ಕಾಟನ್‌ಪೇಟೆ ಒಂಟಿ ಮಹಿಳೆಯ ಕೊಂದಿದ್ದು ಸಂಬಂಧಿಕ: ಇಬ್ಬರ ಬಂಧನ

Kannadaprabha News   | Kannada Prabha
Published : May 30, 2025, 11:33 AM IST
jail Hand cuff pb

ಸಾರಾಂಶ

ಮೂರು ದಿನಗಳ ಹಿಂದೆ ನಡೆದಿದ್ದ ಬಟ್ಟೆ ವ್ಯಾಪಾರಿ ಪತ್ನಿ ಲತಾ ಕೊಲೆ ಪ್ರಕರಣ ಸಂಬಂಧ ಮೃತಳ ಸೋದರ ಸಂಬಂಧಿ ಸೇರಿದಂತೆ ಇಬ್ಬರನ್ನು ಕಾಟನ್‌ಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು (ಮೇ.30): ಮೂರು ದಿನಗಳ ಹಿಂದೆ ನಡೆದಿದ್ದ ಬಟ್ಟೆ ವ್ಯಾಪಾರಿ ಪತ್ನಿ ಲತಾ ಕೊಲೆ ಪ್ರಕರಣ ಸಂಬಂಧ ಮೃತಳ ಸೋದರ ಸಂಬಂಧಿ ಸೇರಿದಂತೆ ಇಬ್ಬರನ್ನು ಕಾಟನ್‌ಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬೀದರ್ ಜಿಲ್ಲೆ ರಾಘವೇಂದ್ರ ಕಾಲೋನಿಯ ಪುರಂದರ ಹಾಗೂ ಶಿವಪ್ಪ ಬಂಧಿತರಾಗಿದ್ದು, ಆರೋಪಿಗಳಿಂದ ಹಣ ಹಾಗೂ ಚಿನ್ನ ಜಪ್ತಿ ಮಾಡಲಾಗಿದೆ. ಕಳೆದ ಸೋಮವಾರ ಕಾಟನ್‌ಪೇಟೆಯಲ್ಲಿ ಬಟ್ಟೆ ವ್ಯಾಪಾರಿ ಪ್ರಶಾಶ್ ಪತ್ನಿ ಲತಾ ಅವರನ್ನು ಉಸಿರುಗಟ್ಟಿಸಿ ಹತ್ಯೆಗೈದು ಕಿಡಿಗೇಡಿಗಳು ಪರಾರಿಯಾಗಿದ್ದರು. ಈ ಕೃತ್ಯದ ಬಗ್ಗೆ ತನಿಖೆಗಿಳಿದ ಇನ್ಸ್‌ಪೆಕ್ಟರ್ ಯರ್ರಿಸ್ವಾಮಿ ನೇತೃತ್ವ ತಂಡವು, ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಗಳನ್ನು ಸೆರೆ ಹಿಡಿಯುವಲ್ಲಿ ಯಶಸ್ಸು ಕಂಡಿದೆ.

