ಬೆಳಗಾವಿ: ಬೆಳ್ಳಂಬೆಳಿಗ್ಗೆ ಕುಂದಾನಗರಿಯಲ್ಲಿ ಫೈರಿಂಗ್‌, ಕೊಲೆ ಆರೋಪಿ ಬಂಧನ

By Girish GoudarFirst Published Jun 21, 2022, 10:26 AM IST
Highlights

*   ಕೊಲೆ ಆರೋಪಿ ವಿಶಾಲ್‌ ಸಿಂಗ್ ಮೇಲೆ ಎಸಿಪಿ ಭರಮಣಿ ಫೈರಿಂಗ್
*   ರಿಯಲ್ ಎಸ್ಟೇಟ್ ಉದ್ಯಮಿ ರಾಜು ದೊಡ್ಡಬೊಮ್ಮನ್ನವರ್ ಕೊಲೆ ಆರೋಪಿ ಕಾಲಿಗೆ ಗುಂಡೇಟು
*  ಪೊಲೀಸ್ ಪೇದೆ ಯಾಸೀನ್ ನದಾಫ್ ಬಲಗೈಗೆ ಚೂರಿ ಇರಿದಿದ್ದ ಆರೋಪಿ
 

ವರದಿ: ಮಹಾಂತೇಶ ಕುರಬೇಟ್, ಏಷ್ಯಾನೆಟ್ ಸುವರ್ಣ ನ್ಯೂಸ್, ಬೆಳಗಾವಿ

ಬೆಳಗಾವಿ(ಜೂ.21): ಮಾ. 15ರಂದು ಬೆಳಗಾವಿಯ ಮಂಡೋಳಿ ರಸ್ತೆಯಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ರಾಜು ದೊಡ್ಡಬೊಮ್ಮನ್ನವರ್ ಕೊಲೆ ಆರೋಪಿ ಕಾಲಿಗೆ ಗುಂಡೇಟು ನೀಡಿ ಪೊಲೀಸರು ಬಂಧಿಸಿದ್ದಾರೆ. ರೌಡಿಶೀಟರ್ ವಿಶಾಲ್‌ಸಿಂಗ್ ಚೌಹಾನ್ ವಿರುದ್ಧ ಕರ್ನಾಟಕ ಮಹಾರಾಷ್ಟ್ರದಲ್ಲಿ ಕೊಲೆ, ಸುಲಿಗೆ, ಡಕಾಯಿತಿ ಸೇರಿ 10ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದವು. ಕಳೆದ ಮೂರು ತಿಂಗಳಿಂದ ರೌಡಿಶೀಟರ್ ವಿಶಾಲ್‌ಸಿಂಗ್ ಚೌಹಾನ್‌ ಪತ್ತೆಗೆ ಪೊಲೀಸರು ಬಲೆ ಬೀಸಿದ್ದರು. 

ಬೆಳಗಾವಿಯ ವೀರಭದ್ರ ನಗರ ಬಳಿ ಕೊಲೆ ಆರೋಪಿ ವಿಶಾಲ್‌ಸಿಂಗ್ ಚೌಹಾನ್ ಇದ್ದಾನೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ, ಬೆಳಗ್ಗೆ 3.30ರ ಸುಮಾರಿಗೆ ಎಸಿಪಿ ನಾರಾಯಣ ಭರಮಣಿ & ಟೀಮ್ ಸ್ಥಳಕ್ಕೆ ದೌಡಾಯಿಸಿತ್ತು. ಪೊಲೀಸರನ್ನು ಕಂಡು ಬೈಕ್‌ನಲ್ಲಿ ಎಸ್ಕೇಪ್ ಆಗಲು ಯತ್ನಿಸಿದ ರೌಡಿಶೀಟರ್ ವಿಶಾಲ್‌ಸಿಂಗ್ ಚೌಹಾನ್ ನನ್ನು ಚೇಸ್ ಮಾಡಿ ಪೊಲೀಸರು ಹಿಡಿಯುವ ವೇಳೆ ಪೊಲೀಸ್ ಪೇದೆ ಯಾಸೀನ್ ನದಾಫ್ ಕೈಗೆ ಚಾಕುವಿನಿಂದ ಇರಿದು ಪರಾರಿಗೆ ಯತ್ನಿಸಿದ್ದ. ಈ ವೇಳೆ ಎಸಿಪಿ ನಾರಾಯಣ ಭರಮಣಿ ಆರೋಪಿ ಕಾಲಿಗೆ ಗುಂಡೇಟು ನೀಡಿ ಬಂಧಿಸಿದ್ದಾರೆ‌. ಆರೋಪಿ ವಿಶಾಲ್‌ಸಿಂಗ್ ಚೌಹಾನ್ ಹಾಗೂ ಪೊಲೀಸ್ ಪೇದೆ ಯಾಸೀನ್ ನದಾಫ್ ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಹಾವೇರಿ ಮಹಿಳೆ ಮೇಲಿನ ಶೂಟೌಟ್‌ ಕೇಸ್‌: ಇಬ್ಬರ ಬಂಧನ

