ನ.11ರಂದು ನಡೆದಿದ್ದ ಅಪಹರಣ ಪ್ರಕರಣ ಸುಖಾಂತ್ಯ| ತಾಯಿಯ ಮಡಿಲು ಸೇರಿದ ಕಂದಮ್ಮ| ಸಿಸಿಟಿವಿ ದೃಶ್ಯಾವಳಿ ಆಧರಿಸಿ ಆರೋಪಿ ಸೆರೆ| ಮಗು ಖರೀದಿಸಿದ್ದವರು ಸೇರಿ ನಾಲ್ವರ ಬಂಧನ|
ಬೆಂಗಳೂರು(ನ.21): ವಾಣಿವಿಲಾಸ್ ಆಸ್ಪತ್ರೆಯಲ್ಲಿದ್ದ ಎರಡು ದಿನದ ಮಗುವನ್ನು ಅಪಹರಿಸಿ ಹಣಕ್ಕೆ ಮಾರಾಟ ಮಾಡಿದ್ದ ಆರೋಪದಡಿ ಮಹಿಳೆ ಸೇರಿ ನಾಲ್ವರನ್ನು ವಿ.ವಿ.ಪುರ ಪೊಲೀಸರು ಬಂಧಿಸಿದ್ದಾರೆ.
ಮಗು ಮಾರಿದ್ದ ಯಲಚೇನಹಳ್ಳಿ ನಿವಾಸಿ ಆಯಿಷಾ (23), ಆಯಿಷಾ ಮೈದುನಾ ವಸೀಂ ಪಾಷ (30) ಹಾಗೂ ಮಗು ಖರೀದಿಸಿದ್ದ ಅಬ್ದುಲ್ ರೆಹಮಾನ್(32), ಸಾನಿಯಾ ಫಾತಿಮಾ(22) ಬಂಧಿತರು. ಮಗುವಿನ ತಂದೆ ಕೊಟ್ಟದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ. ಮಗುವನ್ನು ರಕ್ಷಿಸಿ ಸುರಕ್ಷಿತವಾಗಿ ಪೋಷಕರ ಸುಪರ್ದಿಗೆ ಒಪ್ಪಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
undefined
ನ.9ರಂದು ವಿಜಿನಾಪುರ ನಿವಾಸಿ ಆರ್ಷಿಯಾ ಎಂಬುವರು ಹೆರಿಗೆಗಾಗಿ ವಾಣಿ ವಿಲಾಸ್ ಆಸ್ಪತ್ರೆಗೆ ದಾಖಲಾಗಿದ್ದರು. ಆರ್ಷಿಯಾ ಅವರಿಗೆ ನ.11ರಂದು ಹೆಣ್ಣು ಮಗು ಜನಿಸಿತ್ತು. ಮಗುವಿನ ಆರೋಗ್ಯದಲ್ಲಿ ಸಮಸ್ಯೆ ಇದ್ದ ಕಾರಣ ತೀವ್ರ ನಿಗಾಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ತಾಯಿಗೆ ವಾರ್ಡ್‌ನಲ್ಲಿರಲು ಅವಕಾಶ ನೀಡಲಾಗಿತ್ತು. ತೀವ್ರ ನಿಗಾ ಘಟಕದ ಸಿಬ್ಬಂದಿ ಮಗುವಿನ ಆರೈಕೆಯಲ್ಲಿ ತೊಡಗಿದ್ದರು.
