* ಮಕ್ಕಳಿದ್ದು ಅತಂತ್ರಳಾದ ತಾಯಿ
* ಸ್ವಂತ ಮಕ್ಕಳಿಂದಲೇ ಆಸ್ತಿಯನ್ನ ಮೋಸದಿಂದ ವಂಚಿಸಿದ ಆರೋಪ
* ನ್ಯಾಯಕ್ಕಾಗಿ ಕಣ್ಣೀರಿಟ್ಟ ವೃದ್ಧೆ ನಮವ್ವ
ವರದಿ:-ಮಲ್ಲಿಕಾರ್ಜುನ ಹೊಸಮನಿ
ಬಾಗಲಕೋಟೆ, (ಜೂನ್.11): ವೃದ್ದ ಜೀವ, ಪತಿ ತೀರಿಹೋದ ಬಳಿಕ ಇದ್ದ ಮಕ್ಕಳೂ ಸಹ ನೋಡದೇ ಒಬ್ಬಂಟಿಯಾದವಳು, ಅತ್ತ ಹೆತ್ತ ಮಕ್ಕಳಿಗೆ ಜಮೀನು ಪಾಲು ಮಾಡಿ ಕೊಟ್ಟಿದ್ದರೂ ಸಹ ತನ್ನ ಪತಿಯ ಹೆಸರಿನಲ್ಲಿದ್ದ 4 ಎಕರೆ ಜಮೀನನ್ನೂ ಸಹ ಮಗ ಗಂಗಪ್ಪ ಮೋಸದಿಂದ ಕಬಳಿಸಿದ್ದಾನಂತೆ. ಇದರಿಂದ ನೊಂದು ಅತಂತ್ರವಾಗಿರೋ ವೃದ್ಧೆ ತಾಯಿ ಹನಮವ್ವ ಕಣ್ಣೀರು ಹಾಕುತ್ತಾ ಇದೀಗ ಬಾಗಲಕೋಟೆ ಜಿಲ್ಲಾ ಎಸ್ಪಿ ಕಚೇರಿಗೆ ನ್ಯಾಯ ನೀಡುವಂತೆ ಮೊರೆ ಹೋಗಿದ್ದಾಳೆ.
ಆಕೆಯದ್ದು ಅತ್ಯಂತ ದಯನೀಯ ಪರಿಸ್ಥಿತಿ, ಯಾಕೆಂದರೆ ತನ್ನ ಪತಿಯ ಹೆಸರಿನಲ್ಲಿದ್ದ 4 ಎಕರೆ ಜಮೀನನ್ನ ತನಗೆ ಬರೆಯಿಸಿಕೊಂಡಿರೋ ಮಗ ಒಂದೆಡೆಯಾದರೆ, ಇತ್ತ ಭೋಗ್ಯಕ್ಕೆ ಜಮೀನು ಇಲ್ಲದೆ ಬದುಕು ಅತಂತ್ರವಾಗಿ ಅಲೆದಾಡಬೇಕಾದ ದುಸ್ಥಿತಿ ಮತ್ತೊಂದೆಡೆ, ಇವುಗಳ ಮಧ್ಯೆ ನಮ್ಮ ತಾಯಿಗೆ ನ್ಯಾಯ ಕೊಡಿಸಿ ಅಂತಿರೋ ಅಜ್ಜಿ ಹೆತ್ತಿರುವ ಹೆಣ್ಣು ಮಕ್ಕಳು. ಅಂದಹಾಗೆ ಇಂತಹವೊಂದು ಅತಂತ್ರ ಪರಿಸ್ಥಿತಿಯಲ್ಲಿ ಇರುವ ಅಜ್ಜಿಯ ಹೆಸರು ಹನಮವ್ವ ಯಲಗುರದಪ್ಪ ತಳವಾರ. ಈಕೆಯದ್ದು ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಕುಂದರಗಿ ಗ್ರಾಮ.
undefined
ಬಾಗಲಕೋಟೆ: ಪತ್ನಿ, ಅಮ್ಮನಿಗೆ 1.60 ಕೋಟಿ ವರ್ಗಾಯಿಸಿದ ಎಸ್‌ಬಿಐ ಕ್ಯಾಶಿಯರ್..!
