ಶಾಮಸುಂದರ ನಗರದಲ್ಲಿ ಮಂಗಳವಾರವೂ ಭಯದ ವಾತಾವರಣ| ಮನೆಯಿಂದ ಹೊರಬರೋದಕ್ಕು ಹೆದರುತ್ತಿದ್ದ ಜನರು| ಬಡಾವಣೆಯ ಸುತ್ತಮುತ್ತ ಅಘೋಷಿತ ಬಂದ್| ಹೋಳಿ ಹಬ್ಬದ ದಿನವೇ ರಕ್ತದೋಕುಳಿ| ಬೆಚ್ಚಬಿದ್ದ ಸ್ಥಳೀಯರು|
ಕಲಬುರಗಿ(ಮಾ.31): ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಸೋಮವಾರ ಸಾಯಂಕಾಲ ಬರ್ಬರವಾಗಿ ಯುವಕನನ್ನು ಕೊಲೆ ಮಾಡಲಾದ ಶಾಮಸುಂದರ ನಗರದಲ್ಲಿ ಮಂಗಳವಾರವೂ ಸಹ ಭಯದ ವಾತಾವರಣ ಮುಂದುವರಿದಿತ್ತು.
ಜನರು ಮನೆಯಿಂದ ಹೊರಬರಕ್ಕೂ ಹೆದರುತ್ತಿದ್ದರು. ಆತಂಕ ಮನೆ ಮಾಡಿತ್ತು. ಬಡಾವಣೆಯ ಸುತ್ತಮುತ್ತ ಅಘೋಷಿತ ಬಂದ್ ವಾತಾವರಣ ನಿರ್ಮಾಣವಾಗಿತ್ತು. ಕೇವಲ ಯುವಕರ ತಂಡಗಳು ಮಾತ್ರ ಅಲ್ಲಲ್ಲಿ ಸುತ್ತಾಡುತ್ತಿರುವುದು ಕಂಡಬಂತು. ಹೋಳಿ ಹಬ್ಬದ ದಿನವೇ ರಕ್ತದೋಕುಳಿ ಹರಿದಿದ್ದರಿಂದ ಅಲ್ಲಿನ ನಿವಾಸಿಗಳು ಬೆಚ್ಚಿ ಬಿದ್ದಿದ್ದಾರೆ.
ಸೋಮವಾರ ಸಾಯಂಕಾಲ ಯುವಕರ ಗುಂಪು ಮಹಿಳೆಯರು, ವಯೋವೃದ್ಧರೆಂಬುದನ್ನು ನೋಡದೆ ಮನಬಂದಂತೆ ದಾರಿಗೆ ಸಿಕ್ಕವರನ್ನು ಹೊಡೆದಿದ್ದರು. ಅಷ್ಟೇ ಅಲ್ಲ, ಮನೆಗಳ ಗಾಜು, ಮನೆಮುಂದೆ ನಿಂತಿರುವ ವಾಹನಗಳ ಮೇಲೂ ಕಲ್ಲೆಸೆದಿದ್ದರೂ. ಈ ಸಂದರ್ಭದಲ್ಲಿ ಮಹಾದೇವಿ ಒಂಟಿ ಎಂಬ ವೃದ್ಧ ಮಹಿಳೆಯ ಮನೆ ಹೊಕ್ಕು ಕಟ್ಟಿಗೆಯಿಂದ ಹೊಡೆದು ಗಾಯಗೊಲಿಸಿದ್ದರು. ಈ ಉದ್ರಿಕ್ತ ತಂಡದಿಂದ ತಪ್ಪಿಸಿಕೊಳ್ಳಲು ನಿವಾಸಿಗಳು ಮನೆಯ ಬಾಗಿಲು ಭದ್ರಪಡಿಸಿಕೊಂಡು ಮಂಚದ ಕೆಳಗಡೆ, ಶೌಚಾಗೃಹದ ಒಳಗಡೆ ಹೋಗಿ ಅವಿತಕೊಂಡಿದ್ದರು ಎನ್ನಲಾಗುತ್ತಿದೆ.
