ಎಟಿಎಂಗೆ ಡಿವೈಸ್‌ ಅಳವಡಿಸಿ 17 ಲಕ್ಷ ಕದ್ದ ಚಾಲಾಕಿ ಕಳ್ಳಿ..!

By Kannadaprabha News  |  First Published Jan 17, 2021, 7:12 AM IST

ಸಂಪಿಗೆಹಳ್ಳಿ ಪೊಲೀಸ್‌ ಬಲೆಗೆ ಬಿದ್ದ ವಿದೇಶಿ ಮಹಿಳೆ| ಮತ್ತೊಬ್ಬ ಆರೋಪಿಗೆ ಬಲೆ| ಕೃತ್ಯದಲ್ಲಿ ತಲೆಮರೆಸಿಕೊಂಡಿರುವ ಆಕೆಯ ಸ್ನೇಹಿತರ ಪತ್ತೆಗೆ ಮುಂದುವರೆದ ತನಿಖೆ| ಕ್ಯಾಮರಾದಲ್ಲಿ ಸೆರೆಸಿಕ್ಕ ಮುಖ ಚಹರೆ ಆಧರಿಸಿ ಆರೋಪಿ ಬಂಧನ| 


ಬೆಂಗಳೂರು(ಜ.17): ಎಟಿಎಂ ಕೇಂದ್ರಗಳಲ್ಲಿ ಡಿವೈಸ್‌ ಅಳವಡಿಸಿ ಖಾತೆಯಲ್ಲಿ ಹಣ ಇಲ್ಲದಿದ್ದರೂ 17 ಲಕ್ಷ ರು. ಹಣ ಡ್ರಾ ಮಾಡಿದ್ದ ಚಾಲಾಕಿ ವಿದೇಶಿ ಮಹಿಳೆಯೊಬ್ಬರು ಸಂಪಿಗೆಹಳ್ಳಿ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾಳೆ.

ಸ್ಪೇನ್‌ ದೇಶದ ಸೇಫಿನಿ ಬಂಧಿತಳಾಗಿದ್ದು, ಈ ಕೃತ್ಯದಲ್ಲಿ ತಲೆಮರೆಸಿಕೊಂಡಿರುವ ಆಕೆಯ ಸ್ನೇಹಿತರ ಪತ್ತೆಗೆ ತನಿಖೆ ಮುಂದುವರೆದಿದೆ. ಕೆಲ ದಿನಗಳ ಹಿಂದೆ ಡಾ.ಶಿವರಾಮ ಕಾರಂತ ನಗರದಲ್ಲಿ ಎಸ್‌ಬಿಐ ಬ್ಯಾಂಕ್‌ನ ಎಟಿಎಂ ಘಟಕದಲ್ಲಿ ಆಕೆ ಹಣ ದೋಚಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

