ದರೋಡೆಗೆ ಹೋದವರು 6 ಜನ ಆದ್ರೆ ವಾಪಸ್ಸು ಬಂದಿದ್ದು 3 ಜನ
ಇದು ದರೋಡೆಗೆಂದು ಹೋದವರು ಹೆಣವಾದ ಧಾರುಣ ಕತೆ
ಹೆದ್ದಾರಿಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದ ಬೈಕ್ ಸವಾರರ ಸಾವಿಗೆ ಕಾರಣ ಪತ್ತೆ
ವರದಿ- ವರದರಾಜ್, ಏಷ್ಯಾನೆಟ್ ಸುವರ್ಣ ನ್ಯೂಸ್
ದಾವಣಗೆರೆ (ಫೆ.15): ಕಳೆದ ನಾಲ್ಕು ದಿನಗಳ ಹಿಂದೆ ಅಂದರೆ ಫೆ.11ನೇ ತಾರೀಖಿನಂದು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳನ್ನು ಅಡ್ಡಗಟ್ಟಿ ದರೋಡೆ ಮಾಡಲೆಂದು ಹೋದವರು, ದರೋಡೆಗೆ ಒಳಗಾಗಿ ಸಾವಿರಾರು ರೂ. ಹಣವನ್ನು ಕಳೆದುಕೊಂಡ ಲಾರಿ ಚಾಲಕನಿಂದಲೇ ಕೊಲೆಯಾಗಿ ರಸ್ತೆಯಲ್ಲಿ ಅನಾಥ ಶವವಾಗಿ ಬಿದ್ದಿದ್ದಾರೆ. ಹೆದ್ದಾರಿಯಲ್ಲಿ ಲಾರಿಯಿಂದ ಗುದ್ದಲಾಗಿದ್ದು, ಮೂವರು ಹೆಣಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು.
ದಾವಣಗೆರೆ ನಗರದಿಂದ ಪಕ್ಕದಲ್ಲಿರುವ ಹಳ್ಳಿಯೊಂದಲ್ಲಿ ಗ್ರಾಮದೇವಿ ಜಾತ್ರೆಗೆ ಹೋಗಿ ಬರುವುದಾಗಿ ಮನೆಯಲ್ಲಿ ಹೋಳಿ ಹೋಗಿದ್ದ ಮೂವರು ಬೈಕ್ ಸವಾರರ ಶವಗಳು ರಾಷ್ಟ್ರೀಯ ಹೆದ್ದಾರಿಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಅಪರಿಚಿತ ವಾಹನವೊಂದು ಬೈಕ್‌ಗೆ ಗುದ್ದಿಕೊಂಡು ಹೋಗಿದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಲಾರಿಯನ್ನು ಬೈಕ್ ಸವಾರರ ಮೇಲೆ ಹರಿಸಿ ಸುಸಜ್ಜಿತವಾಗಿ ಮಾಡಲಾಗಿರುವ ಕೊಲೆ ಎಂಬುದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ. ಇನ್ನು ಕೊಲೆ ಮಾಡಿದ ಉತ್ತರ ಪ್ರದೇಶ ರಾಜ್ಯದ ಲಾರಿ ಚಾಲಕನನ್ನು ದಾವಣೆಗರೆ ಪೊಲೀಸರು ಚನ್ನೈನಲ್ಲಿ ಬಂಧಿಸಿ ದಾವಣೆಗೆರೆ ಕರೆತಂದಿದ್ದಾರೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ದರೋಡೆಗೆ ಹೋದವರು 6 ಜನ ಆದ್ರೆ ವಾಪಸ್ಸು ಬಂದಿದ್ದು 3 ಜನ. ದರೋಡಕೋರರು ಇಷ್ಟಕ್ಕು ಕೊಲೆಯಾಗಲು ಏನು ಕಾರಣ ಅವರು ಕೊಲೆಯಾಗಿದ್ದು ಯಾರಿಂದ ಇವೆಲ್ಲಾ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಆ ಮೂವರು ದರೋಡೆಕೋರರನ್ನು ಕೊಲೆ ಮಾಡಿದವನು ಒಬ್ಬ ಲಾರಿ ಡ್ರೈವರ್. ಆ ಲಾರಿ ಡ್ರೈವರ್ ಇವರನ್ನು ಕೊಲೆ ಮಾಡಿದ್ದು ಏಕೆ ... ಈ ಕೊಲೆಯ ಹಿಂದಿನ ಕರಾಳ ಸತ್ಯ ಏನು ಎಂಬುದು ಈ ಸ್ಟೋರಿಯಲ್ಲಿದೆ.
