ಜ್ಯೋತಿಷ್ಯಿಯೊಬ್ಬ ಬೆಂಗಳೂರಿನಲ್ಲಿ ಕುಳಿತುಕೊಂಡು ಫೇಸ್‌ಬುಕ್ ಮೂಲಕ ಲಕ್ಷಾಂತರ ವಂಚನೆ ಮಾಡಿರುವ ಪ್ರಕರಣ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ. ಕೌಟುಂಬಿಕ ಜಗಳವನ್ನ ಮುಖ ನೋಡದ, ಕುಲ-ಗೋತ್ರ ಗೊತ್ತಿಲ್ಲದ ವ್ಯಕ್ತಿ ಎಲ್ಲೋ ಕೂತ್ಕಂಡ್ ನಿಮ್ಮ ಮನೆ ಸಮಸ್ಯೆಯನ್ನ ಬಗೆಹರಿಸಿ ಅಂತ ಹಣಕ್ಕೆ ಪಂಗನಾಮ ಹಾಕಿದ್ದೇನೆ.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು (ಅ.10): ಜ್ಯೋತಿಷ್ಯಿಯೊಬ್ಬ ಬೆಂಗಳೂರಿನಲ್ಲಿ ಕುಳಿತುಕೊಂಡು ಫೇಸ್‌ಬುಕ್ ಮೂಲಕ ಲಕ್ಷಾಂತರ ವಂಚನೆ ಮಾಡಿರುವ ಪ್ರಕರಣ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ. ಕೌಟುಂಬಿಕ ಜಗಳವನ್ನ ಮುಖ ನೋಡದ, ಕುಲ-ಗೋತ್ರ ಗೊತ್ತಿಲ್ಲದ ವ್ಯಕ್ತಿ ಎಲ್ಲೋ ಕೂತ್ಕಂಡ್ ನಿಮ್ಮ ಮನೆ ಸಮಸ್ಯೆಯನ್ನ ಬಗೆಹರಿಸಿ ಅಂತ ಹಣಕ್ಕೆ ಪಂಗನಾಮ ಹಾಕಿದ್ದೇನೆ. ಫೇಸ್‌ಬುಕ್ ಜ್ಯೋತಿಷಿಯ ಮೊರೆ ಹೋದ ಮಹಿಳೆ ಎರಡೇ ತಿಂಗಳಲ್ಲಿ 1 ಲಕ್ಷದ 10 ಸಾವಿರ ಹಣ ಕಳೆದುಕೊಂಡಿದ್ದಾಳೆ.
ಬೆಂಗಳೂರು ಟು ಚಿಕ್ಕಮಗಳೂರು: ಬೆಂಗಳೂರು ಮೂಲದ ಪಂಡಿತ್ ಮೋದಿ ಬೆಟ್ಟಪ್ಪ ಅಸ್ಟ್ರಾಲಜಿಯ ಗಣೇಶ್ ಗೊಂದಾಲ್ ಎಂಬ ವ್ಯಕ್ತಿ ಫೇಸ್‌ಬುಕ್‌ನಲ್ಲಿ ಜನರನ್ನ ಯಾಮಾರಿಸೋಕೆ ಅಂತನೇ ಜ್ಯೋತಿಷ್ಯದ ಚಿಹ್ನೆಗಳನ್ನು ಜಿಗಿ-ಜಿಗಿ ಮಾಡಿ ಅಪ್ ಲೋಡ್ ಮಾಡಿದ್ದಾನೆ. ಕಲರ್ ಫುಲ್ ಪ್ರೋಮೋ ಕಂಡು ಕಾಫಿನಾಡ ಮಹಿಳೆಯೊಬ್ಳು ಮೋಸ ಹೋಗಿ ಎರಡೇ ತಿಂಗಳಿಗೆ ಲಕ್ಷಕ್ಕೂ ಅಧಿಕ ಹಣವನ್ನ ಕಳೆದುಕೊಂಡಿದ್ದಾಳೆ. ಫೇಸ್ಬುಕ್‌ನಲ್ಲಿ ಈ ಪ್ರೋಮೋ ನೋಡಿದ ಚಿಕ್ಕಮಗಳೂರಿನ ಮಹಿಳೆಯೊಬ್ರು ಕೌಟುಂಬಿಕ ಸಮಸ್ಯೆಯ ಬಗ್ಗೆ ಕಣ್ಣೀರಾಕ್ಕೊಂಡು ಇವರಿಗೆ ಕರೆ ಮಾಡಿದ್ದಾಳೆ. ಹೆದರಬೇಡಿ. ನಾನೀದ್ದೇನೆ.