Latest Videos

undefined

ಜ.10ರ ರಾತ್ರಿ 11 ಗಂಟೆಗೆ ಎಸ್‌ಬಿಐ ಬ್ಯಾಂಕ್‌ನ ಎಟಿಎಂಗೆ ತೆರಳಿದ ಗ್ರಾಹಕರೊಬ್ಬರು, 1,500 ಡ್ರಾ ಮಾಡಲು ನಂಬರ್‌ ಒತ್ತಿದ್ದರು. ಆದರೆ ಕೂಡಲೇ ಯಂತ್ರದಿಂದ 1 ಲಕ್ಷ ಹಣ ಹೊರ ಬಂದಿದೆ. ಇದರಿಂದ ಗಾಬರಿಗೊಳಗಾದ ಅವರು, ತಕ್ಷಣ ಬ್ಯಾಂಕ್‌ ಹೆಲ್ಪ್‌ಲೈನ್‌ಗೆ ಕರೆ ಮಾಡಿ ವಿಷಯ ಮುಟ್ಟಿಸಿದ್ದರು. ಈ ಮಾಹಿತಿ ತಿಳಿದ ಬ್ಯಾಂಕ್‌ ವ್ಯವಸ್ಥಾಪಕರು, ಆ ಎಟಿಎಂ ಪರಿಶೀಲನೆಗೆ ಸಿಬ್ಬಂದಿ ಜತೆ ಆಗಮಿಸಿದ್ದರು. ಬಳಿಕ ವ್ಯವಸ್ಥಾಪಕರು, ತಮ್ಮ ಎಟಿಎಂ ಕಾರ್ಡ್‌ ಬಳಸಿ 1500 ಡ್ರಾ ಮಾಡಿದಾಗ ಸರಿಯಾಗಿ ಕೆಲಸ ಮಾಡಿದೆ. ಮತ್ತೆ 1500 ರೂ. ಡ್ರಾ ಮಾಡಿದಾಗಲೂ ಸರಿಯಾದ ಮೊತ್ತವೇ ಡ್ರಾ ಆಗಿದೆ. ಕೊನೆಗೆ ಬ್ಯಾಂಕ್‌ ಅಧಿಕಾರಿಗಳು ಯಂತ್ರವನ್ನು ಸ್ಥಗಿತ ಮಾಡಿ ವಾಪಸ್‌ ಹೋಗಿದ್ದರು. ಮರು ದಿನ ತಾಂತ್ರಿಕ ಸಿಬ್ಬಂದಿ ಜತೆ ಬಂದು ಪರಿಶೀಲಿಸಿದಾಗ ಕೃತ್ಯ ಬೆಳಕಿಗೆ ಬಂದಿದೆ. ಕೊನೆಗೆ ವ್ಯವಸ್ಥಾಪಕರು ನೀಡಿದ ದೂರಿನ ಮೇರೆಗೆ ಆರೋಪಿ ಬಂಧನವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಣ ದಾನ ಮಾಡ್ತಿದ್ದ ರಾಬಿನ್ ಹುಡ್ ಸಿಕ್ಕಿಬಿದ್ದ... ಜತೆಗೆ ಇನ್ನೊಂದು ಕೆಲಸ!

ಹೇಗೆ ಕೃತ್ಯ?

ಶಿವರಾಮಕಾರಂತ ನಗರದ ಎಸ್‌ಬಿಐ ಬ್ಯಾಂಕ್‌ನ ಎಟಿಎಂ ಕೇಂದ್ರಕ್ಕೆ ಜ.10 ರಂದು ಮಧ್ಯಾಹ್ನ ತೆರಳಿದ್ದ ಸೇಫಿನಿ, ಅಲ್ಲಿನ ಹಣ ಪಡೆಯುವ ಯಂತ್ರಕ್ಕೆ ಡಿವೈಸ್‌ ಅಳವಡಿಸಿ ಅದರೊಳಗಿನ ಉಪಕರಣಗಳ ಕಾರ್ಯಸ್ಥಗಿತಗೊಳಿಸಿದ್ದಳು. ಬಳಿಕ ಎಟಿಎಂನಲ್ಲಿ ಹಂತ ಹಂತವಾಗಿ .17.71 ಲಕ್ಷ ಡ್ರಾ ಮಾಡಿದ್ದಳು. ಎಟಿಎಂ ಯಂತ್ರವನ್ನು ತಪಾಸಣೆ ನಡೆಸಿದಾಗ ಅದರಲ್ಲಿನ ಡಿವೈಎಸ್‌ ಕಾರ್ಯಸ್ಥಗಿತವಾಗಿದ್ದು, ಮತ್ತೊಂದು ಡಿವೈಎಸ್‌ ಚಾಲ್ತಿಯಲ್ಲಿತ್ತು. ಕೂಡಲೇ ಎಚ್ಚೆತ್ತು ಸಿಸಿ ಕ್ಯಾಮರಾ ದೃಶ್ಯಾವಳಿ ಪರಿಶೀಲನೆ ನಡೆಸಿದಾಗ ಯುವತಿಯೊಬ್ಬಳು, ಎಟಿಎಂ ಕೇಂದ್ರಕ್ಕೆ ಪ್ರವೇಶಿಸಿ ಡಿವೈಸ್‌ ಅಳವಡಿಸುತ್ತಿರುವ ದೃಶ್ಯಾವಳಿ ಪತ್ತೆಯಾಯಿತು. ಕ್ಯಾಮರಾದಲ್ಲಿ ಸೆರೆಸಿಕ್ಕ ಮುಖ ಚಹರೆ ಆಧರಿಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
 

click me!