ಬೆಂಗಳೂರಿನ ವಾಣಿ ವಿಲಾಸದಲ್ಲಿ ಎರಡು ದಿನದ ಹಸಗೂಸು ಕಿಡ್ನಾಪ್
ಹಾಲು ಕುಡಿಸಲು ಮಗು ಕೊಡಿ:
ಆರೋಪಿ ಆಯಿಷಾ ತಂಗಿ ಕೂಡ ಹೆರಿಗೆಗಾಗಿ ವಾಣಿ ವಿಲಾಸ್‌ಗೆ ದಾಖಲಾಗಿದ್ದರು. ತಂಗಿಯನ್ನು ನೋಡಲು ಆಸ್ಪತ್ರೆಗೆ ಬಂದಿದ್ದ ಆಯಿಷಾ, ಮಗುವಿನ ಪೋಷಕರ ಬಗ್ಗೆ ತಿಳಿದುಕೊಂಡು, ನ.11ರಂದು ಮಧ್ಯಾಹ್ನ 1.30ರ ಸುಮಾರಿಗೆ ತೀವ್ರ ನಿಗಾ ಘಟಕದೊಳಗೆ ಹೋಗಿದ್ದಳು. ನಾನು ಆಯಿಷಾ ಮಗುವಿನ ವಾರಸುದಾರಳಾಗಿದ್ದು, ಮಗುವನ್ನು ಹಾಲು ಕುಡಿಸಲು ವಾರ್ಡ್‌ನಲ್ಲಿರುವ ತಾಯಿ ಬಳಿ ಕರೆದೊಯ್ಯಬೇಕು ಎಂದಿದ್ದಳು. ಅದನ್ನು ನಂಬಿ ವೈದ್ಯರು ಮಗುವನ್ನು ಆಕೆಗೆ ನೀಡಿದ್ದರು. ಬಳಿಕ ತಾಯಿ ತೀವ್ರ ನಿಗಾ ಘಟಕದ ಬಳಿ ಹೋದಾಗ ಅಪಹರಣ ಬೆಳಕಿಗೆ ಬಂದಿತ್ತು. ಈ ಸಂಬಂಧ ಮಗುವಿನ ತಂದೆ ವಿ.ವಿ.ಪುರ ಠಾಣೆಗೆ ದೂರು ನೀಡಿದ್ದರು.
ಲಾಕ್‌ಡೌನ್‌ನಿಂದ ಆರ್ಥಿಕ ಸಂಕಷ್ಟ:
ಆರೋಪಿಯು ಮಗುವನ್ನು ಅಬ್ದುಲ್ ರೆಹಮಾನ್ ಹಾಗೂ ಸಾನಿಯಾ ಫಾತಿಮಾ ಅವರಿಗೆ ಮಾರಿ .80 ಸಾವಿರಕ್ಕೆ ಮಾರಾಟ ಮಾಡಿದ್ದಳು. ಕಾರ್ಯಾಚರಣೆಗೆ ನಡೆಸಿದ ಪೊಲೀಸರಿಗೆ ಸಿಸಿಟೀವಿಯಲ್ಲಿ ಆರೋಪಿ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಆಯಿಷಾಳನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಆಕೆ ನೀಡಿದ ಮಾಹಿತಿ ಅನುಸರಿಸಿ ಮಗುವನ್ನು ರಕ್ಷಿಸಲಾಗಿದೆ. ಮಗು ಖರೀದಿಸಿದ ದಂಪತಿಯನ್ನು ಬಂಧಿಸಲಾಗಿದೆ. ಆಯಿಷಾ, ಪತಿ ಜೊತೆ ವಾಸವಿದ್ದಳು. ಲಾಕ್‌ಡೌನ್‌ನಿಂದಾಗಿ ಆರ್ಥಿಕ ತೊಂದರೆ ಆಗಿತ್ತು. ಜೀವನ ನಡೆಸುವುದು ಕಷ್ಟವಾಗಿತ್ತು. ಅದೇ ಕಾರಣಕ್ಕೆ ಮಗುವನ್ನು ಮಾರಾಟ ಮಾಡಿ ಹಣ ಗಳಿಸಲು ಮುಂದಾಗಿದ್ದಳು. ವಸೀಂ ಪಾಷ ಆರೋಪಿಯ ಮೈದುನನಾಗಿದ್ದು, ಕೃತ್ಯ ಎಸಗಿದ ಬಳಿಕ ಆಕೆಯನ್ನು ಆಟೋದಲ್ಲಿ ಮನೆಗೆ ಕರೆದೊಯ್ದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.