80 ವರ್ಷದ ಈ ಅಜ್ಜಿಗೆ 4 ಜನ ಗಂಡು ಮಕ್ಕಳಿದ್ದು, 3 ಜನ ಹೆಣ್ಣು ಮಕ್ಕಳಿದ್ದಾರೆ. ಅವರ ಪೈಕಿ ಮೂರು ಜನ ಹೆಣ್ಣು ಮಕ್ಕಳ ಮದುವೆ ಮಾಡಿಕೊಡಲಾಗಿದೆ. ಇತ್ತ 4 ಜನ ಗಂಡು ಮಕ್ಕಳಿಗೂ ಸಹ ಆಕೆಯ ಗಂಡ ಯಲಗುರ್ದಪ್ಪ ಬದುಕಿರುವಾಗಲೇ ಇದ್ದ ಜಮೀನಿನಲ್ಲಿ ಸಮನಾಗಿ ಆಸ್ತಿ ಪಾಲು ಮಾಡಿಕೊಟ್ಟಿದ್ದರು, ಕೊನೆಗೆ ಉಳಿದ 4 ಎಕರೆ 35 ಗುಂಟೆ ಜಮೀನನ್ನ ಅಜ್ಜಿಯ ಪತಿ ಯಲಗುರ್ದಪ್ಪನ ಹೆಸರಿನಲ್ಲಿತ್ತು. ಆದರೆ ಅಜ್ಜಿ ಹನಮವ್ವ ಅನಾರೋಗ್ಯಕ್ಕಿರುವಾಗ ಆಸ್ಪತ್ರೆಯ ನೆಪ ಹೇಳಿ ಸಹಿ ಹಾಕಿಸಿಕೊಂಡು ಅಜ್ಜಿಯ ಗಂಡ ಅಂದರೆ ತನ್ನ ತಂದೆಯ ಹೆಸರಿನಲ್ಲಿದ್ದ 4 ಎಕರೆ 35 ಗುಂಟೆ ಜಮೀನನ್ನ ಸಹ ಮಗ ಗಂಗಪ್ಪ ಮೋಸತನದಿಂದ ತನ್ನ ಮಗನ ಹೆಸರಿಗೆ ಬರೆಯಿಸಿಕೊಂಡಿದ್ದಾನಂತೆ. ಇದರಿಂದ ಮುಪ್ಪಿನ ಕಾಲದಲ್ಲಿ ಅಜ್ಜಿ ತನಗಾಗಿ ಇಟ್ಟಿದ್ದ ಆಸ್ತಿಯೂ ಸಿಗದೇ ಅತಂತ್ರವಾಗಿ ಅಲೆದಾಡುವಂತಹ ಪರಿಸ್ಥಿತಿ ಎದುರಾಗಿದ್ದು, ನ್ಯಾಯ ಕೊಡಿಸಿ ಅಂತ ಗೋಗರೆಯುತ್ತಿದ್ದಾಳೆ.
ಕಣ್ಣೀರಿಡುತ್ತಿರುವ ವೃದ್ಧ ಜೀವ
ವಯಸ್ಸು 80 ಆಗಿದ್ದರಿಂದ ತಾನೇ ಹೆತ್ತ 4 ಜನ ಗಂಡು ಮಕ್ಕಳಿದ್ದರೂ ಯಾರೂ ಸಹ ಇವಳನ್ನ ಜೋಪಾನ ಮಾಡ್ತಿಲ್ಲ. ಇವುಗಳ ಮಧ್ಯೆ ತನ್ನ ಗಂಡ ಯಲಗುರ್ದಪ್ಪನಿಂದ ತನಗೆ ಬರಬೇಕಾದ ಆಸ್ತಿಯನ್ನು ಸಹ ಮಗ ಗಂಗಪ್ಪ ಮೋಸದಿಂದ ಪಡೆದುಕೊಂಡಿದ್ದ. ಇವುಗಳ ಮಧ್ಯೆ ಕಿರಿಕಿರಿಯೂ ಸಹ ಈ ವೃದ್ಧ ಜೀವವನ್ನ ಮತ್ತಷ್ಟು ಅತಂತ್ರವಾಗುವಂತೆ ಮಾಡಿದೆ. ಯಾರೇ ತನ್ನನ್ನು ಭೇಟಿಯಾದ್ರೂ ಸಹ ತನ್ನ ಗೋಳನ್ನು ಹೇಳಿಕೊಂಡು ಅಜ್ಜಿ ಹನಮವ್ವ ಕಣ್ಣೀರಿಡುತ್ತಿದ್ದಾಳೆ. ಪತಿ ಇರುವಾಗಲೇ ಎಲ್ಲಾ ಮಕ್ಕಳಿಗೂ ಆಸ್ತಿ ಭಾಗ ಸಮನಾಗಿ ಹಂಚಿಕೆ ಮಾಡಿದ್ದರೂ ಕೊನೆಗಾಲದಲ್ಲಿ ಮಗ ಗಂಗಪ್ಪ ತನ್ನ ಆಸ್ತಿ ಮೋಸದಿಂದ ಪಡೆದುಕೊಂಡನಲ್ಲ ಎಂಬ ನೋವು ಈ ವೃದ್ಧೆಯನ್ನ ಬಾಧಿಸುತ್ತಿದೆ. ಹೀಗಾಗಿ ಸದಾ ನ್ಯಾಯಕ್ಕಾಗಿ ಗೋಗರೆದು ಕಣ್ಣೀರಿಡುತ್ತಿದ್ದಾಳೆ ಅಜ್ಜಿ ಹನಮವ್ವ.