ರೈಸ್‌ ಫುಲ್ಲಿಂಗ್‌ನಲ್ಲಿ ಕಳೆದುಕೊಂಡ ಹಣ: ಹಲವು ವರ್ಷಗಳಿಂದ ಕಾಟನ್‌ಪೇಟೆಯಲ್ಲಿ ಬಟ್ಟೆ ಮಾರಾಟ ಅಂಗಡಿ ಇಟ್ಟಿರುವ ಬೀದರ್ ಜಿಲ್ಲೆಯ ಪ್ರಕಾಶ್ ಅವರು, ಅದೇ ಪ್ರದೇಶದಲ್ಲಿ ತಮ್ಮ ಪತ್ನಿ ಹಾಗೂ ಇಬ್ಬರು ಮಕ್ಕಳ ಜತೆ ನೆಲೆಸಿದ್ದರು. ಪ್ರತಿ ದಿನ ಪತಿ ಮತ್ತು ಮಕ್ಕಳು ತೆರಳಿದ ಬಳಿಕ ಲತಾ ಮನೆಯಲ್ಲಿ ಒಂಟಿಯಾಗಿರುತ್ತಿದ್ದರು. ಅಂತೆಯೇ ಸೋಮವಾರ ಸಹ ಲತಾ ಒಬ್ಬರೇ ಇದ್ದಾಗ ಅವರ ಸಂಬಂಧಿ ಪುರಂದರ ಹಾಗೂ ಆತನ ಸ್ನೇಹಿತ ಶಿವಪ್ಪ ಮನೆಗೆ ಬಂದಿದ್ದಾರೆ. ಈ ಮೊದಲು ಸಹ ಹಲವು ಬಾರಿ ಲತಾ ಮನೆಗೆ ಭೇಟಿ ನೀಡಿದ್ದರಿಂದ ಆತನಿಗೆ ಮನೆ ವಿಳಾಸ ಗೊತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಮನೆಯಲ್ಲಿ ಲತಾ ಅವರನ್ನು ಯಾವುದೇ ಹರಿತ ಆಯುಧ ಬಳಸದೆ ಉಸಿರುಗಟ್ಟಿಸಿ ಕೊಂದಿದ್ದಾರೆ. ಬಳಿಕ ಮನೆಯಲ್ಲಿದ್ದ 100 ಗ್ರಾಂ ಚಿನ್ನಾಭರಣ ಹಾಗೂ 1.5 ಲಕ್ಷ ರು ಹಣ ದೋಚಿ ಪರಾರಿಯಾಗಿದ್ದರು. ಬೀದರ್‌ ನ ಖಾಸಗಿ ಕಂಪನಿಯಲ್ಲಿ ಆರೋಪಿಗಳು ಎಲೆಕ್ಟ್ರಿಶಿಯನ್ ಆಗಿದ್ದರು. ಇತ್ತೀಚಿಗೆ ರೈಸ್‌ಫುಲ್ಲಿಂಗ್‌ನಲ್ಲಿ ಹಣ ಕಳೆದುಕೊಂಡು ಆರ್ಥಿಕ ಸಂಕಷ್ಟಕ್ಕೆ ಪುರಂದರ ಸಿಲುಕಿದ್ದ. ಹೀಗಾಗಿ ತನ್ನ ಸಂಬಂಧಿ ಲತಾ ಮನೆಯಲ್ಲಿ ಹಣ ಹಾಗೂ ಚಿನ್ನ ದೋಚಲು ಗೆಳೆಯನ ಜತೆ ಸೇರಿ ಸಂಚು ರೂಪಿಸಿದ್ದ. ಪೂರ್ವಯೋಜಿತದಂತೆ ಸೋಮವಾರ ಬೆಳಗ್ಗೆ ಬೀದರ್‌ನಿಂದ ಬಂದ ಆರೋಪಿಗಳು, ಹತ್ಯೆ ಕೃತ್ಯ ಎಸಗಿದ ಬಳಿಕ ಮತ್ತೆ ಬಸ್ಸಿನಲ್ಲಿ ಬೀದರ್‌ಗೆ ಮರಳಿದ್ದರು ಎಂದು ಪಶ್ಚಿಮ ವಿಭಾಗದ ಡಿಸಿಪಿ ಎಸ್‌.ಗಿರೀಶ್ ತಿಳಿಸಿದ್ದಾರೆ.