ಉದ್ರಿಕ್ತ ಪರಿಸ್ಥಿತಿ ನಿರ್ಮಾಣವಾಗಿದ್ದರಿಂದ 50ಕ್ಕೂ ಅಧಿಕ ಪೊಲೀಸರನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ. ಕಲಬುರಗಿ ಬಿಪ ವಿಭಾಗದ ಎಸಿಪಿ ನೇತೃತ್ವದಲ್ಲಿ ಬ್ರಹ್ಮಪುರ, ಸ್ಟೇಷನ್ ಬಜಾರ್, ಆರ್.ಜಿ.ನಗರ ಪೊಲೀಸ್ ಇನ್ಸಪೆಕ್ಟರ್ ಗಳನ್ನೊಳಗೊಂಡ ತಂಡವನ್ನು ತನಿಖೆಗಾಗಿ ರಚಿಸಲಾಗಿದೆ.
ಮದುವೆ ಆಗಲು ಮುಂದಾದ ಬಾರ್ ಡ್ಯಾನ್ಸರ್‌ಳನ್ನು ಕೊಂದ..!
ಐವರ ವಿರುದ್ಧ ಪ್ರಕರಣ:
ನಗರದ ಜಿಮ್ಸ್ ಆಸ್ಪತ್ರೆಯ ಎದುರು ನಡೆದ ವೀರತಾ ಉಪಾಧ್ಯೆ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಲಾಲ್ಕಾ ಅಲಿಯಾಸ್ ಲಾಲೂಪ್ರಸಾದ್, ವಿಶಾಲ್ ನವರಂಗ್, ಸತೀಶಕುಮಾರ ಅಲಿಯಾಸ್ ಗುಂಡು ಫರಹತಾಬಾದ್, ಬಾಂಬೆ ಸಂಜಯ್ ಹಾಗೂ ತೌಸಿಫ್ ಎಂಬುವವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕೊಲೆಗೆ ಕಾರಣ:
ನಗರದ ಹಳೆ ಆರ್.ಟಿ.ಓ.ಕ್ರಾಸ್ ಏರಿಯಾ ನಿವಾಸಿ ವೀರತಾ ವಿಠ್ಠಲ ಉಪಾಧ್ಯ (22) ಕೊಲೆಯಾದ ಯುವಕ. ಮೃತಪಟ್ಟವೀರತಾ ಹಾಗೂ ಲಾಲ್ಕಾ ಅಲಿಯಾಸ್ ಲಾಲೂಪ್ರಸಾದ್ ಎಂಬಾತನ ಮಧ್ಯೆ ವೈಷಮ್ಯವಿತ್ತು. ಜಿಮ್ಸ… ಆಸ್ಪತ್ರೆಯ ಬಳಿ ಚಹಾ ಕುಡಿಯಲು ಲಾಲ್ಕಾ ಮತ್ತು ಆತನ ಸಂಗಡಿಗರು ಬಂದಿದ್ದ ವೇಳೆ ಅಲ್ಲಿಗೆ ಬಂದ ವೀರತಾನನ್ನು ಕಂಡು ಜಗಳಕ್ಕೆ ಮುಂದಾಗಿ ಬೈಕ್ ನಿಂದ ಆತನನ್ನು ಕೆಳಗೆ ಕೆಡವಿ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಪರಾರಿಯಾಗಿದ್ದಾರೆ. ನಂತರ ಕೊಲೆಯಾದವರ ಕಡೆಯಿಂದ ಯುವಕರ ಗುಂಪು ಕೈಯಲ್ಲಿ ತಲ್ವಾರ್, ಬಡಿಗೆ, ಸೈಜುಗಲ್ಲುಗಳನ್ನು ಹಿಡಿದು ಜೋರಾಗಿ ಚೀರಾಡುತ್ತಾ, ಮನೆಯೊಳಗೆ ಹೊಕ್ಕು ಸಿಕ್ಕ ಸಿಕ್ಕವರನ್ನು ಹೊಡೆದಿದೆ. ಮನೆಯ ಮುಂದೆ ನಿಂತಿದ್ದ ಕಾರು, ಬೈಕುಗಳನ್ನು ಜಖಂ ಮಾಡಿದ್ದಾರೆ.