ಕನಕಪುರ: ಜೀ ನೆಟ್‌ ವರ್ಕ್‌ಗೆ ಕನ್ನ​ಹಾ​ಕಿದ ನಾಲ್ವರ ವಿರುದ್ಧ ಕೇಸ್‌..!

By Kannadaprabha NewsFirst Published Nov 3, 2022, 12:55 PM IST
Highlights

ಹಾರೋಬಲೆ ಗ್ರಾಮದ ನೂರಾರು ಮನೆಗಳಿಗೆ ಸಂಪರ್ಕ ಕಲ್ಪಿಸಿ ಪ್ರತಿ ತಿಂಗಳು 200 ರು. ವಸೂಲಿ

ಕನಕಪುರ(ನ.03):  ಜೀ ಎಂಟರ್‌ಟೈನ್ಮೆಂಟ್‌ ಎಂಟರ್‌ ಪ್ರೈಸಸ್‌ ಲಿಮಿಟೆಡ್‌ ಸಂಸ್ಥೆಯ ನೆಟ್‌ವರ್ಕ್ಗೆ ಕನ್ನಹಾಕಿ ಪೇ ಚಾನೆಲ್‌ಗಳನ್ನು ಅಕ್ರಮವಾಗಿ ನೂರಾರು ಮನೆಗಳಿಗೆ ಸಂಪರ್ಕ ಕೊಟ್ಟು ಹಣ ವಸೂಲಿ ಮಾಡುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದ್ದು ಕೋಡಿಹಳ್ಳಿ ಮತ್ತು ಸಾತನೂರು ಠಾಣೆಯಲ್ಲಿ ನಾಲ್ವರ ಮೇಲೆ ಎಫ್‌ಐಆರ್‌ ದಾಖಲಾಗಿದೆ. ತಾಲೂಕಿನ ಹಾರೋಬಲೆಯ ಕಿಶೋರ್‌ಕುಮಾರ್‌, ಹೂಕುಂದದ ರಾಮಚಂದ್ರ, ಲೋಕೇಶ್‌, ಮುನಿರಾಜು ವಿರುದ್ಧ ಪೊಲೀ​ಸ​ರು ಪ್ರಕ​ರಣ ದಾಖ​ಲಿ​ಸಿ​ಕೊಂಡಿ​ದ್ದಾ​ರೆ.

ಜೀ ಎಂಟರ್‌ಟೈನ್ಮೆಂಟ್‌ ಎಂಟರ್‌ ಪ್ರೈಸಸ್‌ ಲಿಮಿಟೆಡ್‌ ಸಂಸ್ಥೆ ಕಡೆಯಿಂದ ಯಾವುದೇ ಪರವಾನಗಿ ಮತ್ತು ಹಣ ಪಾವತಿಸದೆ ಅಕ್ರಮವಾಗಿ ಜೀ ಸಂಸ್ಥೆಯ ಕನ್ನಡ ಸೇರಿದಂತೆ ತಮಿಳು, ತೆಲುಗು ಹಲವು ಚಾನಲ್‌ಗಳನ್ನು ಹಾರೋಬಲೆ ಗ್ರಾಮದ ನೂರಾರು ಮನೆಗಳಿಗೆ ಸಂಪರ್ಕ ಕಲ್ಪಿಸಿ ಪ್ರತಿ ತಿಂಗಳು 200 ರು. ವಸೂಲಿ ಮಾಡಿರುವುದು ಬೆಳಕಿಗೆ ಬಂದಿದೆ.

