
ವರದಿ : ಮಧು.ಎಂ.ಚಿನಕುರಳಿ, ಏಷ್ಯಾನೆಟ್ ಸುವರ್ಣ ನ್ಯೂಸ್
ಮೈಸೂರು (ಡಿ.6): ಅದೊಂದು ಸಿಲ್ಲಿ ಮ್ಯಾಟರ್ ಅಷ್ಟೇ. ಮಧ್ಯರಾತ್ರಿ ಕಾರಿನಲ್ಲಿ ಹೋಗುತ್ತಿದ್ದ ಇಬ್ಬರ ನಡುವೆ ಸಣ್ಣ ಕಾರಣಕ್ಕೆ ಗಲಾಟೆಯಾಗಿದೆ. ಗಲಾಟೆಗೆ ಕ್ಷಮೆ ಕೇಳಿದ್ದು ಆಗಿದೆ. ಆದರೆ, ದೊಡ್ಡದೊಂದು ಅನಾಹುತ ನಡೆಯೋಕೆ ಸಣ್ಣದೊಂದು ಕೂಲಿಂಗ್ ಗ್ಲಾಸ್ ಕಾರಣವಾಗಿದ್ದು ಮಾತ್ರ ಶೋಚನೀಯ. ಅಷ್ಟಕ್ಕೂ ಮೂವರ ಮೇಲೆ ಕಾರು ಹರಿಸುವಂತಹ ಪ್ರಮಾದ ಏನಾಗಿತ್ತು ಅನ್ನೊದನ್ನ ಈ ಸ್ಟೋರಿ ನೋಡಿ.
ಮೈಸೂರಿನ ಒಂಟಿಕೊಪ್ಪಲು ನಿವಾಸಿಯಾಗಿರುವ ದರ್ಶನ್ ಕೈ ಕೋಳ ತೊಟ್ಟು ಪೊಲೀಸ್ ಜೀಪ್ ನಿಂದ ಕೆಳಗಿಳಿದು ರಸ್ತೆಯ ಮಧ್ಯದಲ್ಲಿ ನಿಂತು ಪೊಲೀಸರಿಗೆ ಉತ್ತರಿಸುತ್ತಿದ್ದಾನೆ. ಆದರೆ, ಈತನಿಗೆ ಪೊಲೀಸ್ ಜೀಪ್‌ನಲ್ಲಿ ಬೇಡಿ ಹಾಕಿಕೊಂಡು ಬಂದು ಉತ್ತರಿಸಲು ಹಾಗೂ ಮೂವರು ಯುವಕರು ಆಸ್ಪತ್ರೆ ಬೆಡ್ ಮೇಲೆ ಹೀಗೆ ಸಾವು- ಬದುಕಿನ ನಡುವೆ ನರಳಾಡುವ ದುಸ್ಥಿತಿ ತಂದಿದ್ದು ಮಾತ್ರ ಈತನಿಗಿದ್ದ ಹಣದ ಮದವಾಗಿದೆ. ಭಾನುವಾರ ಮಧ್ಯರಾತ್ರಿ ಮೈಸೂರಿನ ಸರಸ್ವತಿಪುರಂ ಜಂಕ್ಷನ್ ಕಡೆಯಿಂದ ಟಿ.ಕೆ.ಬಡಾವಣೆಯ ಕಡೆಗೆ ಇಬ್ಬರು ಯುವಕರು ಕಾರಿನಲ್ಲಿ ತೆರಳುತಿದ್ದರು. ಈ ವೇಳೆ ಸಿಗ್ನಲ್ ಬಳಿ ಕಾರು ವೇಗವಾಗಿ ಬಂದು ಮತ್ತೊಂದು ಕಾರಿಗೆ ಗುದ್ದಲು ಮುಂದಾಗಿದೆ. ಇದನ್ನ ಕಂಡ ಯುವಕರು ಪ್ರಶ್ನೆ ಮಾಡಿದ್ದಾರೆ. ಅಷ್ಟಕ್ಕೆ ಕಾರಿನಲ್ಲಿದ್ದವರು ಕ್ಯಾತೆ ತೆಗೆದು ಆ ಯುವಕರ ಹತ್ಯೆಗೆ ಮುಂದಾಗಿದ್ದಾರೆ.