ರೌಡಿಶೀಟರ್ ಬ್ಲಾಗ್‌ನಲ್ಲಿ ಮಾರಕಾಸ್ತ್ರ, ಕಂಟ್ರಿ ಪಿಸ್ತೂಲ್ ಪತ್ತೆ

ಇನ್ನು ರೌಡಿಶೀಟರ್ ವಿಶಾಲ್‌ಸಿಂಗ್ ಚೌಹಾನ್ ಬ್ಯಾಗ್‌ನಲ್ಲಿ ಮಾರಕಾಸ್ತ್ರ ಹಾಗೂ ಕಂಟ್ರಿ ಪಿಸ್ತೂಲ್ ಪತ್ತೆಯಾಗಿದೆ. ಕೊಲೆ, ಸುಲಿಗೆ, ದರೋಡೆ ಪ್ರಕರಣ ಸಂಬಂಧ ಕರ್ನಾಟಕದಲ್ಲಿ 9 ಹಾಗೂ ಮಹಾರಾಷ್ಟ್ರದಲ್ಲಿ ಎರಡು ಪ್ರಕರಣಗಳು ಆರೋಪಿ ವಿಶಾಲ್‌ಸಿಂಗ್ ಚೌಹಾನ್ ಮೇಲೆ ದಾಖಲಾಗಿದ್ದವು‌. ರಿಯಲ್ ಎಸ್ಟೇಟ್ ಉದ್ಯಮಿ ರಾಜು ದೊಡ್ಡಬೊಮ್ಮನ್ನವರ್ ಹತ್ಯೆ ಮಾಡಿ ಊರು ತೊರೆದಿದ್ದ ರೌಡಿಶೀಟರ್ ವಿಶಾಲ್‌ಸಿಂಗ್ ಚೌಹಾನ್ ಮಹಾರಾಷ್ಟ್ರದಲ್ಲಿ ತಲೆಮರೆಸಿಕೊಂಡಿದ್ದ ಎನ್ನಲಾಗಿದೆ.

ರಿಯಲ್ ಎಸ್ಟೇಟ್ ಉದ್ಯಮಿ ಹತ್ಯೆಗೆ ಪತ್ನಿಯೇ ನೀಡಿದ್ದಳು ಸುಪಾರಿ

ರಿಯಲ್ ಎಸ್ಟೇಟ್ ಉದ್ಯಮಿ ರಾಜು ದೊಡ್ಡಬೊಮ್ಮನ್ನವರ್ ಮೂರು ಮದುವೆಯಾಗಿದ್ದ. ರಾಜು ಹತ್ಯೆಗೆ ಎರಡನೇ ಪತ್ನಿ ಕಿರಣಾ ಸುಪಾರಿ ನೀಡಿದ್ದಳೆಂಬ ಆರೋಪ ಕೇಳಿ ಬಂದಿತ್ತು. ಪ್ರಕರಣ ಸಂಬಂಧ ಕೊಲೆಯಾದ ರಾಜು ದೊಡ್ಡಬೊಮ್ಮನ್ನವರ್ ಎರಡನೇ ಪತ್ನಿ ಕಿರಣಾ‌ ಹಾಗೂ ಬ್ಯುಸಿನೆಸ್‌ ಪಾರ್ಟ್ನರ್‌ಗಳಾದ ಶಶಿಕಾಂತ ಶಂಕರಗೌಡ, ಧರಣೇಂದ್ರ ಘಂಟಿ, ಜಯ ಕರ್ನಾಟಕ ಸಂಘಟನೆ ಜಿಲ್ಲಾಧ್ಯಕ್ಷ ಸಂಜಯ್ ರಜಪೂತ್, ವಿಜಯ್ ಜಾಗೃತ್, ಮಧು ಕಲ್ಲಂತ್ರಿ ಸೇರಿ ಒಟ್ಟು ಎಂಟು ಆರೋಪಿಗಳನ್ನು ಬೆಳಗಾವಿ ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದರು. ವಿಶಾಲ್‌ಸಿಂಗ್ ಚೌಹಾನ್ ಬಂಧನದಿಂದ ಬಂಧಿತರ ಸಂಖ್ಯೆ 9ಕ್ಕೇರಿದೆ.
 

click me!