ರೇಣುಕಾಚಾರ್ಯ ಅಣ್ಣನ ಮಗ ನಾಪತ್ತೆ ಪ್ರಕರಣ: ಚಂದ್ರಶೇಖರ್‌ ಸ್ನೇಹಿತ ಕಿರಣ್‌ ಬಂಧನ

ಹಾರೋಬಲೆಯ ಕಿಶೋರ್‌ಕುಮಾರ್‌ ತಮ್ಮ ಮನೆಗೆ ಹಾಕಿಕೊಂಡಿದ್ದ ಸೆಟ್‌ಆಪ್‌ ಬಾಕ್ಸ್‌ ಮೂಲಕ ಜೀ ಬ್ರಾಡ್‌ಕಾಸ್ವ್‌ ಸಂಸ್ಥೆಯ ಜೀ ಟಿವಿ, ಜೀ ಸಿನಿಮಾ, ಜೀ ಕನ್ನಡ, ಜೀ ಮರಾಠಿ, ಜೀ ಸ್ಟೂಡಿಯೋನ ಪೇ ಚಾನಲ್‌ಗಳು ಸೇರಿದಂತೆ ಉಚಿತವಾಗಿ ಬರುವ ಕೆಲವು ಚಾನಲ್‌ಗಳನ್ನು ಒಳಗೊಂಡಂತೆ ಅನಲಾಗ್‌(ಟ್ರಾನ್ಸ್‌ ಮೀಟರ್‌) ಗ್ರಾಮದ 150ಕ್ಕೂ ಹೆಚ್ಚು ಮನೆಗಳಿಗೆ ಸಂಪರ್ಕ ಕೊಟ್ಟು ಪ್ರತಿ ಮನೆಯಿಂದ 200 ರುಪಾಯಿ ವರೆಗೂ ಹಣ ವಸೂಲಿ ಮಾಡಿ ವಂಚನೆ ಮಾಡಿದ್ದಾರೆ.

ಇದೇ ಮಾದರಿಯಲ್ಲಿ ಜೀ ವಾಹಿನಿಯ ಪೇ ಚಾನೆಲ್‌ಗಳನ್ನು ಅಕ್ರಮವಾಗಿ ಮನೆಗಳಿಗೆ ವಿತರಣೆ ಮಾಡುತ್ತಿದ್ದ ಪ್ರಕರಣ ಸಾತನೂರು ಠಾಣಾ ವ್ಯಾಪ್ತಿಯಲ್ಲೂ ಬೆಳಕಿಗೆ ಬಂದಿದ್ದು ಆರೋಪಿಗಳು ತನ್ನ ಮನೆಯ ಟಿವಿಗಳಿಗೆ ಹಾಕಿಕೊಂಡಿದ್ದ ಸೆಟ್‌ಆಪ್‌ ಬಾಕ್ಸ್‌ನಿಂದ ಅನಲಾಗ್‌(ಟ್ರಾನ್ಸ್‌ ಮೀಟರ್‌) ಮೂಲಕ ನೂರಾರು ಮನೆಗಳಿಗೆ ಸಂಪರ್ಕ ಕೊಟ್ಟು ಹಣ ಮಾಡುತ್ತಿರುವುದು ಬೆಳಕಿಗೆ ಬಂದಿದೆ.

ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ:
ಇತ್ತೀಚಿಗೆ ನಗರದಲ್ಲಿ ನಡೆದ ಜೀ ಕನ್ನಡ ವಾಹಿನಿಯ ಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್‌ ಕಾರ್ಯಕ್ರಮದ ಗ್ರ್ಯಾಂಡ್‌ ಫಿನಾಲೆ ಕಾರ್ಯಕ್ರಮದಿಂದ ಈ ಪ್ರಕರಣ ಬೆಳಕಿಗೆ ಬಂದಿದೆ. ಯಾವುದೇ ಎಂಟರ್‌ಟೈನ್ಮೆಂಟ್‌ ದೃಶ್ಯವಾಹಿನಿಗಳು ಜನಮನ್ನಣೆ ಗಳಿಸಿದ ಕಾರ್ಯಕ್ರಮಗಳು ಪ್ರಸಾರವಾದರೆ ಸಹಜವಾಗಿಯೇ ಆ ವಾಹಿನಿಯನ್ನು ಹೆಚ್ಚು ವೀಕ್ಷಣೆ ಮಾಡುತ್ತಾರೆ. ಟಿಆರ್‌ಪಿಯೂ ಏರಿಕೆಯೂ ತಿಳಿದಿರುವ ವಿಚಾರ. ಆದರೆ, ಸೆಪ್ಟೆಂಬರ್‌ ತಿಂಗಳಲ್ಲಿ ನಗರದ ಎಸ್‌.ಕರಿಯಪ್ಪನವರ ಶಿಕ್ಷಣ ಸಂಸ್ಥೆ ಆವರಣದಲ್ಲಿ ಜೀ ಕನ್ನಡ ವಾಹಿನಿ ನಟ ದಿ.ಪುನೀತ್‌ ರಾಜ್‌ಕುಮಾರ್‌ಗೆ ಅರ್ಪಣೆ ಮಾಡುವ ಉದ್ದೇಶದಿಂದ ಕನ್ನಡದ ಜನಪ್ರಿಯ ಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್‌  ಕಾರ್ಯಕ್ರಮದ ಗ್ರಾಂಡ್‌ ಫಿನಾಲೆ ಆಯೋಜಿಸಿದ್ದರು.

