
ಉಡುಪಿ, (ಸೆಪ್ಟೆಂಬರ್.09): 2022ರ ಮಾರ್ಚ್ ತಿಂಗಳಲ್ಲಿ ಮನೆಯಿಂದ ಕಾಣೆಯಾಗಿದ್ದ ವ್ಯಕ್ತಿ ಏಪ್ರಿಲ್.4 ರಂದು ಶವವಾಗಿ ವಾರಾಹಿ ಹೊಳೆಯ ದಡದಲ್ಲಿ ಶವವಾಗಿ ಪತ್ತೆಯಾಗಿತ್ತು. ಈ ಪ್ರಕರಣವು ಈಗ ಮಹತ್ವದ ತಿರುವು ಪಡೆದುಕೊಂಡಿದ್ದು, ಯುವಕನನ್ನು ಕೊಲೆ ಮಾಡಲಾಗಿದೆ ಎಂದು ಮರಣೋತ್ತರ ಪರೀಕ್ಷೆಯಲ್ಲಿ ದೃಢಪಟ್ಟಿದೆ.
ಕುಂದಾಪುರ ತಾಲೂಕಿನ ಹಂಗಳೂರು ಗ್ರಾಮದ ಚೌಕುಡಿಬೆಟ್ಟು ನಿವಾಸಿಯಾದ ವಿನಯ ಪೂಜಾರಿ (26) ಕೊಲೆಯಾದವನು. ತನ್ನ ಮನೆಯಿಂದ ಕಾಣೆಯಾಗಿ ವಾರಗಳ ಬಳಿಕ ಹೊಳೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ಯುವಕನನ್ನು ಕತ್ತು ಹಿಸುಕಿ ಕೊಲೆ ಮಾಡಿರುವುದು ದೃಢವಾಗಿದ್ದು, ಶಂಕರನಾರಾಯಣ ಪೊಲೀಸರು ಕೊಲೆ ಪ್ರಕರಣದಡಿ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಎಣ್ಣೆ ಮತ್ತಲ್ಲಿ ಮೊಮ್ಮಗನ ರಹಸ್ಯ ಬಾಯ್ಬಿಟ್ಟ ಸ್ನೇಹಿತರು, 8 ತಿಂಗಳ ಬಳಿಕ ತಾತನ ಕೊಲೆ ರಹಸ್ಯ ಬೆಳಕಿಗೆ
ಕುಂದಾಪುರ ಹಂಗಳೂರು ಹೊಸತಪ್ಲು ನಿವಾಸಿ ಅಕ್ಷಯ (28) ಬಸ್ರೂರು ಗುಂಡಿಗೋಳಿ ನಿವಾಸಿಗಳಾದ ಪ್ರವೀಣ್ ಪೂಜಾರಿ ಹಾಗೂ ಸತೀಶ್ ಪೂಜಾರಿ ಬಂಧಿತ ಆರೋಪಿಗಳಾಗಿದ್ದು ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಆರೋಪಿಗಳಿಗೆ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.
ಘಟನೆ ವಿವರ:
ವಿನಯ ಪೂಜಾರಿ 2022 ರ ಮಾರ್ಚ್ 28 ರಂದು ಮನೆಯಿಂದ ಕಾಣೆಯಾಗಿದ್ದಾರೆ ಎಂದು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಏ.4 ರಂದು ಬೆಳಿಗ್ಗೆ ಕುಂದಾಪುರ ತಾಲೂಕಿನ ಅಂಪಾರು ಗ್ರಾಮದ ಹಡಾಳಿ ಎಂಬಲ್ಲಿ ವಾರಾಹಿ ಹೊಳೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿದ್ದು ವಿನಯ ಪೂಜಾರಿಯ ಮೃತದೇಹ ಎಂಬ ಬಗ್ಗೆ ಆತನ ಚಹರೆಯಲ್ಲಿ ಗುರುತಿಸಲಾಗಿತ್ತು. ಈ ಸಾವಿನ ಬಗ್ಗೆ ವಿನಯ್ ಮಾವ ಶೀನ ಪೂಜಾರಿ ಸಂಶಯ ಇರುವುದಾಗಿ ಏ.4ರಂದು ದೂರು ನೀಡಿದ್ದು, ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಕೇಸ್ ದಾಖಲಾಗಿತ್ತು.
