ಬೆಂಗ್ಳೂರಿನ ರೌಡಿ ಶೀಟರ್‌ಗಳ ಮನೆಗಳ ಮೇಲೆ ಸಿಸಿಬಿ ದಾಳಿ

By Kannadaprabha NewsFirst Published Nov 24, 2022, 6:00 AM IST
Highlights

ಬಿಬಿಎಂಪಿ ಚುನಾವಣೆಗೂ ಮುನ್ನ ಕಾರ್ಯಾಚರಣೆ, 80ಕ್ಕೂ ಅಧಿಕ ರೌಡಿ ಶೀಟರ್‌ ಮನೆಗಳಿಗೆ ಪೊಲೀಸ್‌ ಲಗ್ಗೆ, 26 ರೌಡಿಗಳ ವಶಕ್ಕೆ ಪಡೆದು ವಿಚಾರಣೆ

ಬೆಂಗಳೂರು(ನ.24): ವಿಧಾನಸಭೆ ಹಾಗೂ ಬಿಬಿಎಂಪಿ ಚುನಾವಣೆ ಸಮೀಪಿಸುತ್ತಿರುವ ಬೆನ್ನಲೇ ಕೇಂದ್ರ ಅಪರಾಧ ವಿಭಾಗ (ಸಿಸಿಬಿ)ದ ಪೊಲೀಸರು ನಗರದ ಸಕ್ರಿಯ ರೌಡಿ ಶೀಟರ್‌ಗಳ ನಿವಾಸಿಗಳ ಮೇಲೆ ದಾಳಿ ನಡೆಸಿ ಬಿಸಿ ಮುಟ್ಟಿಸಿದ್ದು, 26 ಮಂದಿ ರೌಡಿಶೀಟರ್‌ಗಳನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.

ಜಂಟಿ ಪೊಲೀಸ್‌ ಆಯುಕ್ತ (ಅಪರಾಧ) ಡಾ.ಎಸ್‌.ಡಿ.ಶರಣಪ್ಪ ಅವರ ಮಾರ್ಗದರ್ಶನದಲ್ಲಿ ಸಿಸಿಬಿಯ ಐವರು ಎಸಿಪಿ, 19 ಮಂದಿ ಇನ್ಸ್‌ಪೆಕ್ಟರ್‌ಗಳು ಹಾಗೂ 160 ಮಂದಿ ಪೊಲೀಸ್‌ ಸಿಬ್ಬಂದಿ ಒಳಗೊಂಡ ತಂಡಗಳು ಬುಧವಾರ ಮಧ್ಯರಾತ್ರಿ 2 ಗಂಟೆ ಸುಮಾರಿಗೆ ನಗರದ ವಿವಿಧ ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲಿ ಸುಮಾರು 80 ಕ್ಕೂ ಅಧಿಕ ರೌಡಿ ಶೀಟರ್‌ಗಳ ಮೇಲೆ ಮನೆಗಳ ಮೇಲೆ ದಾಳಿ ನಡೆಸಿ ಚಳಿ ಬಿಡಿಸಿದ್ದಾರೆ.

ವಿಜಯಪುರ: ಐಪಿಎಸ್ ಅಧಿಕಾರಿ ಧ್ವನಿ ಬಳಿಸಿ ರೌಡಿಯ ರೀಲ್ಸ್‌ಗೆ ಪೊಲೀಸರೇ ಶಾಕ್..!

ದಾಳಿ ವೇಳೆ ರೌಡಿಗಳಾದ ರಾಘವೇಂದ್ರ ಪ್ರಸಾದ್‌ ಅಲಿಯಾಸ್‌ ನಾಗ, ಜಗದೀಶ ಅಲಿಯಾಸ್‌ ಟಾಮಿ, ರಾಮ ಲಕ್ಷ್ಮಣ, ಕೃಷ್ಣಮೂರ್ತಿ ಅಲಿಯಾಸ್‌ ಟಿಂಬರ್‌ ಲೇಔಟ್‌ ಕಿಟ್ಟಿ, ರಾಮ ಅಲಿಯಾಸ್‌ ಕೋತಿರಾಮ, ಸುಜೀತ್‌ ಅಲಿಯಾಸ್‌ ಡಾಕ್ಟರ್‌, ಪಾರ್ಥಿಬನ್‌ ಅಲಿಯಾಸ್‌ ಪಾಥು, ಮೂವೇಶ್‌ ಅಲಿಯಾಸ್‌ ಮೂವಿ, ನಾರಾಯಣ ಅಲಿಯಾಸ್‌ ದೊಡ್ಡ ನಾರಾಯಣ, ದೇವರಾಜ ಅಲಿಯಾಸ್‌ ದೇವಾ, ಗಿರೀಶ್‌ ಅಲಿಯಾಸ್‌ ಗುಂಡ, ರಮೇಶ್‌ ಅಲಿಯಾಸ್‌ ಕುಳ್ಳ, ಆನಂದ ಅಲಿಯಾಸ್‌ ಕಾಟು, ಸತೀಶ್‌ ಅಲಿಯಾಸ್‌ ಮೋಟಾ, ಲೋಕೇಶ್‌, ಮುನಿರಾಜು ಅಲಿಯಾಸ್‌ ಜಿರಳೆ, ಪುರುಷೋತ್ತಮ್‌ ಅಲಿಯಾಸ್‌ ದಾಮ, ಸಾದಿಕ್‌, ಮಂಜುನಾಥ ಅಲಿಯಾಸ್‌ ಹೋಟೆಲ್‌, ವೆಂಕಟೇಶಮೂರ್ತಿ ಅಲಿಯಾಸ್‌ ಕಜ್ಜಿ ವೆಂಕಿ, ರಂಜಿತ್‌, ಆಡ್ರೀನ್‌ ರಾಹುಲ್‌, ತೇಜಸ್‌, ಮಲ್ಲೇಶ, ಶಂಕರ ಹಾಗೂ ವಸೀಮವುಲ್ಲಾ ಅವರನ್ನು ವಶಕ್ಕೆ ಪಡೆಯಲಾಗಿದೆ.

