
ಬೆಂಗಳೂರು (ಮೇ.30): ರಿಸರ್ವ್ ಬ್ಯಾಂಕ್‌ನಿಂದ ತಿರಸ್ಕೃತಗೊಂಡ 50 ಲಕ್ಷ ರು. ನೋಟನ್ನು ಕಡಿಮೆ ಬೆಲೆಗೆ ಕೊಡಿಸುವುದಾಗಿ ನಂಬಿಸಿ ನಿವೃತ್ತ ಬ್ಯಾಂಕ್ ಉದ್ಯೋಗಿಯೊಬ್ಬರ ಹಣ ಸುಲಿಗೆ ಮಾಡಿದ್ದ ಕಾನ್‌ಸ್ಟೇಬಲ್ ಹಾಗೂ ಆತನ ಸಹಚರರನ್ನು ಪೀಣ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ. ಚಿತ್ರದುರ್ಗ ಜಿಲ್ಲೆ ಹಿರಿಯೂರು ಠಾಣೆಯ ಹೆಡ್ ಕಾನ್‌ಸ್ಟೇಬಲ್ ನಾಗರಾಜ್, ಆತನ ಸಹಚರರಾದ ಚಿತ್ರದುರ್ಗದ ಕಿರಣ್ ಕುಮಾರ್, ಗಜೇಂದ್ರ ಹಾಗೂ ಪ್ರಭು ಬಂಧಿತರಾಗಿದ್ದು, ಆರೋಪಿಗಳಿಂದ ಹಣ ಜಪ್ತಿ ಮಾಡಲಾಗಿದೆ.
ಕೆಲ ದಿನಗಳ ಹಿಂದೆ ಎಚ್‌ಎಂಟಿ ಲೇಔಟ್‌ನಲ್ಲಿ ನೆಲೆಸಿರುವ ನಿವೃತ್ತ ಬ್ಯಾಂಕ್ ಉದ್ಯೋಗಿ ರಾಧಾಕೃಷ್ಣ ನಾಯಕ್ ಅವರಿಂದ 15 ಲಕ್ಷ ರು. ಹಣ ಪಡೆದು ಆರೋಪಿಗಳು ವಂಚಿಸಿದ್ದರು. ಈ ಬಗ್ಗೆ ಸಂತ್ರಸ್ತರು ನೀಡಿದ ದೂರಿನ ಮೇರೆಗೆ ಹಿರಿಯೂರು ಗ್ಯಾಂಗ್ ಸಿಕ್ಕಿಬಿದ್ದಿದೆ.
15 ಲಕ್ಷ ರು.ಗೆ 50 ಲಕ್ಷ ನೋಟು: ಎಚ್‌ಎಂಟಿ ಲೇಔಟ್‌ನಲ್ಲಿ ಆರೋಪಿ ಕಿರಣ್ ಸಹೋದರಿ ಮನೆ ಸಮೀಪದಲ್ಲೇ ರಾಧಾಕೃಷ್ಣ ನೆಲೆಸಿದ್ದರು. ತನ್ನ ಸೋದರಿ ಮನೆಗೆ ಬಂದಾಗ ಆತನಿಗೆ ರಾಧಾಕೃಷ್ಣ ಪರಿಚಯವಾಗಿದ್ದು, ಬಹಳ ದಿನಗಳಿಂದ ಪರಸ್ಪರ ಆತ್ಮೀಯ ಒಡನಾಟ ಬೆಳೆದಿತ್ತು. ಆಗ ರಾಧಾಕೃಷ್ಣ ಅವರಿಗೆ ನಮ್ಮ ಬಳಿ ಆರ್‌ಬಿಐ ತಿರಸ್ಕೃತಗೊಂಡ 50 ಲಕ್ಷ ರು ಮೌಲ್ಯದ ನೋಟುಗಳಿವೆ. ನೀವು 5 ಲಕ್ಷ ನೀಡಿದರೆ 10 ಲಕ್ಷ ಕೊಡುತ್ತೇವೆ. ಅದೇ ರೀತಿ 15 ಲಕ್ಷ ನೀಡಿದರೆ 50 ಲಕ್ಷವನ್ನು ನಿಮಗೆ ಕೊಡುತ್ತೇವೆ ಎಂದು ಕಿರಣ್ ಆಫರ್ ಕೊಟ್ಟಿದ್ದ. ಸುಲಭವಾಗಿ ಹಣ ಸಿಗುತ್ತದೆ ಎಂದು ದುರಾಸೆಗೆ ಬಿದ್ದ ರಾಧಾಕೃಷ್ಣ ಅವರಿಂದ ಹಂತ ಹಂತವಾಗಿ 15 ಲಕ್ಷ ರು ಅನ್ನು ಆರೋಪಿಗಳು ವಸೂಲಿ ಮಾಡಿದ್ದರು.
