* ಕುರಿ ಕಾಳಗದ ಸ್ಫರ್ಧೆಯಲ್ಲಿ ಗೆಲುವಿನ ಓಟ ತಡೆಯಲು ಟಗರು ಕದ್ದ ಕಳ್ಳರು,
* ಕಾಳಗದ ಕುರಿ ಮಟನ್ ಸ್ಟಾಲ್‌ನಲ್ಲಿ ಪತ್ತೆ
* ಕಾಳಗದ ಕುರಿ ಕದ್ದ ಸ್ನೇಹಿತರು ಕೇವಲ 25 ಸಾವಿರ ರೂ.ಗೆ ಚನ್ನಗಿರಿ ಮಟನ್ ಸ್ಟಾಲ್‌ಗೆ ಮಾರಾಟ
ವರದಿ - ವರದರಾಜ್
ದಾವಣಗೆರೆ (ಏ.16): ದಾವಣಗೆರೆ ಅಂದ್ರೆ ಸಾಕು..ಜಟ್ಟಿಗಳಿಗೆ ಫೇಮಸ್ಸ್ ..ಅಂತೆಯೇ ಕುರಿ ಕಾಳಗಕ್ಕೂ ಹೇಳಿ ಮಾಡಿಸಿದ ರಣಭೂಮಿ..ಇಡೀ ಜಿಲ್ಲೆಯಲ್ಲಿ ಕುರಿ ಕಾಳಗ, ಕುಸ್ತಿ ಸ್ಪರ್ಧೆಗಳು ಹಬ್ಬ ಹರಿದಿನಗಳಲ್ಲಿ ಇಲ್ಲಿನ ಜನರಿಗೆ ಸಖತ್ ಮನರಂಜನೆ ಕೊಡುತ್ತದೆ. ಸ್ಫರ್ಧೆಯಲ್ಲಿ ಗೆಲ್ಲುವ ಉಡ್ಡಿ ಕುರಿಗಳನ್ನು ನೋಡಿ ಹಾಡಿ ಹೊಗಳುವುದೇ ಒಂದು ಸಂಭ್ರಮ. ಮಾಯಕೊಂಡ ಗ್ರಾಮದಲ್ಲಿ ಏಪ್ರೀಲ್ 3 ರಂದು ಕಳ್ಳತನವಾದ 1 ಲಕ್ಷ ಬೆಲೆಬಾಳುವ ಕುರಿಯನ್ನು ದಾವಣಗೆರೆ ಪೊಲೀಸರು ಪತ್ತೆ ಹಚ್ಚಿದ್ದಾರೆ. ಕುರಿಕಾಳಗದ ಉಡ್ಡಿ ಕುರಿಯನ್ನು ಕದಿದ್ದು ಹೇಗೆ? ಅದನ್ನು ಕದ್ದವರು ಯಾರು ಎಂಬುದರ ರೋಚಕ ಕತೆ ಇಲ್ಲಿದೆ..