Chikkamagaluru: ಡಯಾಲಿಸೀಸ್ ಕೇಂದ್ರಕ್ಕೆ ಗುಣಮಟ್ಟದ ಔಷಧಿ ಪೂರೈಕೆಗೆ ಒತ್ತಾಯ
ನಿಮ್ಮ ಸಮಸ್ಯೆಗೆ ಮುಕ್ತಿ ಕೊಡ್ತೀನಿ ಅಂತ ಲಕ್ಷಕ್ಕೆ ಮುಂಡಾಯಿಸಿದ್ದಾನೆ. 3, 7, 13, 22, 30 ಹೀಗೆ ಅವನಿಗೆ ಬೇಕಾದಾಗೆಲ್ಲಾ ರಾಮ-ಕೃಷ್ಣನ ಪೂಜೆ ಲೆಕ್ಕದಲ್ಲಿ ಹಣ ಹಾಕಿಸಿಕೊಂಡಿದ್ದಾನೆ. ಪಾಪ... ಆ ಮಹಿಳೆ ಕುಟುಂಬದ ಕಷ್ಟ-ಕಾರ್ಪಣ್ಯ ಮುಗ್ದೋಗುತ್ತೆ ಅಂತ ಸಾಲ-ಸೋಲ ಮಾಡಿ ಕಳ್ಳ ಜ್ಯೋತಿಷಿಯ ಖಾತೆ ತುಂಬಿದ್ದಾಳೆ. ಆದರೆ, ಆತ ಇದ್ಯಾವುದೋ ಚಿನ್ನ ಮೊಟ್ಟೆ ಇಡೋ ಕೋಳಿ ಅಂತ ಮತ್ತೆ ಹಣ ಕೇಳಿದಾಗ ಅನುಮಾನಗೊಂಡು ಮಹಿಳೆ ನಗರದ ಸೆನ್ ಠಾಣೆಗೆ ದೂರು ನೀಡಿದ್ದಾಳೆ. ಬೆಂಗಳೂರಿನ ಕೊಟ್ಟಿಗೆಹಳ್ಳಿಯಲ್ಲಿ ಯಾರ್ದೋ ದುಡ್ಡಲ್ಲಿ ಎಲ್ಲಮ್ಮನ ಜಾತ್ರೆ ಮಾಡ್ತಿದ್ದ 25ರ ಹರೆಯದ ಯುವಕನಿಗೆ ಕಾಫಿನಾಡ ಪೊಲೀಸರು ಬಂಧಿಸಿ ಕೋರ್ಟ್‌ಗೆ ನೀಡಿದ್ದಾರೆ.