ಮೃತದೇಹವನ್ನು ಮಣಿಪಾಲ ಕೆ.ಎಂ.ಸಿ. ಆಸ್ಪತ್ರೆಯಲ್ಲಿ ವೈದ್ಯಕೀಯ ಮರಣೋತ್ತರ ಪರೀಕ್ಷೆ ನಡೆಸಿದ್ದು ಸೆ. 6 ರಂದು ವೈದ್ಯಕೀಯ ಮರಣೋತ್ತರ ಪರೀಕ್ಷೆಯಲ್ಲಿ ವಿನಯ ಪೂಜಾರಿಯನ್ನು ಕುತ್ತಿಗೆಯ ಭಾಗಕ್ಕೆ ಬಲವಾಗಿ ಒತ್ತಿದ್ದರಿಂದ ಸಾವು ಸಂಭವಿಸಿರುವುದಾಗಿ ವರದಿ ಬಂದಿತ್ತು.
ಈ ವರದಿಯ ಸ್ವೀಕರಿಸಿದ ಬಳಿಕ ವಿನಯ ಪೂಜಾರಿಯ ಸಹೋದರಿ ವಿನಯ್ ಸಾವಿನಲ್ಲಿ ಅಕ್ಷಯ ಹಾಗೂ ಅವರ ಸ್ನೇಹಿತರ ಕೈವಾಡವಿದ್ದು ಇದೊಂದು ಕೊಲೆಯೆಂದು ದೂರು ನೀಡಿದ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈಜುವಾಗ ಕತ್ತು ಹಿಸುಕಿ ಕೊಲೆ
ವಿನಯ್ ಪೂಜಾರಿ ಮತ್ತು ಮೂವರು ಸ್ನೇಹಿತರು ಈಜಲೆಂದು ನದಿಯ ದಡಕ್ಕೆ ತೆರಳಿದ್ದು, ಅಲ್ಲಿ ಕುಡಿದು ಈಜುವಾಗ ಇಬ್ಬರ ನಡುವೆ ಜಗಳ ನಡೆದು ವಿನಯ್ ಪೂಜಾರಿಯವರನ್ನು ಮೂವರು ಕತ್ತು ಹಿಸುಕಿ ಕೊಂದು ನದಿಗೆ ಎಸೆದಿದ್ದಾರೆ ಎಂದು ತನಿಖೆಯ ವೇಳೆ ಸತ್ಯ ಬಯಲಾಗಿದೆ. ಅಲ್ಲದೇ ಯಾವುದೇ ಪೂರ್ವಯೋಜಿತ ಕೃತ್ಯ ಅಲ್ಲವೆಂದು ತಿಳಿದು ಬಂದಿದೆ ಎನ್ನಲಾಗಿದೆ.
ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಅಕ್ಷಯ ಎಂ. ಹೆಚ್ ನಿರ್ದೇಶನದಲ್ಲಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಸ್.ಟಿ.ಸಿದ್ದಲಿಂಗಪ್ಪ ಮಾರ್ಗದರ್ಶನದಲ್ಲಿ ಕುಂದಾಪುರ ಡಿವೈಎಸ್ಪಿ ಶ್ರೀಕಾಂತ್ ಕೆ. ಹಾಗೂ ಕುಂದಾಪುರ ವೃತ್ತ ನಿರೀಕ್ಷಕ ಗೋಪಿಕೃಷ್ಣ ಕೆ.ಆರ್. ನೇತೃತ್ವದಲ್ಲಿ, ಶಂಕರನಾರಾಯಣ ಪೊಲೀಸ್ ಠಾಣಾ ಉಪನಿರೀಕಕ್ಷಕ ಶ್ರೀಧರ್ ನಾಯ್ಕ್, ಅಪರಾಧ ಪತ್ತೆ ದಳದ ಸಿಬ್ಬಂದಿಗಳಾದ ರಾಮು ಹೆಗ್ಡೆ, ರಾಘವೇಂದ್ರ ದೇವಾಡಿಗ, ಕುಂದಾಪುರ ಪೊಲೀಸ್ ಠಾಣೆ ಸಿಬ್ಬಂದಿಗಳಾದ ಸಂತೋಷ ಕುಮಾರ್, ಸಂತೋಷ ಕೆ.ಯು ಹಾಗೂ ಶಂಕರನಾರಾಯಣ ಪೊಲೀಸ್ ಠಾಣಾ ಸಿಬ್ಬಂದಿಗಳಾದ ಗೋಪಾಲ ಕೃಷ್ಣ, ಮಂಜುನಾಥ, ರಾಘವೇಂದ್ರ, ಪುನೀತ್ ಕುಮಾರ ಶೆಟ್ಟಿ, ಆಲಿಂಗರಾಯ ಕಾಟೆ, ಜಯರಾಮ, ಸತೀಶ, ಚಂದ್ರ ಕುಮಾರ್ ಕುಂದಾಪುರ ಗ್ರಾಮಾಂತರ ಠಾಣೆಯ ಮಧುಸೂದನ್ , ಅನಿಲ್ ಕುಮಾರ್ ತಂಡ ಪ್ರಕರಣದ ಆರೋಪಿಗಳ ಪತ್ತೆ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