ಉಡ್ಡಿ ಕುರಿ ಕದ್ದ ಹಿನ್ನೆಲೆ : ಮಾಯಕೊಂಡದ ಕಲ್ಲೇಶ ಎಂಬುವರು ದಾವಣಗೆರೆಯಿಂದ ಎರಡು ವರ್ಷದ ಕಾಳಗದ ಗಂಡು ಕುರಿಯನ್ನು 75 ಸಾವಿರ ರೂ.ಗೆ ತಂದಿದ್ದರು. ದಷ್ಟ-ಪುಷ್ಟವಾಗಿದ್ದು ಕಾಳಗದ ಕುರಿಗೆ ‘ಸಲಗ’ ಎಂದು ಹೆಸರಿಟ್ಟಿದ್ದರು. ಅಲ್ಲದೇ ಕಾಳಗಕ್ಕಾಗಿ ಕುರಿಯನ್ನು ಸಿದ್ದಪಡಿಸಲು ಹುಲ್ಲು, ದಿನಕ್ಕೊಂದು ಲೀಟರ್ ಹಾಲು, ಹುಳ್ಳಿಕಾಳನ್ನು ನೆನೆಸಿ ಕುರಿಯನ್ನು ಕಾಳಗದ ಸ್ಫರ್ಧೆಗೆ ತಯಾರು ಮಾಡುತ್ತಿದ್ದರು. ಅಲ್ಲದೇ ಸಾಕಷ್ಟು ಸ್ಫರ್ಧೆಯಲ್ಲಿ ಈ ಕುರಿ ಜಯಗಳಿಸಿ ಮಾಲೀಕನ ಪ್ರೀತಿಗಳಿಸಿತ್ತು. ಈ ಕುರಿ ಮೈ ಕಟ್ಟನ್ನು ನೋಡಿದ ಅನೇಕರು ಲಕ್ಷ ರೂ.ಗೂ ಹೆಚ್ಚು ಹಣ ಕೊಡುತ್ತೇನೆ ಎಂದು ಕೇಳಿದ್ದರು. ಆದರೂ ಕೊಟ್ಟಿರಲಿಲ್ಲ. ಹೀಗಿರುವಾಗ ಕುರಿ ಇದ್ದಕ್ಕಿದ್ದಂತೆ ಏಪ್ರೀಲ್ 3 ರ ರಾತ್ರಿ ಕಳ್ಳತನವಾಯಿತು.
undefined
8 ಲಕ್ಷ ರೂ. ಡಿಮ್ಯಾಂಡ್ ಹೊಂದಿದ್ದ ಲವ್ಲಿಬಾಯ್ ಹೆಸರಿನ ಟಗರು ಸಾವು
ಕದ್ದವರು ಸ್ನೇಹಿತರು :
ಸಾಕಷ್ಟು ಕುರಿ ಕಾಳಗದ ಸ್ಫರ್ಧೆಯಲ್ಲಿ ಜಯಗಳಿಸಿದ್ದ ಸಲಗವನ್ನು ಅವನ ಸ್ನೇಹಿತರೇ ಉಡ್ಡಿ ಆಡಿಸಲು ನನಗೆ ಕೊಡು ಅಂದಿದ್ದರು. ಆದರೆ ಕಲ್ಲೇಶ ಕುರಿ ಕೊಟ್ಟಿರಲಿಲ್ಲ. ಆ ಸಂದರ್ಭದಲ್ಲಿ ನೀನು ನಿನ್ನ ಕುರಿಯನ್ನು ಅದೆಂಗೆ ಉಳಿಸಿಕೊಳ್ಳಿತ್ತಿಯೋ ನೋಡೋಣ ಎಂದು ಸವಾಲ್ ಹಾಕಿದ್ದರು. ಆದಾದ ಕೆಲವೇ ದಿನಗಳಲ್ಲಿ ಸ್ನೇಹಿತರೇ ಕಾಳಗದ ಕುರಿ ಕದ್ದ ಮಟನ್ ಅಂಗಡಿಯೊಂದಕ್ಕೆ ಮಾರಿದ್ದರು.. ಟಗರು ಸಲಗ ಯರಗುಂಟೆಯಲ್ಲಿ ನಡೆದ ಕಾಳಗ ಸ್ಫರ್ಧೆಯಲ್ಲಿ ಎರಡನೇ ಬಹುಮಾನ ಗಳಿಸಿ 20 ಸಾವಿರ, ತ್ಯಾವಣಗಿಯಲ್ಲಿ ಮೊದಲ ಸ್ಥಾನಗಳಿಸಿ 15,000, ಗಡಿ ರಂಗಾಪುರದಲ್ಲಿ ನಡೆದ ಸ್ಪರ್ಧೆಯಲ್ಲಿ ಮೊದಲ ಸ್ಥಾನಗಳಿಸಿ 20,000, ಬೆಳ್ಳೂಡಿಯಲ್ಲಿ ನಡೆದ ಕುರಿ ಕಾಳಗದ ಸ್ಫರ್ಧೆಯಲ್ಲಿ ಭಾಗವಹಿಸಿ 22,000 ಬಹುಮಾನಗಳಿಸಿತ್ತು.