ವಿಜಯಪುರದಲ್ಲಿ ರೌಡಿಗಳ ಹೊಸ ಹಾವಳಿ: ಐಪಿಎಸ್‌ ಅಧಿಕಾರಿಗಳ ಧ್ವನಿಯಲ್ಲಿ ರೀಲ್ಸ್

ಈ ಎಲ್ಲ ರೌಡಿಶೀಟರ್‌ಗಳು ಕೊಲೆ, ಕೊಲೆಗೆ ಯತ್ನ, ದರೋಡೆ, ಸುಲಿಗೆ, ಅಪಹರಣ ಸೇರಿದಂತೆ ಹಲವು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದಾರೆ. ಇವರ ಮೇಲೆ ನಿಗಾವಹಿಸುವ ಹಾಗೂ ರೌಡಿ ಚಟುವಟಿಕೆ ನಿಯಂತ್ರಿಸುವ ನಿಟ್ಟಿನಲ್ಲಿ ಈ ಮನೆಗಳ ಮೇಲೆ ದಾಳಿ ನಡೆಸಿ ವಿಚಾರಣೆ ಮಾಡಲಾಗಿದೆ. ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾದರೆ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಲಾಗಿದೆ.

ಪೊಲೀಸರ ಕಂಡು ‘ಸ್ಟಾರ್‌’ ದೌಡು

ಇನ್ನು ಕುಖ್ಯಾತ ರೌಡಿಗಳಾದ ಸೈಕಲ್‌ ರವಿ, ನಾರಾಯಣಸ್ವಾಮಿ ಅಲಿಯಾಸ್‌ ಜೆಸಿಬಿ ನಾರಾಯಣ, ಮಧುಸೂದನ ಅಲಿಯಾಸ್‌ ಮಲಯಾಳಿ ಮಧು, ವಿಲ್ಸನ್‌ ಗಾರ್ಡನ್‌ ನಾಗ, ಲೋಕೇಶ್‌ ಅಲಿಯಾಸ್‌ ಮುಲಾಮ, ಶ್ರೀಕಾಂತ ಅಲಿಯಾಸ್‌ ಊಸಪ್ಪ, ಶಹನವಾಜ್‌ ಅಲಿಯಾಸ್‌ ಶಾನು, ಸೈಲೆಂಟ್‌ ಸುನೀಲ್‌, ಒಂಟೆ ರೋಹಿತ್‌, ಲಕ್ಕಿ, ಕುಮರೇಶ್‌, ಮೈಕಲ್‌, ಚೊಳ್ಳು ಇಮ್ರಾನ್‌, ಕಾಡುಬೀಸನಹಳ್ಳಿ ಸೋಮ, ರೋಹಿತ ಇವರುಗಳು ತಲೆಮರೆಸಿಕೊಂಡಿದ್ದಾರೆ. ಕುಖ್ಯಾತ ರೌಡಿ ಸ್ಟಾರ್‌ ನವೀನ್‌ ಸಿಸಿಬಿ ಪೊಲೀಸರ ದಾಳಿ ವೇಳೆ ಪೊಲೀಸರನ್ನು ಕಂಡು ಓಡಿ ಹೋಗಿದ್ದಾನೆ. ಈ ವೇಳೆ ಈತನ ಮೊಬೈಲ್‌ ಹಾಗೂ ಚಾಕನ್ನು ಜಪ್ತಿ ಮಾಡಲಾಗಿದೆ.
 

click me!