
ಆತ್ಮಭೂಷಣ್, ಮಂಗಳೂರು
ಮಂಗಳೂರು(ಜ.11): ಆ್ಯಪ್‌ಗಳ ಮೂಲಕ ಸಾಲ ನೀಡಿ ಬಳಿಕ ಪಾವತಿಸದ ಗ್ರಾಹಕರನ್ನೇ ಟಾರ್ಗೆಟ್ ಮಾಡಿಕೊಳ್ಳುತ್ತಿರುವ ಅನಧಿಕೃತ ಜಾಲದ ಬೆನ್ನಲ್ಲೇ ದಿನದಿಂದ ದಿನಕ್ಕೆ ಆನ್‌ಲೈನ್ ವಂಚಕರ ಸಂಖ್ಯೆ ಹೆಚ್ಚುತ್ತಿದೆ. ಇದೀಗ, ಹಿಂದಿ ವಾಹಿನಿಯೊಂದರಲ್ಲಿ ಬಾಲಿವುಡ್ ನಟ ಅಮಿತಾಬ್ ಬಚ್ಚನ್ ನಡೆಸಿಕೊಡುವ ಕೌನ್ ಬನೇಗಾ ಕರೋಡ್‌ಪತಿ(ಕೆಬಿಸಿ) ಹೆಸರಲ್ಲಿ ಆನ್‌ಲೈನ್ ಮೂಲಕ ವಂಚನೆ ಮಾಡುತ್ತಿರುವ ಜಾಲವೊಂದು ಸಕ್ರಿಯವಾಗಿ ಕಾರ್ಯಾಚರಿಸುತ್ತಿರುವುದು ಬೆಳಕಿಗೆ ಬಂದಿದೆ!
ಮಂಗಳೂರಿನ ಸರ್ಕಾರಿ ನೌಕರರೊಬ್ಬರು ಇಂಥದ್ದೊಂದು ಜಾಲದ ಸುಳಿಗೆ ಸಿಲುಕಿ ಸಾವಿರಾರು ರು ಕಳೆದುಕೊಂಡಿದ್ದಾರೆ. ಪಾಕಿಸ್ತಾನದ ಮೂಲದ್ದೂ ಎನ್ನಲಾದ ಅನಾಮಿಕ ಕರೆ(+923059296144)ಯೊಂದು ಇವರನ್ನು ವಂಚನೆಯ ಖೆಡ್ಡಾಕ್ಕೆ ಕೆಡವಿದೆ.
ನಕಲಿ ಕರೆ, ನಕಲಿ ಮೊಹರು:
ಮಂಗಳೂರಿನ ಈ ಸಿಬ್ಬಂದಿ ಮೊಬೈಲ್‌ಗೆ ಜ.6ರಂದು ಮಧ್ಯಾಹ್ನದ ವೇಳೆಗೆ ವಾಟ್ಸಾಪ್ ಕರೆ ಬಂದಿದೆ. ಇವರ ಪುತ್ರ ಕರೆ ಸ್ವೀಕರಿಸಿದಾಗ ಹಿಂದಿಯಲ್ಲಿ ಮಾತನಾಡಿದ ವ್ಯಕ್ತಿ ಏರ್‌ಟೆಲ್ ಸ್ಪರ್ಧೆಯಲ್ಲಿ ನಿಮ್ಮ ಸಿಮ್ ಗೆದ್ದಿದ್ದು, 25 ಲಕ್ಷ ಬಹುಮಾನ ಸಿಗಲಿದೆ. ನಗದು ಪಾವತಿಸಬೇಕಾದರೆ ತಕ್ಷಣ ನಿಗದಿತ ಮೊತ್ತ ಪಾವತಿಸುವಂತೆ ಅವಸರ ಮಾಡಿದ್ದರು. ಇವರನ್ನು ನಂಬಿಸಲು ಭಾರತ ಸರ್ಕಾರದ ಮೊಹರು, ರಾಷ್ಟ್ರಧ್ವಜ, ಸಂಸತ್‌ಭವನ, ಪ್ರಧಾನಿಯೂ ಒಳಗೊಂಡಂತೆ ಇರುವ, ಮೇಲ್ನೋಟಕ್ಕೆ ಅಸಲಿಯಂತೆ ಕಾಣುವ ಪತ್ರವನ್ನು ಕಳುಹಿಸಿದ್ದರು. ನಗದು ಮೊತ್ತವನ್ನು ಪಂಜಾಬ್‌ನ ರಾಣಾ ಪ್ರತಾಪ್ ಎಂಬವರ ಹೆಸರಿಗೆ ಪಾವತಿಸುವಂತೆ ಸೂಚಿಸಿದ್ದರು.
2 ಲಕ್ಷ ರುಪಾಯಿ ವಿಮೆ ಆಸೆಗೆ ಬಿದ್ದು 2.84 ಲಕ್ಷ ಕಳೆದುಕೊಂಡ..!
ಸತ್ಯ ಇರಬಹುದೆಂದು ನಂಬಿ ವಂಚಕರು ನೀಡಿದ ಮೊಬೈಲ್ ನಂಬರಿಗೆ 8,200 ಫೋನ್ ಪೇ ಮಾಡಿದ್ದರು. ಬಳಿಕ ಬ್ಯಾಂಕ್ ಖಾತೆಯ ಪಾಸ್‌ವರ್ಡ್ ತೆರೆಯಲು 25 ಸಾವಿರ ಪೀಕಿಸಿದ್ದರು. ಅದೂ ಸಾಲದು ಎಂಬಂತೆ 25 ಲಕ್ಷ ಬಹುಮಾನ ಮೊತ್ತ ನೀಡಬೇಕಾದರೆ ಆದಾಯ ತೆರಿಗೆ ಪಾವತಿಸಬೇಕಾಗುತ್ತದೆ ಎಂದು ಹೇಳಿ ಮತ್ತೊಮ್ಮೆ 45 ಸಾವಿರ ಕಬಳಿಸಿದ್ದಾರೆ.
ನಂತರ ಈ ಸಿಬ್ಬಂದಿ ಹೆಸರಿನಲ್ಲಿ 25 ಲಕ್ಷ ಮೊತ್ತಕ್ಕೆ ನಕಲಿ ಚೆಕ್ ಹಾಳೆ ಮುದ್ರಿಸಿ ಅದನ್ನು ಸ್ಕ್ಯಾನ್ ಮಾಡಿ ಕಳುಹಿಸಿದ್ದರು. ಇದು ನಗದೀಕರಣವಾಗಬೇಕಾದರೆ ಹಳೆ ಸಿಮ್ ಕಾರ್ಡ್‌ನ ನಂಬರು ಕೊಡಿ, ಇಲ್ಲವೇ 75 ಸಾವಿರ ಕೂಡಲೇ ಪಾವತಿಸುವಂತೆ ಹೇಳಿದ್ದರು. ಆಗಲೇ ಮೂರು ಕಂತಿನಲ್ಲಿ ಒಟ್ಟು .78,200 ಮೊತ್ತ ಪಾವತಿಸಲಾಗಿತ್ತು. ಇದು ವಂಚನಾ ಜಾಲ ಎಂದು ಗೊತ್ತಾದ ಬಳಿಕ ಆ ನಂಬರಿಗೆ ಕರೆ ಮಾಡಿದರೆ, ಪಾವತಿಸಿದ ಮೊತ್ತ ವಾಪಸ್ ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಇದೀಗ ಸಂತ್ರಸ್ತರು ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