ಹೆದ್ದಾರಿಯಲ್ಲಿ ಬೈಕ್‌ಗೆ ಗುದ್ದಿದ ಅಪರಿಚಿತ ವಾಹನ: ದಿಕ್ಕಾಪಾಲಾಗಿ ಬಿದ್ದ ಯುವಕರ ಮೃತದೇಹಗಳು
ಮೃತದೇಹ ಗುರುತಿಸಿ ಸಂಬಂಧಿಕರಿಗೆ ಒಪ್ಪಿಸಿದ್ದರು: ದಾವಣಗೆರೆ ಆನಗೋಡು ಬಳಿಯ ಎನ್ ಹೆಚ್ 48 ನಲ್ಲಿ ಪೆಬ್ರವರಿ 11 ರ ರಾತ್ರಿ ಮೂವರು ಯುವಕರ ಶವಗಳು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ರಾತ್ರಿ 12. 20 ರ ಸುಮಾರಿಗೆ ಮೂವರು ಯುವಕರು ಸಾಗುತ್ತಿದ್ದ ಬೈಕ್ ಗೆ ಆಕ್ಸಿಡೆಂಟ್ ಆಗಿ ಮೃತದೇಹಗಳು ಚೆಲ್ಲಾಪಿಲ್ಲಿಯಾಗಿದ್ದವು.. ಸ್ಥಳಕ್ಕೆ ಭೇಟಿ ನೀಡಿದ್ದ ದಾವಣಗೆರೆ ಗ್ರಾಮಾಂತರ ಪೊಲೀಸರು ಪರಿಶೀಲನೆ ನಡೆಸಿ ಅವರ ಮೃತದೇಹಗಳ ಗುರುತು ಪತ್ತೆಹಚ್ಚಿ ಸಂಬಂಧಿಕರಿಗೆ ಪೋನ್ ಮಾಡಿದ್ದರು. ಪರಶುರಾಮ ಶಿವಕುಮಾರ್ ಸಂದೇಶ್ ರ ಮೃತದೇಹಗಳನ್ನು ದಾವಣಗೆರೆ ಶವಾಗಾರಕ್ಕೆ ಸಾಗಿಸಿ ಮರಣೋತ್ತರ ಪರೀಕ್ಷೆ ನಂತರ ಮೃತದೇಹಗಳನ್ನು ಸಂಬಂಧಿಕರಿಗೆ ಒಪ್ಪಿಸಿದ್ದರು.
ರಸ್ತೆಯಲ್ಲಿ ಸಾವನ್ನಪ್ಪಿದ ದೃಶ್ಯದಿಂದಲೇ ಅನುಮಾನ: ಹೆದ್ದಾರಿಯಲ್ಲಿ ಮೃತರಾದ ರೀತಿಯನ್ನು ನೋಡಿ ಅವರ ಸಂಬಂಧಿಕರು ಇದೊಂದು ವ್ಯವಸ್ಥಿತ ಕೊಲೆ ಎಂದು ಆರೋಪಿಸಿದ್ದರು. ಈ ಬಗ್ಗೆ ತನಿಖೆಯಾಗಬೇಕೆಂದು ಒತ್ತಾಯಿಸಿದ್ದರು. ತಕ್ಷಣ ಕಾರ್ಯಪ್ರವೃತ್ತರಾದ ದಾವಣಗೆರೆ ಗ್ರಾಮಾಂತರ ಪೊಲೀಸರು ಎನ್ ಹೆಚ್ 48 ಸಿಸಿಟಿವಿಗಳನ್ನು ಪರಿಶೀಲನೆ ನಡೆಸಿದ್ದರು. ಟೋಲ್ ಸೇರಿದಂತೆ ರಾಷ್ಟ್ರೀಯ ಹೆದ್ದಾರಿ ಸಿಸಿಟಿವಿಗಳನ್ನು ಪರಿಶೀಲನೆ ನಡೆಸಿದಾಗ ಪೊಲೀಸರಿಗೆ ಆಘಾತಕರ ಮಾಹಿತಿಗಳು ಲಭ್ಯವಾಗಿವೆ. ಈ ಮೂವರು ಸಾವನ್ನಪ್ಪಿದ್ದು ಆಕ್ಸಿಡೆಂಟ್ ನಿಂದ ಅಲ್ಲ ಬದಲಾಗಿ ಕೊಲೆ ಎಂಬುದನ್ನು ಪತ್ತೆ ಹಚ್ಚಿದ್ದಾರೆ ದಾವಣಗೆರೆ ಪೊಲೀಸರು. ಈ ಬಗ್ಗೆ ದಾವಣಗೆರೆ ಎಸ್ಪಿ ರಿಷ್ಯಂತ್ ಇಂಚಿಂಚು ಮಾಹಿತಿ ಕೊಟ್ಟಿದ್ದಾರೆ.