ಮನೆಯಲ್ಲಿ ಆತಿಥ್ಯ ಪಡೆದು ಕೊಲೆ: ಲತಾ ಮನೆಯಲ್ಲಿ ಹಣ ದೋಚುವ ಸಲುವಾಗಿಯೇ ಬೀದರ್‌ನಿಂದ ಭಾನುವಾರ ರಾತ್ರಿ ರೈಲಿನಲ್ಲಿ ಗೆಳೆಯನ ಜತೆ ಪುರಂದರ ಹೊರಟಿದ್ದ. ಬೈಯಪ್ಪನಹಳ್ಳಿ ರೈಲ್ವೆ ನಿಲ್ದಾಣಕ್ಕೆ ಸೋಮವಾರ ಮುಂಜಾನೆ ಬಂದಿಳಿದ ಆತ, ಅಲ್ಲಿಂದ ಮೆಜೆಸ್ಟಿಕ್‌ಗೆ ಬಿಎಂಟಿಸಿ ಬಸ್ಸಿನಲ್ಲಿ ಬಂದಿದ್ದಾನೆ. ಈಗಲೇ ಮನೆಗೆ ಹೋದರೆ ಲತಾ ಪತಿ ಪ್ರಕಾಶ್ ಹಾಗೂ ಮಕ್ಕಳು ಇರುತ್ತಾರೆ ಎಂದು ಮೆಜೆಸ್ಟಿಕ್‌ನಲ್ಲೇ ಕೆಲ ಹೊತ್ತು ಪುರಂದರ ಅಡ್ಡಾಡಿದ್ದ. ಕೊನೆಗೆ 11 ಗಂಟೆಗೆ ಲತಾ ಮನೆಗೆ ಆತ ಹೋಗಿದ್ದಾನೆ. ತಮ್ಮ ಮನೆಗೆ ಅನಿರೀಕ್ಷಿತವಾಗಿ ಬಂದ ಸಂಬಂಧಿಯನ್ನು ನೋಡಿ ಅವರಿಗೆ ಅಚ್ಚರಿಯಾಗಿದೆ. ತರುವಾಯ ಲತಾ ಅವರ ಮನೆಯಲ್ಲಿ ಸ್ನಾನ ಮಾಡಿ ಉಪಾಹಾರ ಸೇವಿಸಿ ಆತ ಹೊರಬಂದಿದ್ದಾನೆ. ಕಾಟನ್‌ಪೇಟೆ ಬಳಿ ಗೆಳೆಯನ ಜತೆ ಮದ್ಯ ಸೇವಿಸಿ ಪುರಂದರ, ಮತ್ತೆ ಮಧ್ಯಾಹ್ನ ಲತಾ ಮನೆಗೆ ಮರಳಿದ್ದಾರೆ. ಆ ವೇಳೆ ಆಕೆಯನ್ನು ಹತ್ಯೆಗೈದು ಹಣ ಮತ್ತು ಚಿನ್ನ ದೋಚಿದ ಆರೋಪಿಗಳು, ಮೆಜೆಸ್ಟಿಕ್‌ಗೆ ಬಂದು ತುಮಕೂರು ಬಸ್ ಹತ್ತಿದ್ದಾರೆ. ಅಲ್ಲಿಂದ ಕಲಬುರಗಿಗೆ ಹಂತಕರು ಬೀದರ್ ತಲುಪಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಮಗಳ ಮದುವೆ ಸಿದ್ದತೆ ತಿಳಿದು ಹತ್ಯೆ ಸ್ಕೆಚ್‌: ಮಗಳ ಮದುವೆಗೆ ಲತಾ ದಂಪತಿ ಸಿದ್ಧತೆ ನಡೆಸಿದ್ದರು. ಈ ಸಂಗತಿ ತಿಳಿದು ಸಂಬಂಧಿ ಮನೆಯಲ್ಲಿ ಪುರಂದರ ಕಳ್ಳತನಕ್ಕೆ ಸಂಚು ರೂಪಿಸಿದ್ದ. ರೈಸ್‌ಫುಲ್ಲಿಂಗ್ ದಂಧೆ ಹಾಗೂ ಜೂಜಾಟದಲ್ಲಿ ಆತ 15 ಲಕ್ಷ ರು ಸಾಲ ಮಾಡಿಕೊಂಡಿದ್ದ ಎನ್ನಲಾಗಿದೆ.

