ಜಿಲ್ಲಾಸ್ಪತ್ರೆ ನಿರ್ಲಕ್ಷ್ಯಕ್ಕೆ ತಾಯಿ, ಅವಳಿ ಮಕ್ಕಳು ಬಲಿಯಾಗಿದ್ದಾರೆ. ತಾಯಿ ಕಾರ್ಡ್ ಇಲ್ಲದ್ದಕ್ಕೆ ಗರ್ಭಿಣಿಗೆ ಡಾಕ್ಟರ್ ಚಿಕಿತ್ಸೆ ನೀಡಲಿಲ್ಲ ಎನ್ನಲಾಗಿದೆ. ನಂತರ, ಅವಳಿ ಮಕ್ಕಳಿಗೆ ಜನ್ಮ ನೀಡುತ್ತಲೇ ತಾಯಿ ಕೊನೆಯುಸಿರೆಳೆದಿದ್ದಾರೆ. ಕಣ್ಣು ಬಿಡುವ ಮುನ್ನವೇ ತಾಯಿ ಜತೆ ಅವಳಿ ಮಕ್ಕಳು ಸಹ ಜೀವ ಬಿಟ್ಟಿವೆ.
ತುಮಕೂರು ಜಿಲ್ಲಾಸ್ಪತ್ರೆಯ ವೈದ್ಯರ ಎಡವಟ್ಟಿಗೆ ಬಾಣಂತಿ ಸೇರಿ ಇಬ್ಬರು ಮಕ್ಕಳು ಬಲಿಯಾಗಿದ್ದಾರೆ. ಸರ್ಕಾರಿ ಆಸ್ಪತ್ರೆಯ ನಿರ್ಲಕ್ಷ್ಯಕ್ಕೆ ತಾಯಿ ಸೇರಿ ಇಬ್ಬರು ಮಕ್ಕಳು ಬಲಿಯಾಗಿದ್ದಾರೆ. ಪ್ರಸವ ವೇಳೆ ಅನಾಥ ಬಾಣಂತಿ ಹಾಗೂ ಅವಳಿ ಶಿಶುಗಳು ಮೃತಪಟ್ಟಿವೆ. ಅವಳಿ ಮಕ್ಕಳನ್ನು ಜನ್ಮ ನೀಡಿ ಬಾಣಂತಿ ಕಸ್ತೂರಿ ಕೊನೆಉಸಿರೆಲೆದಿದ್ದಾರೆ. ತುಮಕೂರು ನಗರದ ಭಾರತಿನಗರದ ಅಭಯ ಆಂಜನೇಯನ ಸ್ವಾಮಿ ದೇವಸ್ಥಾನದ ಬಳಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.
ತುಮಕೂರು ನಗರದ ಭಾರತಿ ನಗರದಲ್ಲಿ ಒಂದು ಹೆಣ್ಣು ಮಗು ಜೊತೆ 30 ವರ್ಷದ ಕಸ್ತೂರಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. 9 ತಿಂಗಳ ತುಂಬು ಗರ್ಭಿಣಿ ಆಗಿದ್ದ ಕಸ್ತೂರಿ ಅವರಿಗೆ ಬುಧವಾರ ಸಂಜೆ ಮನೆಯಲ್ಲಿ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಈ ವೇಳೆ ಆಕೆಯ ಕಷ್ಟ ನೋಡಲಾರದೇ ಸ್ಥಳೀಯರೇ ಹಣ ಸಂಗ್ರಹಿಸಿ ಆಟೋ ಮಾಡಿ ತುಮಕೂರು ಜಿಲ್ಲಾಸ್ಪತ್ರೆಗೆ ಕಳಿಸಿದ್ರು. ಪಕ್ಕದ ಮನೆಯ ಅಜ್ಜಿಯ ಜೊತೆ ಕಸ್ತೂರಿ ಆಸ್ಪತ್ರೆಗೆ ತೆರಳಿದ್ದರು.