ಆದರೆ ಆರ್‌ಬಿಐನ ಹಣ ಕೊಡದೆ ಏನೇನೋ ಸಬೂಬು ಹೇಳುತ್ತಿದ್ದರು. ಅಲ್ಲದೆ ಇದೇ ವಿಚಾರವಾಗಿ ಹಿರಿಯೂರು, ಮೈಸೂರು ಹಾಗೂ ಬೆಂಗಳೂರಿನಲ್ಲಿ ಕಿರಣ್ ಜತೆ ದೂರುದಾರರ ಭೇಟಿಯಾಗಿತ್ತು. ಹಣ ಕೊಡದೆ ಹೋದರೆ ಪೊಲೀಸರಿಗೆ ದೂರು ಕೊಡುವುದಾಗಿ ರಾಧಾಕೃಷ್ಣ ಬೆದರಿಸಿದ್ದರು. ಆಗ ಆತಂಕಗೊಂಡ ಕಿರಣ್ ತಂಡವು, ತಮ್ಮ ಪರಿಚಿತ ಹಿರಿಯೂರಿನ ಹೆಡ್ ಕಾನ್‌ಸ್ಟೇಬಲ್ ನಾಗರಾಜ್ ಮೂಲಕ ಡೀಲ್ ನಡೆಸಲು ಮುಂದಾದರು.
ಅಂತೆಯೇ ರಾಧಾಕೃಷ್ಣ ಅವರಿಗೆ ಕರೆ ಮಾಡಿದ ನಾಗರಾಜ್, ಅಕ್ರಮವಾಗಿ ಆರ್‌ಬಿಐನಿಂದ ತಿರಸ್ಕೃತಗೊಂಡ ಹಣ ತೆಗೆದುಕೊಂಡು ಬರುವಾಗ ಹಿರಿಯೂರಿನಲ್ಲಿ ಕಿರಣ್ ನನ್ನು ವಶಕ್ಕೆ ಪಡೆದಿದ್ದೇವೆ ಎಂದಿದ್ದ. ಈ ಕರೆಯಿಂದ ಆತಂಕಗೊಂಡ ರಾಧಾಕೃಷ್ಣ ಅವರು, ಕೂಡಲೇ ಪೀಣ್ಯ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ಬಳಿಕ ಇನ್ಸ್‌ಪೆಕ್ಟರ್ ಅನಿಲ್ ಕುಮಾರ್ ನೇತೃತ್ವದ ತಂಡವು ತನಿಖೆಗಿಳಿದಾಗ ಹಿರಿಯೂರು ಗ್ಯಾಂಗ್ ನಿಜ ಬಣ್ಣ ಬಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತಿರಸ್ಕೃತ ನೋಟುಗಳಿಲ್ಲ: ಮುದ್ರಣ ವೇಳೆ ಲೋಪವಾದರೆ ಯಾವುದೇ ನೋಟುಗಳನ್ನು ಆರ್‌ಬಿಐ ಹೊರಗೆ ಕೊಡುವುದಿಲ್ಲ. ಆದರೆ ಮುದ್ರಣ ದೋಷದ ನೋಟುಗಳಿವೆ ಎಂದು ಹೇಳಿ ಜನರಿಗೆ ಕಿರಣ್ ಗ್ಯಾಂಗ್ ಟೋಪಿ ಹಾಕಿ ಹಣ ಸುಲಿಗೆಗೆ ಯತ್ನಿಸಿತ್ತು ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