ಅಕ್ಕ ಕೊಲೆಯಾಗಿದೆ ಅಂತ ಪತ್ನಿ ಹೇಳಿದ್ಲು: ಲತಾ ಹತ್ಯೆ ಬಳಿಕ ಬೀದರ್‌ಗೆ ಮರಳಿ ಮನೆಯಲ್ಲಿ ಸಹಜವಾಗಿ ಪುರಂದರ ನಡೆದುಕೊಂಡಿದ್ದ. ಆಗ ಆತನಿಗೆ ತನ್ನ ಅಕ್ಕ ಲತಾ ಅವರ ಕೊಲೆಯಾಗಿದೆ ಎಂದು ಪುರಂದರನಿಗೆ ಆತನ ಪತ್ನಿ ಹೇಳಿದ್ದರು. ಈ ಮಾತಿಗೆ ಆತ ಯಾವುದೇ ಆತಂಕ ತೋರಿಸದೆ ಸಹಜವಾಗಿ ಪ್ರತಿಕ್ರಿಯಿಸಿದ್ದ. ಹೀಗಾಗಿ ಕೊಲೆಯಲ್ಲಿ ಪುರಂದರನ ಕೈವಾಡ ಬಗ್ಗೆ ಆತನ ಕುಟುಂಬದವರು ಗೊತ್ತಿರಲಿಲ್ಲ. ಆದರೆ ಪೊಲೀಸರು ಮನೆಗೆ ಬಾಗಿಲು ಬಡಿದಾಗಲೇ ಆತನ ಕ್ರೂರತನ ಬಯಲಾಗಿದೆ ಎನ್ನಲಾಗಿದೆ.

ಮೊಬೈಲ್ ರಿಜಾರ್ಜ್‌ ಮಾಡಿಸದೆ ತಪ್ಪು: ಲತಾ ಅವರ ಮೊಬೈಲ್ ಸಿಮ್‌ ನೆಟ್ ಪ್ಯಾಕ್ ಖಾಲಿಯಾಗಿತ್ತು. ಹೀಗಾಗಿ ಅವರ ಮೊಬೈಲ್‌ಗೆ ಒಳ ಕರೆಗಳು ಬರುತ್ತಿದ್ದವೇ ವಿನಃ ಹೊರ ಕರೆಗಳನ್ನು ಮಾಡಲು ಸಾಧ್ಯವಾಗಿಲ್ಲ. ಒಂದು ಮೊಬೈಲ್‌ ರಿಜಾರ್ಜ್ ಮಾಡಿಸಿದ್ದರೆ ಮನೆಗೆ ಬಂದ ಪುರಂದರನ ಬಗ್ಗೆ ಪತಿ ಪ್ರಕಾಶ್‌ಗೆ ಲತಾ ತಿಳಿಸುತ್ತಿದ್ದರು. ಆಗ ಮೃತರ ಮನೆಗೆ ಪತಿ ಬಂದಿದ್ದರೆ ಕೊಲೆ ತಪ್ಪುತ್ತಿತ್ತು. ಒಂದು ವೇಳೆ ಹತ್ಯೆ ನಡೆದಿದ್ದರೂ ಪುರಂದರನ ಬಗ್ಗೆ ತಕ್ಷಣ‍ವೇ ಮಾಹಿತಿ ಸಿಗುತ್ತಿತ್ತು ಎಂದು ಪೊಲೀಸರು ಹೇಳಿದ್ದಾರೆ.

ಸಿಸಿಟಿವಿ ಕ್ಯಾಮೆರಾ ನೀಡಿದ ಸುಳಿವು: ಮೃತರ ಮನೆಗೆ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಪರಿಶೀಲಿಸಿದಾಗ ಇಬ್ಬರ ಮೇಲೆ ಶಂಕೆ ಮೂಡಿದೆ. ತಕ್ಷಣವೇ ಜಾಗೃತರಾದ ಪೊಲೀಸರು, ಆ ಇಬ್ಬರ ಬೆನ್ನತ್ತಿದ್ದಾಗ ಕೊಲೆ ಜಾಡು ಸಿಕ್ಕಿದೆ ಎಂದು ಮೂಲಗಳು ಹೇಳಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಂಗಳೂರು ಅಪಾರ್ಟ್‌ಮೆಂಟ್‌ನ 16 ಕುಟುಂಬಗಳಿಗೆ ರೌಡಿಸಂ ದರ್ಶನ; ಮಾಟ-ಮಂತ್ರ ಮಾಡಿಸಿ ಕಿರುಕುಳ!
ಕೆಲಸ ಇಲ್ಲದ ಗಂಡನಿಗೆ ಪತ್ನಿ ಶೀಲದ ಮೇಲೆ ಶಂಕೆ: ನಿದ್ರೆಯಲ್ಲಿದ್ದ ಮಗಳ ಕತ್ತು ಸೀಳಿದ ಪತಿ