
ಬೆಂಗಳೂರು(ಸೆ.14): ಮಗನನ್ನು ಕೊಂದು ತಾಯಿಯೂ ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಹೊಸಗುಡ್ಡದ ಹಳ್ಳಿಯಲ್ಲಿ ಇಂದು(ಬುಧವಾರ) ನಡೆದಿದೆ
13 ವರ್ಷದ ಮಗ ಮದನ್‌ಗೆ ನೇಣು ಬಿಗಿದ ಬಳಿಕ ತಾಯಿಯೂ ಆತ್ಮಹತ್ಯೆಗೆ ಶರಣಾಗಿದ್ದಾರೆ. 68 ವರ್ಷದ ತಾಯಿ ಲಕ್ಷ್ಮಮ್ಮ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಯಾಗಿದ್ದಾರೆ. ಘಟನಾ ಸ್ಥಳಕ್ಕೆ ಬ್ಯಾಟರಾಯನಪುರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ.
ಬೆಳಗಾವಿ: ಹೆಸ್ಕಾಂ ಗುತ್ತಿಗೆ ನೌಕರ ನೇಣಿಗೆ ಶರಣು: ಅಧಿಕಾರಿಗಳ ಕಿರುಕುಳವೇ ಕಾರಣ?
ಡೆತ್ ವಿಡಿಯೋದಲ್ಲಿ ಏನಿದೆ?
ಲಕ್ಷ್ಮಮ್ಮ ಅವರು ಆತ್ಮಹತ್ಯೆ ಮಾಡಿಕೊಳ್ಳೋ ಮುನ್ನ ಡೆತ್ ವಿಡಿಯೋ ಮಾಡಿದ್ದಾರೆ. ಸಿದ್ದೇಗೌಡ ನನ್ನ ತಮ್ಮ ಆತ ಸ್ವಲ್ಪ ಪೆದ್ದು ಆಗಿದ್ದ, ಹೀಗಾಗಿ ರಂಜಿತಾಳನ್ನ ಮದ್ವೆ ಮಾಡಿಸ್ಕೊಟ್ಟಿದ್ದೆವು. ಮದ್ವೆ ಟೈಮಲ್ಲಿ 50 ಸಾವಿರ ರೂ. ನದದು, ಚೈನು ಕೊಟ್ಟು ಮದ್ವೆ ಮಾಡಿಸಿಕೊಟ್ಟಿದ್ದೆ, ಆದ್ರೆ ಸಿದ್ದೇಗೌಡ ಮತ್ತು ರಂಜಿತ ದಂಪತಿ ನಡುವೆ ಗಲಾಟೆ ನಡೀತಿತ್ತು. ಈ ಸಂಬಂಧ ರಂಜಿತ ಕೆರಗೂಡು ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಿದ್ದರು. ಗಂಡ ಸಿದ್ದೇಗೌಡ, ಲಕ್ಷ್ಮಮ್ಮ, ಪತಿ ಶಿವಲಿಂಗೇಗೌಡ ಸೇರಿದಂತೆ 9 ಜನರ ಮೇಲೆ ಕೇಸ್ ದಾಖಲಾಗಿತ್ತು. ಪೊಲೀಸರು, ಕೋರ್ಟ್ ಅಂತ ಕಿರುಕುಳ ನೀಡ್ತಿದ್ರು, ಇದರಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಲಕ್ಷ್ಮಮ್ಮ ಹೇಳಿದ್ದಾರೆ.
ನನ್ನ ತಮ್ಮನಿಗೋಸ್ಕರ ನಾನು ಸಾಯ್ತಿದಿನಿ
ನಾನು ಸಾಯ್ತಿರೋದು ಸವಿತಾ, ಶಿವಣ್ಣ , ಲಕ್ಷ್ಮಿ, ಪುಟ್ಟ, ಸಿದ್ದರಾಜ ಶಿವಲಿಂಗಿ, ಶಂಕರ ಹಾಗೂ ಸಿದ್ದರಾಮ ಅವರಿಂದ. ನನ್ನ ಗಂಡ, ನನ್ನ ತಮ್ಮ ನನ್ನ ಮಗ ನನ್ನ ಮಣ್ಣು ಮಾಡ್ಬೇಕು, ರಂಜಿತಾಳನ್ನ ತಂದು ತಪ್ಪು ಮಾಡ್ದೆ ಅಂತ ಮೃತ ಲಕ್ಷ್ಮಮ್ಮ ಡೆತ್ ವಿಡಿಯೋದಲ್ಲಿ ಹೇಳಿದ್ದಾರೆ.