ಆನ್‌ಲೈನ್ ಜ್ಯೋತಿಷಿ ಬಗ್ಗೆ ಎಚ್ಚರಿಕೆ ನೀಡಿದ ಎಸ್‌ಪಿ: ಆ ಮಹಿಳೆಗೆ ಇವ್ನ ಮೇಲೆ ಅನುಮಾನ ಬರ್ತಿತ್ತೋ-ಇಲ್ವೋ ಗೊತ್ತಿಲ್ಲ. ಆದರೆ, ಆತ ಎಲ್ಲಾ ಪೂಜೆ ಮುಗಿದಿದೆ. ನಿಮ್ಮ ಸಮಸ್ಯೆಗಾಗಿ ಕೊನೆಯ ಪೂಜೆ ಒಂದಿದೆ. ಅದನ್ನ ಮಾಡಲು ನಾನೇ ಮತ್ತೊಬ್ಬ ದೊಡ್ಡ ಜ್ಯೋತಿಷಿ ಬಳಿ ಹೋಗಬೇಕು ಅಂತ ಮತ್ತೆ ಹಣ ಕೇಳಿದ್ದಾನೆ. ಆಗ ಅನುಮಾನಗೊಂಡ ಮಹಿಳೆ ಚಿಕ್ಕಮಗಳೂರು ನಗರದ ಬಸವನಹಳ್ಳಿ ಠಾಣೆಗೆ ಹೋಗಿ ದೂರು ನೀಡಿದ್ದಾಳೆ. ಈ ಜ್ಯೋತಿಷಿ ಅಸಲಿಯೋ-ನಕಲಿಯೋ ಗೊತ್ತಿಲ್ಲ. ಆದರೆ, 25ನೇ ವಯಸ್ಸಿಗೆ ಅದ್ಯಾವ ವಿದ್ಯೆ ಕಲಿತನೋ ಗೊತ್ತಿಲ್ಲ. ಇವರ ಅಪ್ಪ ಕೂಡ ಜ್ಯೋತಿಷಿಯಂತೆ. ಕೇಳಿದರೆ ಕೊಳ್ಳೇಗಾಲಕ್ಕೆ ಹೋಗಿ ಕಲಿತೆ ಅಂತಾನಂತೆ.
ಕಾಫಿನಾಡು ಚಿಕ್ಕಮಗಳೂರಿಗೆ 4 ತಿಂಗಳಲ್ಲಿ 69 ಸಾವಿರ ಪ್ರವಾಸಿ ವಾಹನ ಎಂಟ್ರಿ
ಕೊಳ್ಳೆಗಾಲದಲ್ಲಿ ಕಲಿತ ವಿದ್ಯೆಯನ್ನ ಈಗ ಜೈಲಲ್ಲಿ ಕರಗತ ಮಾಡಿಕೊಳ್ಳುತ್ತಿದ್ದಾನೆ. ಆದ್ರೆ, ಆತ ಮೋಸ ಮಾಡಿರುವುದು ಚಿಕ್ಕಮಗಳೂರು ಮಹಿಳೆಗಾದ್ರು ಆತ ಮೂಲತಃ ಬೆಂಗಳೂರಿನವನು. ಹಾಗಾಗಿ, ಬೆಂಗಳೂರಿನ ಜನ ಕೂಡ ಇವನ ಬಗ್ಗೆ ಎಚ್ಚರಿಕೆಯಿಂದಿರಬೇಕು. ಹಾಗಾಗಿ, ಎಸ್ಪಿ ಉಮಾಪ್ರಶಾಂತ್ ಕೂಡ ಆನ್ಲೈನ್ ಜ್ಯೋತಿಷಿಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕೆಂದು ಎಂದು ಹೇಳಿದ್ದಾರೆ.ಒಟ್ಟಾರೆ, ಕೊಟ್ಟೋನು ಕೋಡಂಗಿ ಇಸ್ಕಂಡೋನು ವೀರಭದ್ರ ಎಂಬಂತಾಗಿದೆ ಆ ಮಹಿಳೆಯ ಪಾಡು. ಕೌಟುಂಬಿಕ ಸಮಸ್ಯೆ ಬಗೆಹರಿದು ಮಾನಸಿಕ ನೆಮ್ಮದಿ ಸಿಕ್ಕರೆ ಸಾಕೆಂದು ಕೇಳಿದಾಗೆಲ್ಲಾ ಸಾಲ-ಸೋಲ ಮಾಡಿ ಹಣ ಹಾಕಿದ ಆ ಮಹಿಳೆ ಇಂದು ಕಣ್ಣೀರು ಸುರಿಸುತ್ತಿದ್ದಾರೆ.