ಲಂಚ ಆರೋಪ ಮೇಲ್ನೋಟಕ್ಕೆ ಸಾಬೀತಾದ ಹಿನ್ನೆಲೆಯಲ್ಲಿ ಬಾಗಲಕೋಟೆ ಜಿಲ್ಲೆಯ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಭೂ ವಿಜ್ಞಾನಿಯನ್ನು ಸಸ್ಪೆಂಡ್ ಮಾಡಲಾಗಿದೆ.
ಬೆಂಗಳೂರು, (ಫೆ.17): ಕಲ್ಲು ಗಣಿ ಮಾಲೀಕರಿಗೆ ಕಿರುಕುಳ ಹಾಗೂ ಭಾರೀ ಭ್ರಷ್ಟಾಚಾರದಲ್ಲಿ ತೊಡಗಿದ್ದ ಆರೋಪದ ಹಿನ್ನೆಲೆಯಲ್ಲಿ ಬಾಗಲಕೋಟೆ ಜಿಲ್ಲೆಯ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಭೂ ವಿಜ್ಞಾನಿ ಫೈಯಾಜ್ ಅಹಮದ್ ಶೇಖ್ ಅವರನ್ನು ಸೇವೆಯಿಂದ ಅಮಾನತ್ತುಗೊಳಿಸಲಾಗಿದೆ.
ಮಂಗಳವಾರ ಬಾಗಲಕೋಟೆಯಲ್ಲಿ ಕ್ರಷರ್ ಮಾಲೀಕರ ಜೊತೆ ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ್‍ನಿರಾಣಿ ಅವರು ಸಭೆ ನಡೆಸಿದ ವೇಳೆ ಭೂ ವಿಜ್ಞಾನಿ ಫೈಯಾಜ್ ಅಹಮದ್ ಶೇಖ್ ಅವರ ವಿರುದ್ಧ ವ್ಯಾಪಕವಾದ ಭಾರೀ ಆರೋಪಗಳು ಕೇಳಿಬಂದಿದ್ದವು.
ಸಚಿವರಿಗೆ ಲಿಖಿತ ರೂಪದಲ್ಲಿ ದೂರು ನೀಡಿದ್ದ ಗಣಿ ಮಾಲೀಕರು ಭೂ ವಿಜ್ಞಾನಿ ಫೈಯಾಜ್ ಅಹಮದ್ ಶೇಖ್ ಅವರು ಅನಗತ್ಯವಾಗಿ ಕಿರುಕುಳ ಕೊಡುವುದು, ಹಣ ನೀಡುವಂತೆ ಒತ್ತಾಯಿಸುತ್ತಿದ್ದಾರೆಂದು ಸಚಿವರ ಗಮನಕ್ಕೆ ತಂದಿದ್ದರು.
ಈ ದೂರುಗಳನ್ನು ಪರಿಶೀಲಿಸಿದ್ದ ನಿರಾಣಿ ಅವರು ಮೇಲ್ನೋಟಕ್ಕೆ ಭೂ ವಿಜ್ಞಾನಿ ಫೈಯಾಜ್ ಅಹಮದ್ ಶೇಖ್ ಭ್ರಷ್ಟಾಚಾರ ನಡೆಸಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಅವರನ್ನು ಅಮಾತುಪಡಿಸಿದ್ದಾರೆ.
ಕರ್ನಾಟಕ ನಾಗರೀಕ ಸೇವೆ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿ 1956ರ ನಿಯಮ 10(1) (ಡಿ) ಅನ್ವಯ ಗಣಿ ಮತ್ತು ಭೂ ಇಲಾಖೆಯ ಉಪನಿರ್ದೇಶಕ ಬಿ.ಎಂ ಲಿಂಗರಾಜು ಅವರು 16-02-2020 ರಿಂದ ಜಾರಿಗೆ ಬರುವಂತೆ ಸೇವೆಯಿಂದ ಅಮಾನತ್ತುಗೊಳಿಸಿದ್ದಾರೆ.
ಅಮಾನತ್ತಿನಲ್ಲಿರುವ ಅವಧಿಯಲ್ಲಿ ಕರ್ನಾಟಕ ನಾಗರೀಕ ಸೇವಾ ನಿಯಮ 98ರ ನಿಯಮದಂತೆ ಜೀವನಾಧಾರ ಭತ್ಯೆಯನ್ನು ಪಡೆಯಲು ಅರ್ಹರಾಗಿರುತ್ತಾರೆ, ಈ ವೇಳೆ ಸಕ್ಷಮ ಪ್ರಾಧಿಕಾರದ ಅನುಮತಿ ಪಡೆಯದೆ ಕೇಂದ್ರ ಸ್ಥಾನ ಬಿಟ್ಟು ಹೋಗುವಂತಿಲ್ಲ ಎಂದು ಭೂ ವಿಜ್ಞಾನಿ ಫೈಯಾಜ್ ಅಹಮದ್ ಶೇಖ್ ಅವರಿಗೆ ಸೂಚಿಸಲಾಗಿದೆ.