Provident Fraud: 1000 ಕೋಟಿ ರೂ. ಪಿಎಫ್‌ ಹಗರಣ ಬೆಳಕಿಗೆ: ಹಲವು ಮುಚ್ಚಿದ ಕಂಪನಿ ನೌಕರರ ಪಿಎಫ್‌ ಕ್ಲೇಮ್‌

By Kannadaprabha News  |  First Published Aug 24, 2022, 10:55 AM IST

ನೌಕರರ ಭವಿಷ್ಯನಿಧಿ ಸಂಸ್ಥೆಯ (ಇಪಿಎಫ್‌ಒ) ಮುಂಬೈ ಕಚೇರಿಯಲ್ಲಿ ನಡೆದಿದೆ ಎನ್ನಲಾದ 1000 ಕೋಟಿ ರೂ. ಹಗರಣವೊಂದು ಬೆಳಕಿಗೆ ಬಂದಿದೆ.


ನವದೆಹಲಿ: ನೌಕರರ ಭವಿಷ್ಯನಿಧಿ ಸಂಸ್ಥೆಯ (ಇಪಿಎಫ್‌ಒ) ಮುಂಬೈ ಕಚೇರಿಯಲ್ಲಿ ನಡೆದಿದೆ ಎನ್ನಲಾದ 1000 ಕೋಟಿ ರೂ. ಹಗರಣವೊಂದು ಬೆಳಕಿಗೆ ಬಂದಿದೆ. ನಕಲಿ ಖಾತೆಗಳನ್ನು ಸೃಷ್ಟಿಸಿ ಹಾಗೂ ಮುಚ್ಚಿಹೋಗಿರುವ ಕಂಪನಿಗಳ ಹೆಸರು ಬಳಸಿ ಕ್ಲೇಮುಗಳನ್ನು ಸೆಟಲ್‌ ಮಾಡಿಕೊಂಡು 1000 ಕೋಟಿ ರೂ.ಗಳನ್ನು ಸಂಸ್ಥೆಗೆ, ಅದರ ಉದ್ಯೋಗಿಗಳೇ ವಂಚಿಸಿದ ಹಗರಣದ ಬಗ್ಗೆ ಇಪಿಎಫ್‌ಒ ಆಂತರಿಕ ತನಿಖೆ ಆರಂಭಿಸಿದೆ.

ಮುಂಬೈನ ಕಾಂದಿವಲಿ ಪಿಎಫ್‌ ಕಚೇರಿಯಲ್ಲಿ ಈ ಕೃತ್ಯ ಎಸಗಲಾಗಿದೆ. ಜೆಟ್‌ ಏರ್‌ವೇಸ್‌ ಸೇರಿದಂತೆ ಮುಚ್ಚಿ ಹೋಗಿದ್ದ ಹಲವು ಕಂಪನಿಗಳ ಉದ್ಯೋಗಿಗಳು, ಪೈಲಟ್‌ಗಳನ್ನು ಬಳಸಿಕೊಂಡು ಅಕ್ರಮವಾಗಿ ಪಿಎಫ್‌ ಹಣವನ್ನು ಕ್ಲೇಮ್‌ ಮಾಡಿಕೊಳ್ಳಲಾಗಿದೆ. ಈಗ ಆಂತರಿಕ ತನಿಖೆ ನಡೆಯುತ್ತಿದ್ದು, ವಿಚಕ್ಷಣ ದಳವು ಹಳೆಯ ದಾಖಲೆಗಳನ್ನೆಲ್ಲ ಪರಿಶೀಲಿಸುತ್ತಿದೆ. ಆ ಬಳಿಕ ನಿಖರ ನಷ್ಟ ಕುರಿತ ವರದಿಯನ್ನು ಇಪಿಎಫ್‌ಒಗೆ ಸಲ್ಲಿಸಲಾಗುತ್ತದೆ ಎಂದು ಮೂಲಗಳನ್ನು ಉಲ್ಲೇಖಿಸಿ ವಾಣಿಜ್ಯ ದಿನಪತ್ರಿಕೆಯೊಂದು ವರದಿ ಮಾಡಿದೆ. ಮೂಲಗಳ ಪ್ರಕಾರ ವಂಚನೆ ಮೊತ್ತ ಸುಮಾರು 1000 ಕೋಟಿ ರೂ. ಆಗಬಹುದಾಗಿದೆ.

Tap to resize

Latest Videos

28 ಕೋಟಿ ಭಾರತೀಯರ ಪಿಎಫ್‌ ಡೇಟಾ ಲೀಕ್‌, ಯುಎಎನ್‌, ಆಧಾರ್‌ ಮಾಹಿತಿ ಬಹಿರಂಗ!

ಈ ಹಗರಣದ ಕೆಲವು ಎಳೆಗಳು ಇತ್ತೀಚೆಗೆ ಬೆಳಕಿಗೆ ಬಂದಿವೆ. ನಷ್ಟದ ಕಾರಣ ನಿಂತು ಹೋಗಿದ್ದ ಜೆಟ್‌ ಏರ್‌ವೇಸ್‌ ಕಂಪನಿಯ ಉದ್ಯೋಗಿಗಳ ಪಿಎಫ್‌ ಹಣ ಕ್ಲೇಮ್‌ ಮಾಡಿಕೊಳ್ಳಲಾಗಿದೆ. ಈ ಹಣ ನೀಡಲು ಕಾಂದಿವಲಿ ಪಿಎಫ್‌ ಕಚೇರಿಯ ಹಿರಿಯ ಸಾಮಾಜಿಕ ಭದ್ರತಾ ಸಹಾಯಕ ಅಧಿಕಾರಿ ಮಚೀಂದ್ರ ಬಾಮ್ನೆ ಎಂಬುವರು ಸಹಾಯ ಮಾಡಿದ್ದು, ಅವರ ಖಾತೆಗೆ ಇದಕ್ಕೆ ಪ್ರತಿಫಲವಾಗಿ ಹಣ ಸಂದಾಯವಾಗಿದ್ದು ಕಂಡು ಬಂದಿದೆ. ಇದರ ಬೆನ್ನಲ್ಲೇ ಆಗಸ್ಟ್‌ ಮಧ್ಯಭಾಗದಲ್ಲಿ ಅವರನ್ನು ಅಮಾನತು ಮಾಡಲಾಗಿದೆ ಎಂದು ವರದಿ ಹೇಳಿದೆ.

ಜೆಟ್‌ ಏರ್‌ವೇಸ್‌ ಕಂಪನಿ ಉದ್ಯೋಗಿಗಳ ಪಿಎಫ್‌ ಹಣವನ್ನು ಈ ರೀತಿ ಲಪಟಾಯಿಸಿ ಭಾರಿ ಅಕ್ರಮ ಎಸಗಲಾಗಿದೆ. ಇದರಿಂದ ಕಾಂದಿವಲಿ ಪಿಎಫ್‌ ಕಚೇರಿಯ ಅನೇಕ ನೌಕರರು ‘ಲಾಭ’ ಪಡೆದುಕೊಂಡಿದ್ದಾರೆ. ಇದರಲ್ಲಿ ಕೆಲವು ಜೆಟ್‌ ಉದ್ಯೋಗಿಗಳು ಶಾಮೀಲಾಗಿರಬಹುದು ಎಂದು ಅದು ವಿವರಿಸಿದೆ.

EPF ಬಡ್ಡಿದರ: ಉದ್ಯೋಗಿಗಳಿಗೆ ಶಾಕ್ ಕೊಟ್ಟ ಸರ್ಕಾರ, 5 ಕೋಟಿ ಜನರಿಗೆ ಹೊಡೆತ!

click me!