
ಮಂಗಳೂರು(ಜ.09): ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಹುದ್ದೆಗೆ ಸ್ಪರ್ಧಿಸುತ್ತಿರುವ ಬೆಂಗಳೂರಿನ ಶಾಸಕ ಹ್ಯಾರೀಸ್ ಪುತ್ರ ಮಹಮ್ಮದ್ ನಲಪ್ಪಾಡ್ ಬೆಂಬಲಿಗರಿದ್ದ ಕಾರು ಮಗುವೊಂದಕ್ಕೆ ಡಿಕ್ಕಿ ಹೊಡೆದಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರದ ದೇರಳಕಟ್ಟೆಯಲ್ಲಿ ಶುಕ್ರವಾರ ಸಂಜೆ ನಡೆದಿದೆ.
ಇದನ್ನು ತಪ್ಪಾಗಿ ಭಾವಿಸಿದ ಸ್ಥಳೀಯರು ಹೊರಜಿಲ್ಲೆಯಿಂದ ಮಕ್ಕಳ ಕಳ್ಳರು ಆಗಮಿಸಿರುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶ ರವಾನಿಸಿದ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು.
ಬೆಂಗಳೂರಿನಿಂದ ಮಹಮ್ಮದ್ ನಲಪ್ಪಾಡ್ ಬೆಂಬಲಿಗರಿದ್ದ 12 ಮಂದಿ ತಂಡ, 2 ಕಾರುಗಳಲ್ಲಿ ಮಂಗಳೂರು ಕ್ಷೇತ್ರ ಪ್ರವಾಸ ಕೈಗೊಂಡಿದ್ದರು. ಮುಡಿಪು, ಕೊಣಾಜೆ, ಹರೇಕಳ ಭಾಗಗಳಲ್ಲಿ ಪ್ರವಾಸ ನಡೆಸಿದ ತಂಡ, ಚುನಾವಣಾ ಪ್ರಚಾರ ನಡೆಸಿ ಮಂಗಳೂರಿಗೆ ವಾಪಸಾಗುತ್ತಿದ್ದರು.
ಸಚಿವರಾಗುವ ಕನಸು ಕಂಡವರಿಗೆ ಮತ್ತೊಮ್ಮೆ ಶಾಕ್...!
ಈ ಸಂದರ್ಭ ದೇರಳಕಟ್ಟೆಬಳಿ ರಸ್ತೆ ದಾಟುತ್ತಿದ್ದ ಮಗುವಿಗೆ ಕಾರು ಡಿಕ್ಕಿಯಾಗಿದೆ. ಕೂಡಲೇ ಕಾರಿನಿಂದಿಳಿದ ತಂಡ ಮಗುವಿನತ್ತ ಇಳಿದು ಬರುತ್ತಿದ್ದಂತೆ ಸ್ಥಳೀಯವಾಗಿ ಅವರನ್ನು ಮಕ್ಕಳ ಕಳ್ಳರು ಎಂದು ಅಪಪ್ರಚಾರ ನಡೆಸಿದ್ದಾರೆ.
ಅಲ್ಲದೆ, ಸಾಮಾಜಿಕ ಜಾಲತಾಣಗಳಲ್ಲೂ ಸುಳ್ಳು ಸುದ್ದಿ ಹರಿಯಲಾರಂಭಿಸಿದ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಹಲವು ಮಂದಿ ಜಮಾಯಿಸಿ ಗೊಂದಲದ ವಾತಾವರಣ ನಿರ್ಮಾಣವಾಯಿತು. ಕೂಡಲೇ ಸ್ಥಳಕ್ಕಾಗಮಿಸಿದ ಕೊಣಾಜೆ ಪೊಲೀಸರು, ಎರಡು ಕಾರುಗಳಲ್ಲಿದ್ದ ತಂಡವನ್ನು ಕೊಣಾಜೆ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