ಲಾರಿ ಚಾಲಕನನ್ನು ಥಳಿಸಿ ಹಲ್ಲೆ ದರೋಡೆ: ಈ ಮೂವರು ಸಾವನಪ್ಪಿದ್ದು ಏಕೆ ಎಂದು ಪರಿಶೀಲಿಸಿದಾಗ ಇವರು ಹೋಗಿದ್ದು ದರೋಡಗೆ ಎಂಬುದು ಸಿಸಿಟಿವಿಯಲ್ಲಿ ಸಾಬೀತಾಗಿದೆ. ಈ ಮೂವರ ಜೊತೆ ಇನ್ನು ಮೂವರು ಹೋಗಿದ್ದು ಅವರೆಲ್ಲರು ಹೈವೈ ದರೋಡೆಗೆ ಹೋಗಿ ಅಲ್ಲಿ ನಡೆದ ನಾಟಕೀಯ ಬೆಳವಣಿಗೆಯಲ್ಲಿ ಅವರ ಮರ್ಡರ್ ಆಗಿದ್ದಾರೆಂಬುದು ಸಾಬೀತಾಗಿದೆ. ಪೆಬ್ರವರಿ 11 ರಂದು ಮಧ್ಯರಾತ್ರಿ ಆನಗೋಡು ಸಮೀಪ ಎನ್.ಹೆಚ್-48 ರಸ್ತೆಯ ಬದಿಯಲ್ಲಿ ದಾವಣಗೆರೆ ನಗರದ ಶ್ರೀರಾಮನಗರ ವಾಸಿಗಳಾದ ಪರಶುರಾಮ, ನಾಗರಾಜ, ಸಂದೇಶ, ಗಣೇಶ, ರಾಹುಲ್ ಮತ್ತು ಶಿವುಕುಮಾರ ಇವರುಗಳು ಲಾರಿಯನ್ನು ನಿಲ್ಲಿಸಿ ಲಾರಿ ಚಾಲಕನನ್ನು ಹೆದರಿಸಿ ಹಲ್ಲೆ ಮಾಡಿದ್ದಾರೆ. ನಂತರ ಲಾರಿ ಚಾಲಕನಿಂದ ರೂ. 8,000 ನಗದು ಹಣ, ಮೊಬೈಲ್ ಹಾಗು ಇತರೆ ವಸ್ತುಗಳನ್ನು ದರೋಡೆ ಮಾಡಿಕೊಂಡು ಹೋಗಿದ್ದಾರೆ.
