ಕೇವಲ 2 ಲಕ್ಷ ರುಪಾಯಿ ಹಣ ಪಡೆಯಲು 2.84 ಲಕ್ಷ ರುಪಾಯಿ ಪಾವತಿಸಿ ಮೋಸ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಬೆಂಗಳೂರು(ಜ.11): ವಿಮಾ ಕಂಪನಿ ಹೆಸರಿನಲ್ಲಿ ಖಾಸಗಿ ಕಂಪನಿ ಉದ್ಯೋಗಿಯೊಬ್ಬರಿಗೆ 2.84 ಲಕ್ಷ ರುಪಾಯಿ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ದೊಡ್ಡನೆಕ್ಕುಂದಿ ನಿವಾಸಿ ಅನೀಶ್ (29) ವಂಚನೆಗೊಳಗಾದವರು. ಈ ಸಂಬಂಧ ವೈಟ್‌ಫೀಲ್ಡ್ ಸೈಬರ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಅನೀಶ್ ಈ ಹಿಂದೆ ವಿಮೆ ಮಾಡಿಸಿಕೊಂಡಿದ್ದರು. 2020 ನವೆಂಬರ್ 27ರಂದು ಇವರಿಗೆ ಅಪರಿಚಿತ ಇ-ಮೇಲ್ ಐಡಿಯಿಂದ ಮೇಲ್‌ವೊಂದು ಬಂದಿತ್ತು. ಅದರಲ್ಲಿ ನಿಮ್ಮ ವಿಮಾ ನಂಬರ್‌ಗೆ 2,04,435 ರುಪಾಯಿ ಬಂದಿದೆ. ಈ ಹಣವನ್ನು ನಿಮ್ಮ ಬ್ಯಾಂಕ್ ಖಾತೆಗೆ ಜಮೆ ಮಾಡಲು ಕೆಲ ಶುಲ್ಕಗಳನ್ನು ಪಾವತಿಸಬೇಕಾಗುತ್ತದೆ ಎಂಬ ಸಂದೇಶ ಮೇಲ್‌ನಲ್ಲಿತ್ತು.
undefined
2020 ಡಿಸೆಂಬರ್ 10ರಂದು ಸುನೀಲ್ ತಿವಾರಿ, ಜ್ಯೋತಿ ಚೌಧರಿ ಹಾಗೂ ರಾಕೇಶ್ ಅಗರವಾಲ್ ಎಂಬುವರು ಅನೀಶ್‌ಗೆ ಕರೆ ಮಾಡಿದ್ದರು. ನಿಮ್ಮ ವಿಮೆ ಪಡೆಯಲು ಮೊದಲಿಗೆ ಸ್ಟ್ಯಾಂಪಿಂಗ್ ಶುಲ್ಕ 14,310 ರುಪಾಯಿ ಹಣವನ್ನು ನಮ್ಮ ಖಾತೆಗಳಿಗೆ ಜಮೆ ಮಾಡುವಂತೆ ಸೂಚಿಸಿದ್ದರು. ಅದರಂತೆ ಅನೀಶ್ ಗೂಗಲ್ ಪೇ ಮೂಲಕ ಅವರು ಹೇಳಿದ ಖಾತೆಗೆ ಹಣ ಜಮೆ ಮಾಡಿದ್ದರು.
ಕುಡಿದ ನಶೆಯಲ್ಲಿ ಜಗಳ: ಸ್ನೇಹಿತನ ಬರ್ಬರ ಹತ್ಯೆ
ಇದಾದ ಬಳಿಕ ಹಂತ-ಹಂತವಾಗಿ ಎನ್‌ಒಸಿ ಸೇರಿ ವಿವಿಧ ಶುಲ್ಕಗಳ ಹೆಸರಿನಲ್ಲಿ ಆರೋಪಿಗಳು ಅನೀಶ್‌ನಿಂದ ತಮ್ಮ ಖಾತೆಗೆ 2,84,337 ಹಣವನ್ನು ವರ್ಗಾವಣೆ ಮಾಡಿಸಿಕೊಂಡಿದ್ದರು. ತಮ್ಮ ವಿಮೆ ಹಣಕ್ಕಿಂತ ಹೆಚ್ಚಿನ ಹಣವನ್ನು ವಂಚಕರ ಖಾತೆಗೆ ದೂರುದಾರ ಜಮೆ ಮಾಡಿದ್ದರು. ಪಾವತಿಸಿದ ಎಲ್ಲ ಶುಲ್ಕವನ್ನೂ ಹಿಂತಿರುಗಿಸುವುದಾಗಿ ಅಪರಿಚಿತರು ಹೇಳಿದ್ದರಿಂದ ಹಣ ಪಾವತಿಸಿದ್ದಾಗಿ ಅನೀಶ್ ದೂರಿನಲ್ಲಿ ತಿಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.