ಮುಸ್ಲಿಂ ಯುವಕನ ಬಂಧನ: ಆಂಧ್ರಕ್ಕೆ ಕರೆದೊಯ್ದು ಮತಾಂತರ, ಅಂಗಡಿಗೆ ಹೋಗೋದಾಗಿ ಯುವತಿ ನಾಪತ್ತೆ, ನೆರೆ ರಾಜ್ಯದಲ್ಲಿ ಇಸ್ಲಾಂಗೆ, ಯುವಕನ ವಿಚಾರಣೆ
ಬೆಂಗಳೂರು(ಅ.14): ಹಿಂದೂ ಯುವತಿಯನ್ನು ಪ್ರೀತಿಸಿ ನೆರೆಯ ರಾಜ್ಯದ ದರ್ಗಾಕ್ಕೆ ಕರೆದೊಯ್ದು ಮತಾಂತರ ಮಾಡಿದ ಆರೋಪದಡಿ ಮುಸ್ಲಿಂ ಯುವಕನೊಬ್ಬನನ್ನು ಯಶವಂತಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಯಶವಂತಪುರ ಬಿ.ಕೆ.ನಗರ ನಿವಾಸಿ ಸೈಯದ್ ಮೋಯಿನ್(23) ಬಂಧಿತ. ಆರೋಪಿಯು ಅ.5ರಂದು ತನ್ನದೇ ಬಡಾವಣೆಯ 18 ವರ್ಷದ ಯುವತಿಯನ್ನು ಆಂಧ್ರಪ್ರದೇಶಕ್ಕೆ ಕರೆದೊಯ್ದು ಮತಾಂತರ ಮಾಡಿದ್ದಾನೆ. ಈ ಸಂಬಂಧ ಯುವತಿಯ ತಾಯಿ ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉತ್ತರಪ್ರದೇಶ ಮೂಲದ ದಂಪತಿ ಕಳೆದ 15 ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ದಂಪತಿಗೆ ಮೂರು ಹೆಣ್ಣು ಹಾಗೂ ಒಂದು ಗಂಡು ಮಗನಿದ್ದಾನೆ. ದಂಪತಿಯ ಮೂರನೇ ಮಗಳು ಎಸ್ಸೆಸ್ಸೆಲ್ಸಿ ವ್ಯಾಸಂಗ ಮಾಡಿದ್ದು, ಮನೆಯಲ್ಲೇ ಇದ್ದಳು. ಈಕೆ ತನ್ನದೇ ಬಡಾವಣೆಯ ಸೈಯದ್ ಮೋಯಿನ್ ಎಂಬಾತನನ್ನು ಪ್ರೀತಿಸುತ್ತಿದ್ದಳು. ಆರು ತಿಂಗಳ ಹಿಂದೆಯಷ್ಟೇ ಈ ವಿಚಾರ ಪೋಷಕರಿಗೆ ಗೊತ್ತಾಗಿತ್ತು. ಈ ವೇಳೆ ಪೋಷಕರು ಯುವತಿಗೆ ಬುದ್ಧಿವಾದ ಹೇಳಿದ್ದರು.
Love Jihad: ಬುರ್ಖಾ ಧರಿಸಲು ನಿರಾಕರಿಸಿದ ರೂಪಾಲಿ, ಪತ್ನಿಯನ್ನು ಕತ್ತು ಸೀಳಿ ಕೊಂದ ಪತಿ!
ಅ.5ರಂದು ಸಂಜೆ 4ಕ್ಕೆ ಅಂಗಡಿಗೆ ಹೋಗಿ ಬರುವುದಾಗಿ ಮನೆಯಿಂದ ಹೊರಹೋಗಿದ್ದ ಯುವತಿ ರಾತ್ರಿಯಾದರೂ ಮನೆಗೆ ವಾಪಸಾಗಿಲ್ಲ. ಈ ವೇಳೆ ಗಾಬರಿಗೊಂಡ ಪೋಷಕರು ಎಲ್ಲೆಡೆ ಹುಡುಕಾಡಿದ್ದು, ಎಲ್ಲಿಯೂ ಪತ್ತೆಯಾಗಿಲ್ಲ. ಪ್ರಿಯಕರ ಸೈಯದ್ ಮೋಯಿನ್ ಜತೆಗೆ ಯುವತಿ ಹೋಗಿರಬಹುದು ಎಂದು ಪೋಷಕರು ಅನುಮಾನಿಸಿದ್ದರು. ಈ ಸಂಬಂಧ ನಾಪತ್ತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು, ಇದೀಗ ಆರೋಪಿ ಸೈಯದ್ ಮೋಯಿನ್‌ನನ್ನು ಬಂಧಿಸಿದ್ದಾರೆ.
ಆರೋಪಿ ಸೈಯದ್ ಮೋಯಿನ್ ಯುವತಿಯನ್ನು ನೆರೆಯ ಆಂಧ್ರಪ್ರದೇಶಕ್ಕೆ ಕರೆದೊಯ್ದು ದರ್ಗಾವೊಂದರಲ್ಲಿ ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಿಸಿದ್ದಾನೆ. ಯುವತಿ ಸ್ವಯಂ ಪ್ರೇರಣೆಯಿಂದ ಮತಾಂತರವಾಗಿದ್ದಾಳೋ ಅಥವಾ ಆರೋಪಿ ಬಲವಂತವಾಗಿ ಮತಾಂತರ ಮಾಡಿಸಿದ್ದಾನೋ ಎನ್ನುವುದು ಮುಂದಿನ ತನಿಖೆಯಲ್ಲಿ ತಿಳಿದು ಬರಲಿದೆ. ಸದ್ಯಕ್ಕೆ ಆರೋಪಿಯನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.