ಚಾಲಕನ ಮೇಲೆ ಹಲ್ಲೆ ದೃಶ್ಯ ಸಿಸಿಟಿವಿಯಲ್ಲಿ ಸೆರೆ: ದರೋಡೆಕೋರರು ಲಾರಿ ಚಾಲಕನ ಮೇಲೆ ಹಲ್ಲೆ ಮಾಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಲಾರಿಯ ಚಾಲಕನು ದರೋಡೆ ಮಾಡಿಕೊಂಡು ಎರಡು ಬೈಕ್ ಗಳಲ್ಲಿ ಸರ್ವಿಸ್ ರೋಡ್ ನಲ್ಲಿ ಹೋಗುತ್ತಾರೆ. ಎರಡು ಬೈಕ್ ಹೋದ ಧಿಕ್ಕಿನಲ್ಲಿಯೇ ಲಾರಿ ಚಾಲಕ ಲಾರಿ ಚಲಾಯಿಸಿ ಆ ಬೈಕ್ ಗಳ ಮೇಲೆ ಲಾರಿಯನ್ನು ಹತ್ತಿಸಿಕೊಂಡು ಹೋಗುತ್ತಾನೆ. ಒಂದು ಬೈಕಿನಲ್ಲಿ ಹೋಗುತ್ತಿದ್ದ ಪರಶುರಾಮ, ಶಿವುಕುಮಾರ ಮತ್ತು ಸಂದೇಶ ರವರು ಸ್ಥಳದಲ್ಲೇ ಮೃತಪಡುತ್ತಾರೆ. ಇನ್ನೊಂದು ಬೈಕ್ ನಲ್ಲಿದ್ದ ನಾಗರಾಜ, ಗಣೇಶ ಮತ್ತು ರಾಹುಲ್ ಗೆ ಗಾಯಗಳಾಗಿ ಅಲ್ಲಿಂದ ತಪ್ಪಿಸಿಕೊಂಡು ಹೋಗುತ್ತಾರೆ.
Bengaluru: ಬೆಂಗಳೂರಿನಲ್ಲಿ ಹಿಟ್ & ರನ್: ಬೈಕ್‌ಗೆ ಡಿಕ್ಕಿಯಾಗಿ ಕಾರು ಪರಾರಿ
ಉತ್ತರ ಪ್ರದೇಶ ಮೂಲದ ಲಾರಿ ಡ್ರೈವರ್ ಚನ್ನೈನಲ್ಲಿ ಅರೆಸ್ಟ್ : ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ 50/2023 ಕಲಂ 395 ಐಪಿಸಿ ಪ್ರಕರಣ ದಾಖಲಾಗಿ ತಪ್ಪಿಸಿಕೊಂಡವರನ್ನು ಪೊಲೀಸರ ಪತ್ತೆ ಮಾಡಿ ದಸ್ತಗಿರಿ ಮಾಡಲಾಗಿರುತ್ತದೆ. ಮತ್ತೊಂದು ಪ್ರಕರಣದಲ್ಲಿ ದರೋಡೆಕೊರರ ಮೇಲೆ ಲಾರಿಯನ್ನು ಹತ್ತಿಸಿಕೊಂಡು ಹೋಗಿದ್ದ ಉತ್ತರ ಪ್ರದೇಶ ಮೂಲದ ಆರೋಪಿತ ಭೋಲೆ ಯಾದವ ನನ್ನು ಚನ್ನೈನಲ್ಲಿ ಬಂಧಿಸಿ ದಾವಣಗೆರೆ ಕರೆತರಲಾಗಿದೆ. ಎಲ್ಲಾ ಆರೋಪಿತರನ್ನು ದಾವಣಗೆರೆ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಆರೋಪಿತರು ನ್ಯಾಯಾಂಗ ಬಂಧನದಲ್ಲಿರುತ್ತಾರೆ.
ಸದರಿ ಪ್ರಕರಣವನ್ನು ಬೇಧಿಸಿ ಆರೋಪಿಗಳನ್ನು ಪತ್ತೆ ಹಚ್ಚಿದ ಪೊಲೀಸರನ್ನು ದಾವಣಗೆರೆ ಎಸ್ಪಿ ಸಿಬಿ ರಿಷ್ಯಂತ್ ಅಭಿನಂದಿಸಿದ್ದಾರೆ.. ಲಾರಿ ಚಾಲಕನ ಮೇಲೆ ದರೋಡೆ ಮಾಡಿ ಅನ್ಯಾಯವಾಗಿ ಪ್ರಾಣ ಕಳೆದುಕೊಂಡವರ ಕುಟುಂಬದಲ್ಲಿ ಉಳಿದಿರುವುದು ದುಃಖ ಮಾತ್ರ.