Noida Accident: ಡಿಕ್ಕಿ ಹೊಡೆದು ಮಹಿಳೆಯನ್ನು ರಸ್ತೆ ಮೇಲೆ ಎಳೆದೊಯ್ದ ಐಷಾರಾಮಿ ಕಾರು: ಬಲಿಯಾದ ರಿಸೆಪ್ಷನಿಸ್ಟ್
ಜಗಳ ಬಿಡಿಸಿದವರ ಮೇಲೂ ಹಲ್ಲೆ: ಮೈಸೂರಿನ ಟಿ.ಕೆ. ಬಡಾವಣೆಯಲ್ಲಿ ನಡೆದ ಈ ಘಟನೆ ಅಕ್ಷರಶಃ ಬೆಚ್ಚಿಬೀಳುವಂತೆ ಮಾಡಿದೆ. ಯಾವ ಸಿನಿಮಾದ ಸಾಹಸಮಯ ದೃಶ್ಯಕ್ಕೂ ಕಡಿಮೆ ಇಲ್ಲವೆಂಬಂತೆ ನಡೆದು ಹೋಗಿದೆ. ಕಾರು ಓವರ್ ಟೇಕ್ ಮಾಡಿದ್ದನ್ನ ಮತ್ತೊಂದು ಕಾರಿನಲ್ಲಿದ್ದ ಪ್ರಜ್ವಲ್, ರಾಹುಲ್ ಪ್ರಶ್ನೆ ಮಾಡಿದ್ದಾರೆ. ಇದರಿಂದ ಕುಪಿತರಾದ ವಾಸು ಹಾಗೂ ಅವರ ಪುತ್ರ ದರ್ಶನ್ ಏಕಾಏಕಿ ಕಾರಿನಿಂದ ಕೆಳಗೆ ಇಳಿದು ಯುವಕರ ಮೇಲೆ ಹಲ್ಲೆ ಮಾಡಿದ್ದಾರೆ. ಇದರ ನಡುವೆ ಗಲಾಟೆ ಗಮನಿಸಿದ ಪ್ರಜ್ವಲ್ ಸ್ನೇಹಿತ ಆನಂದ್ ಕೂಡ ಸ್ಥಳಕ್ಕೆ ಬಂದು ಜಗಳ ಬಿಡಿಸುವ ಯತ್ನ ಮಾಡಿದ್ದಾನೆ. ಆದರೆ, ಯಾರ ಮಾತು ಕೇಳದ ಅಪ್ಪ- ಮಗ ಆನಂದನ ಮೇಲೂ ಹಲ್ಲೆ ಮಾಡಿದ್ದಾರೆ. ಇಷ್ಟು ಸಾಲದು ಎಂಬಂತೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಅಷ್ಟರಲ್ಲಿ ಸ್ಥಳದಲ್ಲಿದ್ದ ನಾಗರಿಕರು ಇಬ್ಬರನ್ನೂ ಸಮಾಧಾನಪಡಿಸಿ ಕಾರಿಗೆ ಹತ್ತಿಸಿದ್ದಾರೆ.
ಟೈರ್ ಬಸ್ಟ್: ಬಸ್‌ಸ್ಟ್ಯಾಂಡ್‌ನಲ್ಲಿ ನಿಂತವರಿಗೆ ಗುದ್ದಿದ್ದ ಟ್ರಕ್: ಆರು ಜನರ ಬಲಿ
ಫುಟ್‌ಪಾತ್ ಮೇಲಿದ್ದವರ ಮೇಲೆ ಕಾರು ಹತ್ತಿಸಿದರು:
ಗಲಾಟೆಯಿಂದ ರಸ್ತೆ ಮೇಲೆ ಬಿದಿದ್ದ ಕನ್ನಡಕ ತೆಗೆದುಕೊಳ್ಳಲು ಬಂದ ಪ್ರಜ್ವಲ್ ಮೇಲೆ ಮತ್ತೆ ಗಲಾಟೆ ಮಾಡಲು ಬರುತ್ತಿದ್ದಾನೆಂದು ತಿಳಿದ ದರ್ಶನ್ ಹಾಗೂ ಅವರ ತಂದೆ ವಾಸು ಏಕಾಏಕಿ ಫುಟ್ ಪಾತ್ ಮೇಲೆ ನಿಂತಿದ್ದ ರಾಹುಲ್ ಹಾಗೂ ಆನಂದನ ಮೇಲೆ ಕಾರು ಹರಿಸಿದ್ದಾರೆ. ಇಷ್ಟಕ್ಕೆ ಸುಮ್ಮನಾಗದೆ ಹಿಂದಕ್ಕೆ ಹೋಗಿ ಮತ್ತೊಂದು ಬಾರಿ ಕಾರು ಹತ್ತಿಸಿ ವೇಗವಾಗಿ ಹೊರಟು ಹೋಗಿದ್ದಾರೆ. ಘಟನೆಯಿಂದ ತೀವ್ರ ರಕ್ತಸ್ರಾವದಿಂದ ನರಳಾಡುತ್ತಿದ್ದ ಮೂವರು ಯುವಕರನ್ನ ಸ್ಥಳೀಯರು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ.
ಸದ್ಯ ಮೂವರ ಪೈಕಿ ಪ್ರಜ್ವಲ್ ಸ್ಥಿತಿ ಚಿಂತಾಜನಕವಾಗಿದೆ.ಒಟ್ಟಾರೆ ಪ್ರಕರಣ ನಡೆದು 38 ಗಂಟೆ ಬಳಿಕ ಎಫ್ ಐಆರ್ ದಾಖಲಿಸಿ ಆರೋಪಿಯನ್ನ ವಶಕ್ಕೆ ಪಡೆದಿರುವುದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದ್ದು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ಯುವಕರಿಗೆ ನ್ಯಾಯ ಸಿಗುತ್ತಾ ಕಾದು ನೋಡಬೇಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