ಸದ್ಯ ಮಗಳ ಬಳಿ ಆಶ್ರಯ..
ಇನ್ನು ನ್ಯಾಯದ ಪ್ರಕಾರ ಮಕ್ಕಳಿಗೆ ಆಸ್ತಿ ಹಂಚಿಕೆ ಮಾಡಿ ಉಳಿದ 4 ಎಕರೆ 35 ಗುಂಟೆ ಜಮೀನನ್ನ ಪತಿ ಯಲಗುರ್ದಪ್ಪ ತನ್ನ ಹೆಸರಿನಲ್ಲಿ ಉಳಿಸಿಕೊಂಡಿದ್ದ, ಆತನ ಮೃತ ನಂತರ ಪತ್ನಿ ಹನಮವ್ವಗೆ ಅದು ಸೇರಬೇಕಿತ್ತು. ಆದರೆ ಈಗ ಮಗ ಗಂಗಪ್ಪನ ಕರಾಮತ್ನಿಂದ ಇದ್ದೊಂದು ಆಸ್ತಿ ಸಹ ಈಗ ಇಲ್ಲದಿರುವುದು ಅಜ್ಜಿ ಹನಮವ್ವಳನ್ನ ಮತ್ತಷ್ಟು ಚಿಂತೆಗೀಡು ಮಾಡಿದೆ. ಆಸ್ತಿ ಇದ್ದಲ್ಲಿ ಕೊನೆಗಾಲದಲ್ಲಿ ತನ್ನನ್ನ ನೋಡಿಕೊಳ್ಳುವವರಿಗೆ ಆಸ್ತಿ ನೀಡಬೇಕು ಅನ್ನೋ ಆಸೆಯಲ್ಲಿದ್ದ ಅಜ್ಜಿಗೆ ಈಗ ಅತಂತ್ರಭಾವ ಕಾಡುತ್ತಿದ್ದು, ಮುಪ್ಪಿನ ಜೀವನದಲ್ಲಿ ತನ್ನನ್ನ ಯಾರು ನೋಡಿಕೊಳ್ತಾರೆ ಅನ್ನೋ ಆತಂಕದಲ್ಲಿದ್ದಾಳೆ. ಈಗ ಗಂಡು ಮಕ್ಕಳು ನೋಡಿಕೊಳ್ಳದೇ ಇರೋದರಿಂದ ನೇರವಾಗಿ ಅಜ್ಜಿ ತನ್ನ ಮಗಳಾದ ಶಂಕ್ರವ್ವಳ ಬಳಿ ಇದ್ದು, ಈ ಮಧ್ಯೆ ಬಾಗಲಕೋಟೆ ಜಿಲ್ಲಾ ಪೋಲಿಸ ವರಿಷ್ಠಾಧಿಕಾರಿಗಳ ಕಚೇರಿಯ ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರಕ್ಕೆ ದೂರು ನೀಡಿದ್ದು, ನ್ಯಾಯ ಕೊಡಿಸಿ ಅಂತ ಅಜ್ಜಿ ಅಂಗಲಾಚಿದ್ದಾಳೆ, ಈ ನಡುವೆ ತನ್ನತಾಯಿ ಮುಪ್ಪಾವಸ್ಥೆಯಲ್ಲಿದ್ದು, ಆಕೆಗೆ ನ್ಯಾಯ ಕೊಡಿಸಿ ಅಂತ ಮಗಳು ಶಂಕ್ರವ್ವ ಮನವಿ ಮಾಡಿದ್ದಾಳೆ.
ಒಟ್ಟಿನಲ್ಲಿ ಮಕ್ಕಳಿಲ್ಲದವರು ಕೊನೆಗಾಲದಲ್ಲಿ ಬದುಕೋದು ಹೇಗೆ ಅನ್ನೋ ಚಿಂತೆಯಲ್ಲಿರುವಾಗ ಇಲ್ಲೊಬ್ಬ ಅಜ್ಜಿ ತಾನೇ ಹೆತ್ತ 4 ಜನ ಗಂಡು ಮಕ್ಕಳಿದ್ದರೂ ಸಹ ಇಂದು ತನ್ನವರಿಂದಲೇ ಮೋಸ ಹೋಗಿದ್ದು, ನ್ಯಾಯಕ್ಕಾಗಿ ಅಲೆದಾಡುತ್ತಿದ್ದಾಳೆ, ಆಕೆಗೆ ಆದಷ್ಟು ಬೇಗ ನ್ಯಾಯ ಸಿಕ್ಕು, ಮುಪ್ಪಾವಸ್ಥೆಯಲ್ಲಿ ನೆಮ್ಮದಿಯ ಬದುಕು ಕಳಿಯುವಂತಾಗಲಿ ಅನ್ನೋದೆ ನಮ್ಮಯ ಆಶಯ..