ಪೊಲೀಸರ ಮೇಲೆ ಮಾರಕಾಸ್ತ್ರದಿಂದ ಹಲ್ಲೆ: ರೌಡಿಶೀಟರ್‌ ಕಾಲಿಗೆ ಗುಂಡೇಟು

By Kannadaprabha NewsFirst Published Feb 12, 2021, 8:27 AM IST
Highlights

ತಲೆಮರೆಸಿಕೊಂಡ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ ಪೊಲೀಸರು| ರೌಡಿಶೀಟರ್‌ ವಿರುದ್ಧ ಡಕಾಯತಿ, ಕೊಲೆ ಯತ್ನ, ಸುಲಿಗೆ ಸೇರಿದಂತೆ ಯಲಹಂಕ ಠಾಣೆಯೊಂದರಲ್ಲೇ 14 ಅಪರಾಧ ಪ್ರಕರಣ ದಾಖಲು| ಗುಂಡು ಹಾರಿಸಿ ಆರೋಪಿಯನ್ನ ಬಂಧಿಸಿದ ಪೊಲೀಸರು|  

ಬೆಂಗಳೂರು(ಫೆ.12): ಬಂಧಿಸಲು ಹೋದ ಪೊಲೀಸರ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ನಡೆಸಿದ ರೌಡಿಶೀಟರ್‌ಗೆ ಗುಂಡು ಹಾರಿಸಿ ಯಲಹಂಕ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಜೆ.ಜೆ.ನಗರದ ರಂಗನಾಥ ಕಾಲೋನಿ ನಿವಾಸಿ ರೌಡಿಶೀಟರ್‌ ಶಬರೀಶ್‌ ಅಲಿಯಾಸ್‌ ಅಪ್ಪಿ (27) ಬಂಧಿತ. ಘಟನೆಯಲ್ಲಿ ಹೆಡ್‌ಕಾನ್ಸ್‌ಟೇಬಲ್‌ ಶಿವಕುಮಾರ್‌ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನೆಲಮಂಗಲದ ಇಮ್ರಾನ್‌(26) ಹಾಗೂ ದೇವನಹಳ್ಳಿಯ ಮುರಳಿ(21) ಎಂಬ ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಾರು ಕದ್ದು ಪರಾರಿ:

ನಾಗರಾಜ್‌ ಎಂಬುವರು ಬುಧವಾರ ರಾತ್ರಿ 12.30 ಗಂಟೆ ಸುಮಾರಿಗೆ ಕೋಗಿಲು ಕ್ರಾಸ್‌ ಮಾರ್ಗವಾಗಿ ತಮ್ಮ ಕಾರಿನಲ್ಲಿ ಮನೆಗೆ ಹೋಗುತ್ತಿದ್ದರು. ಈ ವೇಳೆ ಆಟೋದಲ್ಲಿ ಬಂದ ಶಬರೀಶ್‌ ಅಂಡ್‌ ಗ್ಯಾಂಗ್‌, ನಾಗರಾಜ್‌ ಅವರ ಕಾರು ಅಡ್ಡಗಟ್ಟಿ, ಮಾರಕಾಸ್ತ್ರಗಳಿಂದ ನಾಗರಾಜ್‌ ಅವರ ಮೇಲೆ ಹಲ್ಲೆ ನಡೆಸಿ .700 ನಗದು, ಮೊಬೈಲ್‌, ಎಟಿಎಂ ಕಾರ್ಡ್‌ ಮತ್ತು ಕಾರು ಕಸಿದುಕೊಂಡು ಸ್ಥಳದಿಂದ ಪರಾರಿಯಾಗಿತ್ತು. ಈ ಸಂಬಂಧ ನಾಗರಾಜ್‌ ಯಲಹಂಕ ಠಾಣೆಗೆ ಮಾಹಿತಿ ನೀಡಿದ್ದರು. ಕೂಡಲೇ ಯಲಹಂಕ ಇನ್ಸ್‌ಪೆಕ್ಟರ್‌ ರಾಮಕೃಷ್ಣರೆಡ್ಡಿ ಅವರ ನೇತೃತ್ವದ ತಂಡ ಆರೋಪಿಗಳ ಬಂಧನಕ್ಕೆ ಬಲೆ ಬೀಸಿತ್ತು.