ಇದನ್ನು ಓದಿ: ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲೂ ದೂರು ಪುಸ್ತಕ: ಸಚಿವ ಸುಧಾಕರ್
ಈ ವೇಳೆ ತಾಯಿ ಕಾರ್ಡ್ ಇಲ್ಲ ಎಂದು ಚಿಕಿತ್ಸೆ ಕೊಡದೆ ಸರ್ಕಾರಿ ಆಸ್ಪತ್ರೆಯಿಂದ ವಾಪಸ್ ಕಳುಹಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ವೈದ್ಯೆಯ ಬಳಿ ಅಂಗಲಾಚಿ ಕೇಳಿದ್ರೂ ಚಿಕಿತ್ಸೆ ಕೊಡದೆ ವೈದ್ಯೆ ನಿರ್ಲಕ್ಷ್ಯ ಮಾಡಿದ್ರು ಎಂದೂ ಹೇಳಲಾಗುತ್ತಿದೆ. ಅಲ್ಲದೆ, ನಾವು ಚಿಕಿತ್ಸೆ ಕೊಡಲ್ಲ.. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಬರೆದುಕೊಡ್ತೀನಿ ಎಂದು ವೈದ್ಯೆ ತುಂಬು ಗರ್ಭಿಣಿಗೆ ಹೇಳಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.
ಇನ್ನು, ಹಣವೂ ಇಲ್ಲದೆ ಬಾಣಂತಿ ಮನೆಗೆ ವಾಪಸ್ ಬಂದಿದ್ದರು. ನಂತರ, ಗುರುವಾರ ಬೆಳಗ್ಗಿನ ಜಾವ ಹೊಟ್ಟೆನೋವಿನಿಂದ ಕಿರುಚಾಡಿ ಒಂದು ಮಗುವಿಗೆ ತಾಯಿ ಜನ್ಮ ನೀಡಿದ್ದಾರೆ. ಬಳಿಕ, ಮತ್ತೊಂದು ಮಗುವಿಗೆ ಜನ್ಮ ನೀಡುವಾಗ ತೀವ್ರ ರಕ್ತಸ್ರಾವವಾಗಿ ಎರಡು ಮಕ್ಕಳು ಹಾಗೂ ತಾಯಿ ಸೇರಿ 3 ಜೀವಗಳು ಬಲಿಯಾಗಿವೆ.
ಕಸ್ತೂರಿ ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ್ದರು ಎಂದು ಹೇಳಲಾಗಿದ್ದು, ತಾಯಿ ಕಾರ್ಡ್, ಆಧಾರ್ ಕಾರ್ಡ್ ಕೊಡುವಂತೆ ಜಿಲ್ಲಾಸ್ಪತ್ರೆ ಸಿಬ್ಬಂದಿ ಸೂಚಿಸಿದ್ದರು. ಆದರೆ, ಅವರ ಬಳಿ ತಾಯಿ ಕಾರ್ಡ್ ಇರಲಿಲ್ಲ. ಈ ಹಿನ್ನೆಲೆ ಆಸ್ಪತ್ರೆಗೆ ದಾಖಲಿಸಿಕೊಳ್ಳಲು ಜಿಲ್ಲಾಸ್ಪತ್ರೆ ಸಿಬ್ಬಂದಿ ಹಿಂದೇಟು ಹಾಕಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: Chitradurga Hospital: ತಿಂಗಳಾದ್ರು ಇನ್ನೂ ಬಗೆಹರಿಯದ MRI ಸ್ಕ್ಯಾನಿಂಗ್ ಸೆಂಟರ್ ಸಮಸ್ಯೆ.
