
ಬೆಂಗಳೂರು (ಮಾ.7) : ಇತ್ತೀಚೆಗೆ ನಡೆದ ಫಿಜಿಯೋಥೆರಪಿಸ್ಟ್ ಶ್ರೀಧರ್ ಎಂಬುವರ ಕೊಲೆ ಪ್ರಕರಣ ಬೇಧಿಸಿರುವ ಸೋಲದೇವನಹಳ್ಳಿ ಠಾಣೆ ಪೊಲೀಸರು, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಯಲಹಂಕ(Yalahanka)ದ ಕೊಂಡಪ್ಪ ಲೇಔಟ್(Kondappa layout) ನಿವಾಸಿ ವೀರ ಅಂಜನೇಯಲು ಅಲಿಯಾಸ್ ಪುಲಿ(Veera Anjaneyalu alias Puli) (38), ಗೋವರ್ಧನ ಅಲಿಯಾಸ್ ಡಿಜೆ(23), ಬುಡ್ಡಪ್ಪ ಅಲಿಯಾಸ್ ಭಾಸ್ಕರ್ (46) ಬಂಧಿತರು. ಆರೋಪಿಗಳು ಫೆ.4ರಂದು ಯಲಹಂಕದ ಕೊಂಡಪ್ಪ ಲೇಔಟ್ ನಿವಾಸಿ ಶ್ರೀಧರ್ (32)(Physiotherapist Sridhar) ಎಂಬುವರನ್ನು ಮಚ್ಚಿನಿಂದ ತಲೆಗೆ ಹೊಡೆದು. ಕತ್ತು ಕೊಯ್ದು ಕೊಲೆ ಮಾಡಿದ್ದರು. ಬಳಿಕ ಗಾಣಿಗರಹಳ್ಳಿ(Ganigarahalli) ಬಳಿ ಜಮೀನಿನಲ್ಲಿ ಮೃತದೇಹವನ್ನು ಪೆಟ್ರೋಲ್ ಸುರಿದು ಬೆಂಕಿ ಹಾಕಿ ಸುಟ್ಟು ಪರಾರಿಯಾಗಿದ್ದರು.
ಒಂದೇ ತಟ್ಟೇಲಿ ಅನ್ನ ತಿಂದು, ಸ್ಕೆಚ್ ಹಾಕಿದ ಸ್ನೇಹಿತರು: ಪಾರ್ಟಿಗೆಂದು ಕರೆದೊಯ್ದು ಕೊಲೆ
ಕೊಲೆಯಾದ ಶ್ರೀಧರ್ ಹಾಗೂ ಬಂಧಿತ ಆರೋಪಿಗಳು ಆಂಧ್ರಪ್ರದೇಶ ಮೂಲದವರು. ಕೆಲಸದ ನಿಮಿತ್ತ ಹಲವು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದು, ಸ್ನೇಹಿತರಾಗಿದ್ದರು. ಕೊಲೆಯಾದ ಶ್ರೀಧರ್ ಖಾಸಗಿ ಆಸ್ಪತ್ರೆಯಲ್ಲಿ ಫಿಜಿಯೋಥೆರಪಿಸ್ಟ್ ಆಗಿ ಕೆಲಸ ಮಾಡುತ್ತಿದ್ದರು. ಬಂಧಿತ ಆರೋಪಿಗಳು ಸಣ್ಣಪುಟ್ಟಕೆಲಸ ಮಾಡಿಕೊಂಡಿದ್ದರು. ನಾಲ್ವರು ಆಗಾಗ ಮದ್ಯದ ಪಾರ್ಟಿ ಮಾಡುತ್ತಿದ್ದರು.