ಹಲ್ಲೆಗೆ ಯತ್ನ, ಕುಖ್ಯಾತ ದರೋಡೆಕೋರನ ಮೇಲೆ ಪೊಲೀಸ್ ಫೈರಿಂಗ್!

ಗುರುವಾರ ಬೆಳಗಿನ ಜಾವ 4.40ರ ಸುಮಾರಿಗೆ ಆರೋಪಿಗಳು ಯಲಹಂಕದ ವೆಂಕಟಾಲ ಬಸ್‌ ನಿಲ್ದಾಣ ಬಳಿ ಕಾರಿನ ಸಮೇತ ಇರುವ ಬಗ್ಗೆ ಮಾಹಿತಿ ಲಭ್ಯವಾತ್ತು. ಕೂಡಲೇ ಇನ್ಸ್‌ಪೆಕ್ಟರ್‌ ರಾಮಕೃಷ್ಣ ರೆಡ್ಡಿ ಅವರ ತಂಡ ಸ್ಥಳಕ್ಕೆ ಹೋಗಿದ್ದು, ಪೊಲೀಸರನ್ನು ನೋಡಿದ ಆರೋಪಿಗಳು ಕಾರನ್ನು ವೇಗವಾಗಿ ಚಲಾಯಿಸಿಕೊಂಡು ಹೋಗಲು ಯತ್ನಿಸಿದರು. ಯಲಹಂಕ ಉಪನಗರದ ಗಣೇಶ ಚಿತ್ರಮಂದಿರದ ಹಿಂಭಾಗದ ರಸ್ತೆಯಲ್ಲಿ ಆರೋಪಿಗಳು ಕಾರಲ್ಲಿ ಅಡ್ಡಗಿದ್ದರು. ಆ ವೇಳೆ ಶಬರೀಶ್‌, ಹೆಡ್‌ ಕಾನ್‌ಸ್ಟೇಬಲ್‌ ಮೇಲೆ ಹಲ್ಲೆ ನಡೆಸಿ ಪರಾರಿಗೆ ಯತ್ನಿಸಿದ್ದ. ಈ ವೇಳೆ ಇನ್ಸ್‌ಪೆಕ್ಟರ್‌ ಗುಂಡು ಹಾರಿಸಿ ಬಂಧಿಸಿದರು ಎಂದು ಪೊಲೀಸರು ಮಾಹಿತಿ ನೀಡಿದರು.

ಶಬರೀಶ್‌ ಯಲಹಂಕ ಠಾಣೆಯ ರೌಡಿಶೀಟರ್‌ ಆಗಿದ್ದು, ಆತನ ವಿರುದ್ಧ ಡಕಾಯತಿ, ಕೊಲೆ ಯತ್ನ, ಸುಲಿಗೆ ಸೇರಿದಂತೆ ಯಲಹಂಕ ಠಾಣೆಯೊಂದರಲ್ಲೇ 14 ಅಪರಾಧ ಪ್ರಕರಣಗಳಿವೆ. ಉಳಿದಂತೆ ಸಂಪಿಗೆಹಳ್ಳಿ, ಸಂಜಯನಗರ, ಕುಮಾರಸ್ವಾಮಿ ಲೇಔಟ್‌ ಸೇರಿದಂತೆ ಹಲವು ಠಾಣೆಯಲ್ಲಿ ಅಪರಾಧ ಪ್ರಕರಣಗಳಿವೆ. ಆರೋಪಿಯನ್ನು ಡಕಾಯತಿ ಪ್ರಕರಣದಲ್ಲಿ ಕಳೆದ ವರ್ಷ ಕುಮಾರಸ್ವಾಮಿ ಲೇಔಟ್‌ ಠಾಣೆ ಪೊಲೀಸರು ಬಂಧಿಸಿ, ಜೈಲಿಗಟ್ಟಿದ್ದರು. ಕಳೆದ ತಿಂಗಳಷ್ಟೇ ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆ ಹೊಂದಿದ್ದ ಆರೋಪಿ ಪುನಃ ಅಪರಾಧ ಪ್ರಕರಣದಲ್ಲಿ ಭಾಗಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
 

click me!