
ಚನ್ನಪಟ್ಟಣ (ಡಿ.2): ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಹೆಡ್ ಕಾನ್ಸ್‌ಟೇಬಲ್ ಒಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಅವರ ಮೃತದೇಹವು ಕೆರೆಯಲ್ಲಿ ಪತ್ತೆಯಾಗಿದೆ. ಮೃತ ಹೆಡ್ ಕಾನ್ಸ್‌ಟೇಬಲ್ ಅವರನ್ನು ಲಕ್ಷ್ಮಣ್ (51) ಎಂದು ಗುರುತಿಸಲಾಗಿದೆ. ಅವರು ಚನ್ನಪಟ್ಟಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು.
ಲಕ್ಷ್ಮಣ್ ಅವರು ನಿನ್ನೆ (ಸೋಮವಾರ) ಕರ್ತವ್ಯಕ್ಕೆ ಗೈರು ಹಾಜರಾಗಿದ್ದರು. ಅಲ್ಲದೆ, ಅವರ ಮೊಬೈಲ್ ಕೂಡ ಸ್ವಿಚ್ ಆಫ್ ಆಗಿತ್ತು. ಇಂದು (ಮಂಗಳವಾರ) ಬೆಳಿಗ್ಗೆ ಅವರ ಮೃತದೇಹ ಕೆರೆಯಲ್ಲಿ ಪತ್ತೆಯಾಗಿದ್ದು, ಕುಟುಂಬಸ್ಥರು ಮತ್ತು ಸಹೋದ್ಯೋಗಿಗಳಲ್ಲಿ ಆಘಾತ ಮೂಡಿಸಿದೆ. ಘಟನಾ ಸ್ಥಳದಲ್ಲಿ, ಲಕ್ಷ್ಮಣ್ ಅವರು ಹೆಲ್ಮೆಟ್ ಸಮೇತ ಕೆರೆಗೆ ಬಿದ್ದಿರುವುದು ಕಂಡುಬಂದಿದೆ. ಅವರ ಬೈಕ್ ಕೂಡ ಕೆರೆಯ ಪಕ್ಕದಲ್ಲೇ ಪತ್ತೆಯಾಗಿದೆ.
ಸ್ಥಳಕ್ಕೆ ಚನ್ನಪಟ್ಟಣ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಾಥಮಿಕವಾಗಿ ಕಾಲು ಜಾರಿ ಆಕಸ್ಮಿಕವಾಗಿ ಕೆರೆಗೆ ಬಿದ್ದಿರುವ ಶಂಕೆ ವ್ಯಕ್ತವಾಗಿದೆಯಾದರೂ, ಇದು ಆತ್ಮ೧ಹತ್ಯೆಯೋ ಅಥವಾ ನಿಜಕ್ಕೂ ಆಕಸ್ಮಿಕವಾಗಿ ಸಂಭವಿಸಿದ ದುರಂತವೋ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪೊಲೀಸರು ಮೃತದೇಹವನ್ನು ಕೆರೆಯಿಂದ ಮೇಲೆತ್ತಿ, ಮರಣೋತ್ತರ ಪರೀಕ್ಷೆಗಾಗಿ ತಾಲೂಕು ಆಸ್ಪತ್ರೆಗೆ ರವಾನಿಸಿದ್ದಾರೆ. ಪೋಸ್ಟ್‌ಮಾರ್ಟಂ ವರದಿ ಬಂದ ನಂತರವೇ ಹೆಡ್ ಕಾನ್ಸ್‌ಟೇಬಲ್ ಲಕ್ಷ್ಮಣ್ ಅವರ ಸಾವಿನ ನಿಖರ ಕಾರಣ ತಿಳಿದುಬರಲಿದೆ. ಈ ಸಂಬಂಧ ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