ಯುವತಿಯ ವೇಷದಲ್ಲಿ ಬಂದು ಆಂಥೂರಿಯಂ ಗಿಡಗಳನ್ನು ಕದಿಯುತ್ತಿದ್ದ ಯುವಕನನ್ನು ಬಂಧಿಸಿದ ಘಟನೆ ಕೇರಳದಲ್ಲಿ ವರದಿಯಾಗಿದೆ. ಅಂದಾಜು 2 ಲಕ್ಷ ಮೌಲ್ಯದ ಅಂಥೂರಿಯಂ ಗಿಡಗಳನ್ನು ಈತ ಕದ್ದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ತಿರುವನಂತಪುರ (ಜ.14): ಅಂದಾಜು ಎರಡು ಲಕ್ಷ ಮೌಲ್ಯದ ಅಂಥೂರಿಯಂ ಗಿಡಗಳನ್ನು ಯುವತಿಯ ವೇಷದಲ್ಲಿ ಬಂದು ಕದಿಯುತ್ತಿದ್ದ ಪುರುಷನನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಕೊಲ್ಲಂ ಚವರ ಗ್ರಾಮದ ಪುದುಕ್ಕಾಡ್ ಕಿಝಕ್ಕತ್ತಿಲ್‌ನ ಮುದಿಯಿಲ್ ಮನೆಯ 28 ವರ್ಷದ ವಿನೀತ್ ಕ್ಲೀಟಸ್ಎಂದು ಗುರುತಿಸಲಾಗಿದೆ. ಅಮರವಿಳ ಕೊಳ್ಳದ ಮಂಚಮಕುಳಿಯಲ್ಲಿರುವ ಗ್ರೀನ್ ಹೌಸ್ ನ ನಿವೃತ್ತ ಐಆರ್ ಇ ಅಧಿಕಾರಿ ಜಪಮಣಿ ಅವರ ಪತ್ನಿ ವಿಲಾಸಿನಿ ಭಾಯಿ ಅವರ ಮನೆಯಲ್ಲಿ ಬೆಳೆಸಿದ್ದ ವಿಶೇಷ ತಳಿಯ ಸುಮಾರು 200 ಅಂಥೋರಿಯಂ ಗಿಡಗಳನ್ನು ಕಳ್ಳತನ ಮಾಡಿದ್ದಾರೆ. ಜಪಮಣಿ ಮತ್ತು ಅವರ ಪತ್ನಿ ವಿಲಾಸಿನಿ ಭಾಯಿ ಅವರು ಅಲಂಕಾರಿಕ ಸಸ್ಯಗಳ ನಿರ್ವಹಣೆಗಾಗಿ 2017 ರಲ್ಲಿ ರಾಷ್ಟ್ರಪತಿ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಆರೋಪಿಯು 2011ರ ಮಾರ್ಚ್‌ನಲ್ಲಿ ಹಾಗೂ ಮೂರು ತಿಂಗಳ ಹಿಂದೆ ಮಹಿಳೆಯ ವೇಷ ಧರಿಸಿ ಕಳ್ಳತನ ಮಾಡಿರುವುದು ಸಾಬೀತಾಗಿದೆ.ಸಿಸಿಟಿವಿ ದೃಶ್ಯಾವಳಿ ಆಧರಿಸಿ ತನಿಖೆ ನಡೆಸಿದಾಗ ಆರೋಪಿ ಸಿಕ್ಕಿಬಿದ್ದಿದ್ದಾನೆ.
ಘಟನೆಯ ನಂತರ ಆರೋಪಿ ಬೆಂಗಳೂರಿನಲ್ಲಿ ತಲೆಮರೆಸಿಕೊಂಡಿದ್ದ.ಆರೋಪಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಗಿಡಗಳನ್ನು ಮಾರಾಟ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ಈ ಹಿಂದೆಯೂ ಇದೇ ರೀತಿಯ ಅಪರಾಧ ಎಸಗಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿದೆ.
ನೆಯ್ಯಾತಿಂಕರ ಠಾಣೆ ಇನ್ಸ್ ಪೆಕ್ಟರ್ ಸಿ.ಸಿ.ಪ್ರತಾಪಚಂದ್ರ ನೇತೃತ್ವದಲ್ಲಿ ಸಬ್ ಇನ್ಸ್ ಪೆಕ್ಟರ್ ಆರ್. ಸಜೀವ್, ಸಹಾಯಕ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಗಳಾದ ಸುರೇಶ್ ಕುಮಾರ್, ಅಜಿತಕುಮಾರಿ, ಸಿವಿಲ್ ಪೊಲೀಸ್ ಅಧಿಕಾರಿ ರತೀಶ್ ಎ.ಕೆ ಅವರನ್ನೊಳಗೊಂಡ ತಂಡ ಶಂಕಿತನನ್ನು ಬಂಧಿಸಿದೆ. ಆರೋಪಿಯನ್ನು ನೆಯ್ಯಾತಿಂಕರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.