ಕಾರ್ಯಕ್ರಮಕ್ಕೆ ನಟ ಶಿವರಾಜ್‌ ಕುಮಾರ್‌, ಸಂಗೀತ ನಿರ್ದೇಶಕ ಅರ್ಜುನ್‌ ಜನ್ಯ, ನಟಿ ರಕ್ಷಿತಾ, ನೃತ್ಯ ನಿರ್ದೇಶಕ ಚಿನ್ನಿ ಮಾಸ್ಟರ್‌ ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ಆಗಮಿಸಿದ್ದರು. ತಾಲೂಕು ಸೇರಿದಂತೆ ಜಿಲ್ಲೆಯಿಂದಲೂ ಸಾವಿರಾರು ಜನರು ಕಾರ್ಯಕ್ರಮವನ್ನು ಮುಗಿಬಿದ್ದು ವೀಕ್ಷಿಸಿದರು.

ಕುಡಿದ ಅಮಲಿನಲ್ಲಿ ಯುವಕನ ಕೈ ಕತ್ತರಿಸಿ ದುಷ್ಕರ್ಮಿಗಳ ಪುಂಡಾಟಿಕೆ: ಓರ್ವನ ಬಂಧನ

ಕಾರ್ಯಕ್ರಮ ನಡೆದ ಮೂರು ದಿನಗಳ ನಂತರ ಶನಿವಾರ ಜೀ ಕನ್ನಡ ವಾಹಿನಿಯಲ್ಲಿ ಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್‌  ಫಿನಾಲೆ ಇವೆಂಟ್‌ ಪ್ರಸಾರಗೊಂಡಿತ್ತು. ಕಾರ್ಯಕ್ರಮವನ್ನು ಲೈವ್‌ ಆಗಿ ವೀಕ್ಷಿಸಿದ್ದ ಸಹಸ್ರಾರು ವೀಕ್ಷಕರು ವಾಹಿನಿಯಲ್ಲಿ ಫಿನಾಲೆ ಇವೆಂಟ್‌ ಪ್ರಸಾರಗೊಂಡಾಗ ಕೂತೂಹಲದಿಂದ ವೀಕ್ಷಿಸುವುದು ಸಹಜ. ಈ ವೇಳೆ ತಾಲೂಕಿನ ಸುತ್ತಮುತ್ತಲೂ ವಾಹಿನಿಯ ಟಿಆರ್‌ಪಿ ಏರಿಕೆ ಆಗಬೇಕಿತ್ತು. ಆದರೆ, ಕಾರ್ಯಕ್ರಮ ಟಿವಿಯಲ್ಲಿ ಪ್ರಸಾರಗೊಂಡರೂ ತಾಲೂಕಿನ ಸುತ್ತಮುತ್ತಲೂ ಜೀ ವಾಹಿನಿಯ ಟಿಆರ್‌ಪಿಯಲ್ಲಿ ಯಾವುದೇ ವ್ಯತ್ಯಾಸ ಕಂಡು ಬರಲಿಲ್ಲ.

ಇದರಿಂದ ಅನುಮಾನಗೊಂಡ ಜೀ ಎಂಟರ್‌ಟೈನ್ಮೆಂಟ್‌ ಎಂಟರ್‌ ಪ್ರೈಸಸ್‌ ಸಂಸ್ಥೆಯ ಮುಂಬೈ ಮುಖ್ಯಸ್ಥ ನಿಲೇಶ್‌ ಸಾವಂತ್‌ ಹಾಗೂ ತನಿಖಾಧಿಕಾರಿಗಳ ತಂಡ ತಾಲೂಕಿಗೆ ಭೇಟಿ ನೀಡಿ ಪರಿಶೀಲಿಸಿದಾಗ ಈ ಘಟನೆ ಬೆಳಕಿಗೆ ಬಂದಿದೆ.
ಜೀ ವಾಹಿನಿ ಸಂಸ್ಥೆಯ ಮು​ಖ್ಯ​ಸ್ಥರು, ಆರೋಪಿಗಳ ವಿರುದ್ಧ ಕೋಡಿಹಳ್ಳಿ ಮತ್ತು ಸಾತನೂರು ಪೋಲಿಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ಕೃತ್ಯಕ್ಕೆ ಬಳಸಿದ್ದ ಅನಲಾಗ್‌(ಟ್ರಾನ್ಸ್‌ ಮೀಟರ್‌) ಮಾಡಿಲೇಟರ್‌ ಮತ್ತು ಫೈಬರ್‌ ಕೇಬಲ್‌ಗಳನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆನ್ನಲಾಗಿದೆ.
 

click me!