ಕಾಳಗದ ಕುರಿ ಮಟನ್ ಸ್ಟಾಲ್‌ನಲ್ಲಿ ಪತ್ತೆ:
ದಾವಣಗೆರೆ ತಾಲ್ಲೂಕ್ ಮಾಯಕೊಂಡ ಪೊಲೀಸ್ ಠಾಣೆಯಲ್ಲಿ ಟಗರು ಕದ್ದ ಬಗ್ಗೆ ಪ್ರಕರಣ ದಾಖಲಾಗಿತ್ತು. ಕಲ್ಲೇಶ್ ರವರು ದಾಖಲಿಸಿದ ಎಪ್ ಐ ಆರ್ ನಲ್ಲಿ ನೀಡಿರುವ ಮಾಹಿತಿಯಂತೆ ಆತನ ಸ್ನೇಹಿತರು ಕುರಿ ಕದ್ದಿದ್ದು ಪ್ರಕರಣವನ್ನು ಡಿವೈ ಎಸ್ ಪಿ ಬಸವರಾಜ್ ಮಾರ್ಗದರ್ಶನದಲ್ಲಿ ಪೊಲೀಸ್ ಸಬ್ ಇನ್ಸಪೆಕ್ಟರ್ ಕಿಲೋವತಿ ಅವರ ತಂಡ ಬೇಧಿಸಿದೆ. ಪ್ರಕರಣದ ವಿಚಾರಣೆ ನಡೆಸಿದ ಪೊಲೀಸರಿಗೆ ಕದ್ದ ಕುರಿ ಎಲ್ಲಿದೆ ಎಂಬುದು ಗೊತ್ತಾಯಿತು. ಕಾಳಗದ ಕುರಿ ಕದ್ದ ಸ್ನೇಹಿತರು ಕೇವಲ 25 ಸಾವಿರ ರೂ.ಗೆ ಚನ್ನಗಿರಿ ಮಟನ್ ಸ್ಟಾಲ್‌ಗೆ ಮಾರಾಟ ಮಾಡಿದ್ದರು. ಅದಕ್ಕಾಗಿ ಎರಡು ಸಾವಿರ ರೂ.ಗಳನ್ನು ತೆಗೆದುಕೊಂಡು ಬಂದಿದ್ದರು.
ಕುರಿ ಕಾಳಗವನ್ನು ಅನೇಕರು ಪ್ರತಿಷ್ಠೆಯಾಗಿ ತೆಗೆದುಕೊಳ್ಳುತ್ತಾರೆ. ಕುರಿ ಉಡ್ಡಿಯಲ್ಲಿ ಅವನ ಕುರಿ ಗೆದ್ದರೇ ಮಾಲೀಕನಿಗೆ ಎಲ್ಲಿಲ್ಲದ ಪ್ರತಿಷ್ಠೆ. ಇದು ಬೇರೊಂದು ತಂಡದವರಿಗೆ ದ್ವೇಷಕ್ಕು ಕಾರಣವಾಗುತ್ತದೆ.. ಈ ಪ್ರಕರಣದಲ್ಲಿ ಮಾಯಕೊಂಡ ಪೊಲೀಸರು ಉತ್ತಮವಾಗಿ ಕೆಲಸ ಮಾಡಿ ಕುರಿಯನ್ನು ಜೀವಂತವಾಗಿ ತಂದಿದ್ದು ಕುರಿ ಮಾಲೀಕನಿಗೆ ಎಲ್ಲಿಲ್ಲದ ಖುಷಿ ತಂದಿದೆ.