ಬಾರ್ ಜಗಳದಿಂದ ದ್ವೇಷ
ಕೆಲವು ತಿಂಗಳ ಹಿಂದೆ ಬಾರ್‌ವೊಂದರಲ್ಲಿ ನಾಲ್ವರು ಮದ್ಯ ಸೇವಿಸುವಾಗ, ಶ್ರೀಧರ್ ಮದ್ಯದ ಅಮಲಿನಲ್ಲಿ ಆರೋಪಿ ವೀರ ಆಂಜನೇಯಲುನನ್ನು ನಿಂದಿಸಿ ಹಲ್ಲೆಗೆ ಮುಂದಾಗಿದ್ದ. ಈ ವೇಳೆ ಉಳಿದ ಆರೋಪಿಗಳು ಜಗಳ ಬಿಡಿಸಿದ್ದರು. ಈ ಘಟನೆ ಬಳಿಕ ವೀರ ಅಂಜನೇಯಲು, ಶ್ರೀಧರ್ ಮೇಲೆ ದ್ವೇಷ ಸಾಧಿಸಲು ಆರಂಭಿಸಿದ್ದ. ಪ್ರತಿಕಾರ ತೀರಿಸಿಕೊಳ್ಳಲು ಹವಣಿಸುತ್ತಿದ್ದ. ಇದಕ್ಕೆ ಉಳಿದ ಇಬ್ಬರು ಆರೋಪಿಗಳು ಸಾಥ್ ನೀಡುವ ಭರವಸೆ ನೀಡಿದ್ದರು.
ಪಾರ್ಟಿ ನೆಪ: ಭೀಕರವಾಗಿ ಕೊಲೆ
ಆರೋಪಿಗಳು ಫೆ.4ರ ರಾತ್ರಿ ಶ್ರೀಧರ್‌ಗೆ ಕರೆ ಮಾಡಿ ಮದ್ಯದ ಪಾರ್ಟಿ ಮಾಡಲು ಆಹ್ವಾನಿಸಿದ್ದಾರೆ. ಅದರಂತೆ ಕೆಂಪಾಪುರದಲ್ಲಿ ಆರೋಪಿ ವೀರ ಆಂಜಿನೇಯಲು ಬಾಡಿಗೆ ಮನೆಗೆ ಕರೆಸಿಕೊಂಡು ನಾಲ್ವರು ಸೇರಿ ಮದ್ಯದ ಪಾರ್ಟಿ ಮಾಡಿದ್ದಾರೆ. ಈ ವೇಳೆ ಆರೋಪಿಗಳು ಬಾರ್‌ನಲ್ಲಿ ನಡೆದ ಜಗಳ ಘಟನೆಯನ್ನು ಪ್ರಸ್ತಾಪಿಸಿ ಶ್ರೀಧರ್ ಜತೆಗೆ ವಾಗ್ವಾದ ನಡೆಸಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ತಿರುಗಿದಾಗ ಆರೋಪಿಗಳು ಮಚ್ಚಿನಿಂದ ಶ್ರೀಧರ್ ತಲೆಗೆ ಹಲ್ಲೆ ಮಾಡಿದ್ದಾರೆ. ಅಷ್ಟಕ್ಕೆ ಸುಮ್ಮನಾಗದೆ, ಅದೇ ಮಚ್ಚಿನಿಂದ ಕುತ್ತಿಗೆ ಕೊಯ್ದು ಕೊಲೆ ಮಾಡಿದ್ದಾರೆ.
