
ಬೆಂಗಳೂರು(ಸೆ.04): ವೃದ್ಧೆಯೊಬ್ಬರನ್ನು ಕೊಲೆ ಮಾಡಿ ಚಿನ್ನಾಭರಣ ದೋಚಿರುವ ಘಟನೆ ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಯ ರಾಮಸ್ವಾಮಿ ಪಾಳ್ಯದಲ್ಲಿ ಬುಧವಾರ ನಡೆದಿದೆ. ರಾಮಸ್ವಾಮಿಪಾಳ್ಯ ನಿವಾಸಿ ಕಾಂತಮ್ಮ (70) ಕೊಲೆಯಾದವರು.
ಕಾಂತಮ್ಮ ಅವರ ಮೈ ಮೇಲಿದ್ದ ಚಿನ್ನಾಭರಣವನ್ನು ದುಷ್ಕರ್ಮಿಗಳು ಕಳವು ಮಾಡಿದ್ದು, ಪರಿಚಯಸ್ಥರೇ ಕೃತ್ಯ ಎಸಗಿರುವ ಸಾಧ್ಯತೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಕಾಂತಮ್ಮ ಅವರಿಗೆ ಐವರು ಮಕ್ಕಳಿದ್ದು, ಮಾನಸಿಕ ಅಸ್ವಸ್ಥ ಪುತ್ರಿ ಜತೆ ರಾಮಸ್ವಾಮಿ ಪಾಳ್ಯದಲ್ಲಿ ವಾಸವಿದ್ದರು. ಉಳಿದ ಮಕ್ಕಳು ಪ್ರತ್ಯೇಕವಾಗಿ ನೆಲೆಸಿದ್ದಾರೆ.
ಬುಧವಾರ ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ಮಹಿಳೆಯೊಬ್ಬರು ಕಾಂತಮ್ಮರ ಮನೆಗೆ ಬಂದಿದ್ದು, ನಿಮ್ಮ ಜನಧನ್ ಖಾತೆ ಮಾಡಿಸುವುದಾಗಿ ಮಾನಸಿಕ ಅಸ್ವಸ್ಥ ಪುತ್ರಿಯನ್ನು ಹೊರಗೆ ಕರೆದೊಯ್ದಿದ್ದಳು. ಬಳಿಕ ಮನೆಗೆ ಬಂದಿರುವ ದುಷ್ಕರ್ಮಿಗಳು ವೃದ್ಧೆಯ ಉಸಿರುಗಟ್ಟಿಸಿ, ಕಾಂತಮ್ಮರ ಕೈನಲ್ಲಿದ್ದ ನಾಲ್ಕು ಚಿನ್ನದ ಬಳೆ, ಕಿವಿಯೋಲೆ ಸೇರಿದಂತೆ ಮೈ ಮೇಲಿದ್ದ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.
ಮನೆ ಬಿಟ್ಟು ಹೋಗಿ ಎಂದಿದ್ದಕ್ಕೆ ಸ್ನೇಹಿತನನ್ನೇ ಕೊಂದ ಗೆಳೆಯರು..!
ಮಾನಸಿಕ ಅಸ್ವಸ್ಥ ಪುತ್ರಿಯನ್ನು ಆರೋಪಿಗಳು ಸುಮಾರು ಒಂದು ತಾಸು ಸುತ್ತಾಡಿಸಿ ಬಳಿಕ ಮನೆ ಬಳಿ ಬಿಟ್ಟು ಹೋಗಿದ್ದರು. ಮನೆಗೆ ಬಂದು ನೋಡಿದ ಪುತ್ರಿ ಕಿರುಚಿಕೊಂಡಿದ್ದು, ನೆರೆ ಮನೆ ನಿವಾಸಿಗಳು ಬಂದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಮನೆಯಲ್ಲಿ ಮಾನಸಿಕ ಪುತ್ರಿ ಇದ್ದರೆ, ದರೋಡೆ ಸಾಧ್ಯವಾಗುವುದಿಲ್ಲ ಎಂಬ ಕಾರಣಕ್ಕೆ ನೆಪ ಹೇಳಿ ಆಕೆಯನ್ನು ಹೊರಗೆ ಕರೆದುಕೊಂಡು ಹೋಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಪರಿಚಯಸ್ಥರೇ ಕೃತ್ಯ ಎಸಗಿರುವ ಬಗ್ಗೆ ಶಂಕೆ ಇದೆ. ಸ್ಥಳೀಯ ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಲಾಗುತ್ತಿದೆ. ಆರೋಪಿಗಳ ಬಗ್ಗೆ ಕೆಲ ಮಾಹಿತಿ ಲಭ್ಯವಿದ್ದು, ಶೀಘ್ರ ಬಂಧಿಸಲಾಗುವುದು ಎಂದು ಇನ್ಸ್‌ಪೆಕ್ಟರ್ ಜಯರಾಜ್ ತಿಳಿಸಿದ್ದಾರೆ.
"
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