ವೈಯಕ್ತಿಕ ಕಾರಣಕ್ಕೆ ಜಗಳ| ಬೆಂಗಳೂರಿನ ನೇಕಾರ ಕಾಲೋನಿಯಲ್ಲಿ ನಡೆದ ಘಟನೆ| ಇಬ್ಬರಿಗೂ ಮದುವೆಯಾಗಿ ಮಕ್ಕಳಿವೆ| ಕುಟುಂಬ ತೊರೆದು ಲಿವಿಂಗ್ ಟುಗೆದರ್| ಈ ಸಂಬಂಧ ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು|
ಬೆಂಗಳೂರು(ಫೆ.18): ವೈಯಕ್ತಿಕ ಕಾರಣ ಹಿನ್ನೆಲೆಯಲ್ಲಿ ತನ್ನ ಪ್ರಿಯತಮೆಯನ್ನು ಕೊಂದು ಖಾಸಗಿ ಏಜೆನ್ಸಿಯೊಂದರ ಕಾವಲುಗಾರ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬನ್ನೇರುಘಟ್ಟ ರಸ್ತೆಯ ನೇಕಾರರ ಕಾಲೋನಿಯಲ್ಲಿ ನಡೆದಿದೆ.
ನೇಕಾರರ ಕಾಲೋನಿ ನಿವಾಸಿ ರಮ್ಯಾ (35) ಕೊಲೆಯಾದ ದುರ್ದೈವಿ. ಈ ಹತ್ಯೆ ಬಳಿಕ ಮನೆಯಲ್ಲಿ ನೇಣು ಬಿಗಿದುಕೊಂಡು ಆಕೆಯ ಪ್ರಿಯಕರ ಚಿಕ್ಕಮೊಗ (55) ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಘಟನೆ ಭಾನುವಾರ ನಡೆದಿದ್ದು, ಮೃತಳ ಮನೆಗೆ ಮಂಗಳವಾರ ಆಕೆಯ ಸಂಬಂಧಿ ಬಂದಾಗ ಕೃತ್ಯ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕು ನೆಲ್ಲೂರು ಗ್ರಾಮದ ರಮ್ಯಾ ಹಾಗೂ ಚಿಕ್ಕಮೊಗ, ಆರು ವರ್ಷಗಳಿಂದ ನೇಕಾರರ ಕಾಲೋನಿಯಲ್ಲಿ ಲಿವಿಂಗ್ ಟುಗೆದರ್‌ನಲ್ಲಿ ನೆಲೆಸಿದ್ದರು. ಈ ಇಬ್ಬರಿಗೆ ಮದುವೆಯಾಗಿ ಮಕ್ಕಳಿದ್ದಾರೆ. ಆದರೆ ಕೌಟುಂಬಿಕ ಕಾರಣಕ್ಕೆ ತಮ್ಮ ಕುಟುಂಬಗಳಿಂದ ಅವರು ಪ್ರತ್ಯೇಕವಾಗಿದ್ದರು. ಮೊದಲು ಹೋಟೆಲ್ ನಡೆಸುತ್ತಿದ್ದ ರಮ್ಯಾ, ಬಳಿಕ ಗಾರ್ಮೆಂಟ್ಸ್‌ನಲ್ಲಿ ಉದ್ಯೋಗಕ್ಕೆ ಸೇರಿದ್ದಳು. ಖಾಸಗಿ ಏಜೆನ್ಸಿಯಲ್ಲಿ ಚಿಕ್ಕಮಗ ಕಾವಲುಗಾರನಾಗಿ ಕಾರ್ಯನಿರ್ವಹಿಸುತ್ತಿದ್ದ. ಇಬ್ಬರು ಒಂದೇ ಊರಿನವರಾದ ಕಾರಣಕ್ಕೆ ಬಾಲ್ಯದ ಸ್ನೇಹ ಅವರಲ್ಲಿ ಪ್ರೇಮವಾಗಿಸಿತ್ತು. ಬಳಿಕ ನೇಕಾರರ ಕಾಲೋನಿಯಲ್ಲಿ ಮದುವೆ ಮಾಡಿಕೊಳ್ಳದೆ ಒಂದೇ ಮನೆಯಲ್ಲಿ ಒಟ್ಟಿಗೆ ವಾಸವಾಗಿದ್ದರು ಎಂದು ಪೊಲೀಸರು ವಿವರಿಸಿದ್ದಾರೆ.
