ಸಂತ್ರಸ್ತ ಯುವತಿ ಕೊಟ್ಟ ದೂರಿನ ಮೇರೆಗೆ ಕೃಷ್ಣೇಗೌಡ ಎಂಬಾತನ ವಿರುದ್ಧ ರಾಜರಾಜೇಶ್ವರಿ ನಗರ ಠಾಣೆಯಲ್ಲಿ ದೂರು ದಾಖಲು| ಯುವತಿಯನ್ನ ನನಗೆ ವಿವಾಹ ಮಾಡಿಕೊಡಬೇಕು ಇಲ್ಲದಿದ್ದಲ್ಲಿ ನನ್ನೊಂದಿಗೆ ನಿಮ್ಮ ಪುತ್ರಿ ಇರುವ ನಗ್ನ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ಬೆದರಿಕೆವೊಡ್ಡಿದ್ದ ಆರೋಪಿ|
ಬೆಂಗಳೂರು(ನ.21): ವಿವಾಹವಾಗದಿದ್ದಲ್ಲಿ ನಗ್ನ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ಯುವತಿಯೊಬ್ಬಳಿಗೆ ಬೆದರಿಕೆ ಹಾಕಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ. ಈ ಸಂಬಂಧ 21 ವರ್ಷದ ಸಂತ್ರಸ್ತ ಯುವತಿ ಕೊಟ್ಟ ದೂರಿನ ಮೇರೆಗೆ ಕೃಷ್ಣೇಗೌಡ ಎಂಬಾತನ ವಿರುದ್ಧ ರಾಜರಾಜೇಶ್ವರಿ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ಆರೋಪಿ ಮತ್ತು ಯುವತಿ 3 ವರ್ಷಗಳ ಹಿಂದೆ ಫೇಸ್‌ಬುಕ್‌ನಲ್ಲಿ ಪರಿಚಯವಾಗಿದ್ದು, ಪರಸ್ಪರ ಪ್ರೀತಿಸುತ್ತಿದ್ದರು. ಐದು ತಿಂಗಳ ಹಿಂದೆ ಯುವತಿಯ ಮನೆಯವರಿಗೆ ಪ್ರೀತಿಯ ವಿಚಾರ ಗೊತ್ತಾಗಿದ್ದು ಬಳಿಕ ಯುವತಿ, ಕೃಷ್ಣೇಗೌಡನಿಂದ ಅಂತರ ಕಾಯ್ದುಕೊಂಡಿದ್ದರು. ಇದರಿಂದ ಆಕ್ರೋಶಗೊಂಡ ಆರೋಪಿ, ವಿವಾಹವಾಗುವಂತೆ ಯುವತಿಯನ್ನು ಪೀಡಿಸುತ್ತಿದ್ದ. ಯುವತಿಯ ತಾಯಿ ನಡೆಸುತ್ತಿರುವ ಬ್ಯೂಟಿ ಪಾರ್ಲರ್ ಬಳಿ ಗಲಾಟೆ ಮಾಡಿದ್ದ. ಕರೆ ಮಾಡಿ ಯುವತಿ ಹಾಗೂ ಆಕೆಯ ಪೋಷಕರಿಗೆ ಕಿರುಕುಳ ನೀಡುತ್ತಿದ್ದ.
ವಾಣಿವಿಲಾಸದಲ್ಲಿ ಕದ್ದಿದ್ದ ಮಗು 80000ಕ್ಕೆ ಮಾರಾಟ
ಇತ್ತೀಚೆಗೆ ಯುವತಿಯ ತಂದೆಗೆ ಕರೆ ಮಾಡಿದ್ದ ಕೃಷ್ಣೇಗೌಡ, ನಿಮ್ಮ ಪುತ್ರಿಯನ್ನು ನನಗೆ ವಿವಾಹ ಮಾಡಿಕೊಡಬೇಕು. ಇಲ್ಲದಿದ್ದಲ್ಲಿ ನನ್ನೊಂದಿಗೆ ನಿಮ್ಮ ಪುತ್ರಿ ಇರುವ ನಗ್ನ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ಬೆದರಿಕೆವೊಡ್ಡಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.