ಪೆಟ್ರೋಲ್ ಸುರಿದು ಬೆಂಕಿ ಇಟ್ಟರು
ಬಳಿಕ ಆರೋಪಿಗಳು ಗೋವರ್ಧನನ ಆಟೋದಲ್ಲಿ ಶ್ರೀಧರ್ ಮೃತದೇಹ ಹಾಕಿಕೊಂಡು ಚಿಕ್ಕಬಾಣಾವಾರ ಸಮೀಪದ ಗಾಣಿಗರಹಳ್ಳಿಯ ನಿರ್ಜನ ಪ್ರದೇಶಕ್ಕೆ ಹೋಗಿದ್ದಾರೆ. ಮೃತದೇಹವನ್ನು ಜಮೀನಿನಲ್ಲಿ ಎಸೆದು ಅದರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದರು. ಫೆ.7ರಂದು ಜಮೀನಿನಲ್ಲಿ ಅರೆಬರೆ ಸುಟ್ಟಸ್ಥಿತಿಯಲ್ಲಿ ಅಪರಿಚಿತ ಮೃತದೇಹ ಪತ್ತೆಯಾದ ಹಿನ್ನೆಲೆಯಲ್ಲಿ ಸೋಲದೇವನಹಳ್ಳಿ ಠಾಣೆ ಪೊಲೀಸರು ಆ ಮತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಿ, ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿದ್ದರು. ಬಳಿಕ ಮೃತದೇಹದ ಗುರುತು ಪತ್ತೆಗೆ ಮುಂದಾಗಿದ್ದರು.
ಈ ನಡುವೆ ಕೊಲೆಯಾದ ಶ್ರೀಧರ್ ಏಕಾಏಕಿ ನಾಪತ್ತೆಯಾದ ಹಿನ್ನೆಲೆಯಲ್ಲಿ ಸಹೋದರ ಪ್ರಸಾದ್ ಎಲ್ಲ ಕಡೆ ಹುಡುಕಾಡುತ್ತಿದ್ದ. ಸೋಲದೇವನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಅಪರಿಚಿತ ಶವ ಪತ್ತೆಯಾದ ಮಾಹಿತಿ ತಿಳಿದು ಠಾಣೆಗೆ ಬಂದಾಗ, ಪೊಲೀಸರು ವಿಕ್ಟೋರಿಯಾ ಆಸ್ಪತ್ರೆಗೆ ಶವಾಗಾರಕ್ಕೆ ಕರೆದೊಯ್ದು ಮೃತದೇಹ ತೋರಿಸಿದಾಗ ಅದು ಶ್ರೀಧರ್ ಮೃತದೇಹ ಎಂಬುದನ್ನು ಪ್ರಸಾದ್ ಗುರುತಿಸಿದ್ದ. ಬಳಿಕ ಪ್ರಸಾದ್ ನೀಡಿದ ದೂರು ಆಧರಿಸಿ ಕೊಲೆ ಪ್ರಕರಣ ದಾಖಲಿಸಿಕೊಂಡು, ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Mysuru: ದಶಕದ ದಾಂಪತ್ಯಕ್ಕೆ ಅಡ್ಡ ಬಂದವನ ರುಂಡ ತುಂಡರಿಸಿದ ಗಂಡ!
ಆಂಧ್ರಪ್ರದೇಶದಲ್ಲಿ ಪೊಲೀಸರ ಬಲೆಗೆ
ತನಿಖೆ ನಡೆಸಿದ ಪೊಲೀಸರು ಶ್ರೀಧರ್ ಕೊಲೆಯಾಗುವ ಹಿಂದಿನ ದಿನ ಯಾರ ಜತೆ ಓಡಾಡುತ್ತಿದ್ದ ಎಂಬ ಬಗ್ಗೆ ಮಾಹಿತಿ ಪಡೆದಿದ್ದಾರೆ. ಶ್ರೀಧರ್ ಮೊಬೈಲ್‌ಗೆ ಯಾವ ಮೊಬೈಲ್ ಸಂಖ್ಯೆಗಳಿಂದ ಕರೆ ಬಂದಿವೆ ಎಂದು ಪರಿಶೀಲಿಸಿದಾಗ ಆರೋಪಿ ವೀರ ಅಂಜನೇಯಲು ಸುಳಿವು ಸಿಕ್ಕಿದೆ. ಬಳಿಕ ತಾಂತ್ರಿಕ ಸುಳಿವು ಆಧರಿಸಿ ಆಂಧ್ರಪ್ರದೇಶದಲ್ಲಿ ತಲೆಮರೆಸಿಕೊಂಡಿದ್ದ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