ಭಾವನ ಹತ್ಯೆಗೈದ ಬಾಮೈದ : ಇಟ್ಟಿಗೆಯಿಂದ ಹೊಡೆದು ಕೊಲೆ
ವೈಯಕ್ತಿಕ ವಿಚಾರವಾಗಿ ಮನೆಯಲ್ಲಿ ಭಾನುವಾರ ಈ ಇಬ್ಬರ ಮಧ್ಯೆ ಜಗಳವಾಗಿದೆ. ಆಗ ಸಿಟ್ಟಿ ಗೆದ್ದ ಚಿಕ್ಕಮೊಗ, ಪ್ರಿಯತಮೆಯ ತಲೆಯನ್ನು ಗೋಡೆ ಗುದ್ದಿಸಿ ಬಳಿಕ ಖಾಲಿ ಸಿಲಿಂಡರ್‌ನಿಂದ ಬಾರಿಸಿದ್ದಾನೆ. ಇದರಿಂದ ತೀವ್ರ ರಕ್ತಸ್ರಾವವಾಗಿ ಆಕೆ ಕೊನೆಯುಸಿರೆಳೆದಿದ್ದಾಳೆ. ಪ್ರಿಯತಮೆ ಸಾವಿನಿಂದ ಭಯಗೊಂಡು ಅಡುಗೆ ಕೋಣೆಗೆ ತೆರಳಿ ನೇಣಿಗೆ ಆತ ಕೊರಳೊಡ್ಡಿದ್ದಾನೆ.
ಪ್ರತಿ ದಿನ ತನ್ನ ತಾಯಿಗೆ ರಮ್ಯಾ ಕರೆ ಮಾಡಿ ಮಾತಾಡುತ್ತಿದ್ದಳು. ಆದರೆ ಎರಡು ದಿನಗಳಿಂದ ಕರೆ ಮಾಡದೆ ಹೋದಾಗ ಆತಂಕಗೊಂಡ ಅವರು, ತಮ್ಮ ಸೋದರ ಸಂಬಂಧಿಗೆ ಕರೆ ಮಾಡಿ ಮಗಳ ಮನೆ ಬಳಿ ಹೋಗಿ ವಿಚಾರಿಸುವಂತೆ ತಿಳಿಸಿದ್ದರು. ಅಂತೆಯೇ ಮೃತರ ಮನೆಗೆ ಮಂಗಳವಾರ ರಾತ್ರಿ ಸಂಬಂಧಿ ಬಂದಾಗ ಕೃತ್ಯ ಬೆಳಕಿಗೆ ಬಂದಿದೆ. ಮನೆ ಬಾಗಿಲು ಬಡಿದಾಗ ಯಾರೂ ಪ್ರತಿಕ್ರಿಯಿಸಿಲ್ಲ. ಆಗ ಆತಂಕಗೊಂಡ ಅವರು, ಸ್ಥಳೀಯ ನೆರವು ಪಡೆದು ಬಾಗಿಲು ಮುರಿದು ಒಳ ಪ್ರವೇಶಿಸಿದ ರಕ್ತದ ಮಡುವಿನಲ್ಲಿ ಮೃತ ದೇಹ ಪತ್ತೆಯಾಗಿದೆ. ಬಳಿಕ ಪೊಲೀಸರಿಗೆ ಸ್ಥಳೀಯ ನಿವಾಸಿಗಳು ಮಾಹಿತಿ ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಸಂಬಂಧ ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.