ಲಕ್ಷ್ಮಮ್ಮನವರ ಸಹೋದರ ಸಿದ್ದೇಗೌಡ ಎಂಬಾತ ಸ್ವಲ್ಪ ಮನೋ ವೈಕಲ್ಯ ಹೊಂದಿದ್ದವನು. ಸಹೋದರನ್ನ ಅತಿಯಾಗಿ ಪ್ರೀತಿಸುತ್ತಿದ್ದ ಲಕ್ಷ್ಮಮ್ಮ ತನಗೆ ಮದುವೆಯಾದ ಮೇಲೂ ತಮ್ಮ ಸಿದ್ದೇಗೌಡನನ್ನ ಜೊತೆಯಲ್ಲೇ ಇಟ್ಟುಕೊಂಡು ಸಾಕುತ್ತಿದ್ದಳು. ನಂತರ ಅವನ ಜೀವನ ಚೆನ್ನಾಗಿರಲೆಂದು ರಂಜಿತಾ ಎಂಬಾಕೆಯೊಂದಿಗೆ ಮದ್ವೆ ಮಾಡಿಸಿದ್ರು. ಎಲ್ಲ ಚೆನ್ನಾಗಿದ್ದ ಕುಟುಂಬದಲ್ಲಿ ಸಮಸ್ಯೆ ಶರುವಾಗಿದ್ದೆ ಅಲ್ಲಿ. ಸಾವಿನ ಮುಂಚೆ ಲಕ್ಷ್ಮಮ್ಮ ಅವರು ಮಾಡಿರುವ ಡೆತ್ ವಿಡಿಯೋದಲ್ಲಿ ರಂಜಿತಾಳನ್ನ ತಮ್ಮ ಸಿದ್ದೇಗೌಡನಿಗೆ ಮದ್ವೆ ಮಾಡಿಸಿ ತಪ್ಪು ಮಾಡಿದ್ದೆನೆಂದು ಹೇಳಿಕೊಂಡಿದ್ದಾರೆ. ಅಷ್ಟೆ ಅಲ್ಲದೆ ಮದ್ವೆ ಸಂಧರ್ಭದಲ್ಲಿ ರಂಜಿತಾ ಪೋಷಕರು ಐವತ್ತು ಸಾವಿರ ಹಣ ಒಂದು ಸರ ಹಾಗೂ ಮದ್ವೆಯನ್ನ ದೇವಸ್ಥಾನದಲ್ಲಿ ಮಾಡಿಸಿಕೊಟ್ಟಿರೋದು ಬಿಟ್ಟರೆ ನಾವು ಅವರನ್ನ ಏನೂ ಕೇಳಿರಲಿಲ್ಲ. ಆದರೂ ವರದಕ್ಷಿಣೆ ಕೇಸ್ ಹಾಕಿಸಿ ತನ್ನ ಅಮಾಯಕ ತಮ್ಮನನ್ನ ಜೈಲಿಗಟ್ಟಿದ್ದಾರೆಂದು ದುಖಃ ತೋಡಿಕೊಂಡಿದ್ದಾರೆ.
ರಂಜಿತಾ ಹಾಗೂ ಸಿದ್ದೇಗೌಡನಿಗೆ ಮದುವೆಯಾಗಿ 4 ವರ್ಷವಾಗಿದೆ. ಸಂಸಾರದಲ್ಲಿ ರಂಜಿತಾ ಪದೇ ಪದೇ ಜಗಳ ತೆಗೆದು ತವರಿಗೆ ಹೋಗುತ್ತಿದ್ದ ಕಾರಣದಿಂದ ಬೇಸತ್ತ ಸಿದ್ದೇಗೌಡ, ಪತ್ನಿಯಿಂದ ಡಿವೋರ್ಸ್ಗಾಗಿ ಕೋರ್ಟ್ ಮೆಟ್ಟಿಲೇರಿದ್ದ. ಅದಕ್ಕೂ ಮೊದಲು ಇದೇ ರಂಜಿತಾ ಹಾಗೂ ಆಕೆಯ ಕುಟುಂಬವರು ಸಿದ್ದೇಗೌಡ, ಲಕ್ಷ್ಮಮ್ಮ, ಆಕೆಯ ಪತಿ ಶಿವಲಿಂಗೇಗೌಡ ಸೇರಿ 9 ಜನರ ಮೇಲೆ ಮಂಡ್ಯದ ಕೆರೆಗೂಡು ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳದ ದೂರು ನೀಡಿದ್ದಳು.
ಈ ಹಿನ್ನಲೆ ಸಿದ್ದೇಗೌಡನನ್ನ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದರು. ನಂತರವೂ ಪದೇ ಪದೇ ಬೇಕಂತಲೇ ಕಿರಿಕ್ ತೆಗೆದು ಜೈಲಿಗೆ ಕಳುಹಿಸುವ ಬೆದರಿಕೆ ಹಾಕುತ್ತಿದ್ದ ರಂಜಿತಾಳ ಭಯ ಹಾಗೂ ಮತ್ತೆ ತಮ್ಮನನ್ನ ಜೈಲಿಗೆ ಹಾಕ್ತಾರೆ ಎಂಬ ಭೀತಿಗೆ ಲಕ್ಷ್ಮಮ್ಮ ಆತ್ಮಹತ್ಯೆ ನಿರ್ಧಾರ ಮಾಡಿದ್ದಾರೆ. ಆದರೆ ತನ್ನ ಎರಡನೇ ಮಗನನ್ನ ನೋಡಿಕೊಳ್ಳೊಕೆ ಯಾರೂ ಇರಲ್ಲ ಎಂದು ಆತನನ್ನೂ ಕೊಂದು ನೇಣು ಬಿಗಿದು ತಾನೂ ನೇಣು ಹಾಕಿಕೊಂಡಿದ್ದಾರೆ.
ಇನ್ನು ಅಮ್ಮ-ಮಗನ ಸಾವಿನ ಕುರಿತಾಗಿ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಆದ್ರೆ ಕೇವಲ ರಂಜಿತಾಳ ಬೆದರಿಕೆಗೆ ಹೆದರಿ ಮಗನನ್ನೂ ಕೊಂದು ತಾನೂ ಸಾವಿಗೆ ಶರಣಾಗಿದ್ದು ಮಾತ್ರ ವಿಪರ್ಯಾಸ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