ಕಸ್ತೂರಿ ತಮಿಳುನಾಡು ಮೂಲದವರಾಗಿದ್ದು, ಕಳೆದ ಒಂದು ತಿಂಗಳಿನಿಂದ ಭಾರತಿ ನಗರದಲ್ಲಿ ವಾಸವಿದ್ದರು. ಗರ್ಭಿಣಿ ಹಾಗೂ ಇಬ್ಬರು ಮಕ್ಕಳ ಸಾವಿಗೆ ತುಮಕೂರು ಜಿಲ್ಲಾಸ್ಪತ್ರೆ ವೈದ್ಯರೇ ಕಾರಣ ಎಂದು ಸ್ಥಳೀಯರು ಆರೋಪ ಮಾಡಿದ್ದಾರೆ. ತುಮಕೂರಿನ ಎನ್‌ಇಪಿಎಸ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಜೀವ ಕಾಪಾಡಬೇಕಾದ ವೈದ್ಯರಿಂದಲೇ 3 ಜೀವಗಳು ಹೋಗಿದೆ ಎಂಬ ಆರೋಪ ಕೇಳಿಬಂದಿರುವುದು ನಿಜಕ್ಕೂ ದುರದೃಷ್ಟಕರವಾಗಿದೆ. ಆಸ್ಪತ್ರೆಯ ನಿರ್ಲಕ್ಷ್ಯದಿಂದಲೇ ಆ ಜೀವಗಳು ಹೋಗಿವೆ. ಕಣ್ಣು ಬಿಡುವ ಮೊದಲೇ ಮಕ್ಕಳು ಬಲಿಯಾಗಿವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಇನ್ಮುಂದೆಯಾದರೂ ಈ ರೀತಿ ಪ್ರಕರಣಗಳು ನಡೆಯದಂತೆ ವೈದ್ಯರು ಹಾಗೂ ಆಸ್ಪತ್ರೆಯವರು ಕ್ರಮ ಕೈಗೊಳ್ಳಬೇಕಿದೆ. ಸರ್ಕಾರ ಕೂಡ ಈ ನಿಟ್ಟಿನಲ್ಲಿ ಎಚ್ಚೆತ್ತುಕೊಂಡು ಮುನ್ನೆಚ್ಚರಿಕೆ ವಹಿಸಬೇಕು.
ಘಟನಾ ಸ್ಥಳಕ್ಕೆ DHO ಭೇಟಿ
ಪ್ರಸವ ವೇಳೆ ಅವಳಿ ಮಕ್ಕಳೊಂದಿಗೆ ತಾಯಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನಾ ಸ್ಥಳಕ್ಕೆ DHO ಮಂಜುನಾಥ್ ಭೇಟಿ ನೀಡಿದ್ದಾರೆ. ಈ ವೇಳೆ ಸ್ಥಳೀಯರು DHO ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ತಪ್ಪಿತಸ್ಥ ವೈದ್ಯರನ್ನು ಅಮಾನತು ಮಾಡುವಂತೆಯೂ ಸ್ಥಳೀಯರು ಆಗ್ರಹಿಸಿದ್ದಾರೆ. ಈ ಮಧ್ಯೆ, ಬಾಣಂತಿ ಕುರಿತು NEPS ಸಬ್ಇನ್ಸ್‌ಪೆಕ್ಟರ್ ವಿದ್ಯಾಶ್ರೀ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಬಾಣಂತಿಯ ಮೂಲ ನಿವಾಸ ಹಾಗೂ ಸಂಬಂಧಿಕರ ಬಗ್ಗೆ ಮಾಹಿತಿ ಸಂಗ್ರಹ ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ.
ತುಮಕೂರಿನಲ್ಲಿ ನಡೆದ ಮಹಿಳೆ, ಮಕ್ಕಳ ಸಾವಿಗೆ ಶಶಿಕಲಾ ಜೊಲ್ಲೆ ಖಂಡಿಸಿದ್ದಾರೆ. ತುಮಕೂರು ಘಟನೆ ನಿಜಕ್ಕೂ ನೋವಿನ ಸಂಗತಿ.ಈ ಬಗ್ಗೆ ತನಿಖೆ ಆಗಬೇಕು. ಯಾರಿಂದ ತಪ್ಪಾಗಿದೆ ಅಂತ ತನಿಖೆ ಮಾಡಿ. ಯಾರೇ ಆಗಿದ್ದರೂ ಕ್ರಮ ತೆಗೆದುಕೊಳ್ಳಿ. ಆಸ್ಪತ್ರೆಯ ಬೇಜವಬ್ದಾರಿ ಆಗಿದ್ದರೂ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.