂಗಳೂರು : ರಸ್ತೆ ಮಧ್ಯೆ ಕಾರು ನಿಲ್ಲಿಸಿಕೊಂಡು ನಸುಕಿನಲ್ಲಿ ಮದ್ಯ ಪಾರ್ಟಿ ನಡೆಸುತ್ತಿದ್ದನ್ನು ಪ್ರಶ್ನಿಸಿದ್ದಕ್ಕೆ ಪೊಲೀಸ್ ಕಾನ್‌ಸ್ಟೇಬಲ್‌ಗಳ ಮೇಲೆ ದುಂಡಾವರ್ತನೆ ತೋರಿದ ಆರೋಪದ ಮೇರೆಗೆ ಖಾಸಗಿ ಕಾಲೇಜಿನ ಪದವಿ ವಿದ್ಯಾರ್ಥಿ ಸೇರಿದಂತೆ ಇಬ್ಬರನ್ನು ಅಮೃತಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮರಿಯಪ್ಪನಪಾಳ್ಯ ದೇವ್ ಹರ್ಷ ಹಾಗೂ ಆರ್ಯನ್ ಬಂಧಿತರಾಗಿದ್ದು, ಈ ಕೃತ್ಯ ಎಸಗಿ ಪರಾರಿಯಾಗಿರುವ ಚಾಂದ್ ಹಾಗೂ ಮೃಣಾಲ್ ಪತ್ತೆಗೆ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಇತ್ತೀಚಿಗೆ ಆಕಾಶವಾಣಿ ಲೇಔಟ್‌ನಲ್ಲಿ ಗಸ್ತಿನಲ್ಲಿದ್ದ ಕಾನ್‌ಸ್ಟೇಬಲ್‌ಗಳಾದ ಹನುಮಂತ ಆಲಗುಂಡಿ ಹಾಗೂ ರುದ್ರಪ್ಪ ಮೇಲೆ ಆರೋಪಿಗಳು ಅನುಚಿತ ವರ್ತನೆ ತೋರಿದ್ದರು. ಈ ಘಟನೆಯಲ್ಲಿ ಹಲ್ಲೆಗೊಳಗಾಗಿದ್ದ ಪೊಲೀಸರು ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಸಮವಸ್ತ್ರ ಹರಿದು ಗುಂಡಾಗಿರಿ:
ದಾಸರಹಳ್ಳಿ ಸಮೀಪದ ಆಕಾಶವಾಣಿ ಲೇಔಟ್‌ನ ಮೇ.1 ರಂದು ನಸುಕಿ 3 ಗಂಟೆ ಸುಮಾರಿಗೆ ರಸ್ತೆ ಮಧ್ಯೆ ಕಾರು ನಿಲ್ಲಿಸಿಕೊಂಡು ಖಾಸಗಿ ಕಾಲೇಜಿನ ಬಿ.ಟೆಕ್ ವಿದ್ಯಾರ್ಥಿಗಳಾದ ಹರ್ಷ, ಚಾಂದ್, ಮೃಣಾಲ್ ಹಾಗೂ ಖಾಸಗಿ ಕಂಪನಿ ಉದ್ಯೋಗಿ ಆರ್ಯನ್ ಮದ್ಯಗೋಷ್ಠಿ ನಡೆಸುತ್ತಿದ್ದರು. ಅದೇ ವೇಳೆ ಆ ಮಾರ್ಗದಲ್ಲಿ ಗಸ್ತು ತಿರುಗುತ್ತಿದ್ದ ಅಮೃತಹಳ್ಳಿ ಠಾಣೆ ಕಾನ್‌ಸ್ಟೇಬಲ್‌ಗಳಾದ ರುದ್ರಪ್ಪ ಹಾಗೂ ಹಣಮಂತ ಬಂದಿದ್ದಾರೆ.
ಆಗ ರಸ್ತೆ ಮಧ್ಯೆ ಮದ್ಯ ಸೇವಿಸುತ್ತಿದ್ದಕ್ಕೆ ಪೊಲೀಸರು ಆಕ್ಷೇಪಿಸಿದ್ದಾರೆ. ಈ ಮಾತಿಗೆ ಕೆರಳಿದ ಒಬ್ಬಾತ, ‘ಕರ್ನಾಟಕ ಪೊಲೀಸ್ ಮಾದರ್ ಚೋರ್’ ಎಂದು ಅವಾಚ್ಯ ಶಬ್ದದಿಂದ ನಿಂದಿಸಿದ್ದಾನೆ. ಆಗ ಬೈಕ್‌ನಿಂದ ಲಾಠಿ ತೆಗೆದುಕೊಳ್ಳಲು ಕಾನ್‌ಸ್ಟೇಬಲ್ ಮುಂದಾದಾಗ ಅವರನ್ನು ಹಿಂದಿನಿಂದ ನಾಲ್ವರು ಹಿಡಿದುಕೊಂಡಿದ್ದಾರೆ.
ಬಳಿಕ ಕಾನ್‌ಸ್ಟೇಬಲ್ ಸಮವಸ್ತ್ರವನ್ನು ಹರಿದು, ಕೈಗಳಿಂದ ಗುದ್ದು ಹಾಗೂ ಕಾಲಿನಿಂದ ಒದ್ದು ಆರೋಪಿಗಳು ಮನಬಂದಂತೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಈ ಘಟನೆ ಬಳಿಕ ಅಮೃತಹಳ್ಳಿ ಠಾಣೆಯಲ್ಲಿ ಹಲ್ಲೆಗೊಳಗಾದ ಕಾನ್‌ಸ್ಟೇಬಲ್ ರುದ್ರಪ್ಪ ದೂರು ಆಧರಿಸಿ ಎಫ್‌ಐಆರ್ ದಾಖಲಾಯಿತು. ಕೊನೆಗೆ ಕಾರಿನ ನೋಂದಣಿ ಸಂಖ್ಯೆ ಆಧರಿಸಿ ಇಬ್ಬರನ್ನು ಬಂಧಿಸಲಾಗಿದ್ದು, ತಪ್ಪಿಸಿಕೊಂಡಿರುವ ಚಾಂದ್ ಹಾಗೂ ಮೃಣಾಲ್ ಪತ್ತೆಗೆ ತನಿಖೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶ್ರೀಮಂತರ ಮನೆಯ ಮಕ್ಕಳು
ಈ ಆರೋಪಿಗಳ ಪೈಕಿ ಮೃಣಾಲ್ ಹೊರತುಪಡಿಸಿ ಮೂವರು ಸ್ಥಳೀಯವಾಗಿ ಶ್ರೀಮಂತ ಕುಟುಂಬದ ಹಿನ್ನಲೆಯವರಾಗಿದ್ದಾರೆ. ಹಣದ ಮದದಲ್ಲಿ ಈ ಅಹಂಕಾರ ತೋರಿದ್ದಾರೆ ಎಂದು ತಿಳಿದು ಬಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