ಬದುಕಿದ್ದ ವಿದ್ಯಾರ್ಥಿಗಳಿಗೆ ಕಿಡಿಗೇಡಿಗಳಿಂದ ಶ್ರದ್ಧಾಂಜಲಿ..!

By Kannadaprabha NewsFirst Published May 23, 2020, 10:28 AM IST
Highlights

ವಿದ್ಯಾರ್ಥಿಗಳ ಹೆಸರಲ್ಲಿ ನಕಲಿ ಖಾತೆ ತೆರೆದು ಶ್ರದ್ಧಾಂಜಲಿ| ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ಕುಚೋದ್ಯ| ಸೈಬರ್‌ ಠಾಣೆಗೆ ದೂರು ನೀಡಿದ ಸಂತ್ರಸ್ತ ವಿದ್ಯಾರ್ಥಿ|

ಬೆಂಗಳೂರು(ಮೇ.23): ಇನ್‌ಸ್ಟಾಗ್ರಾಂನಲ್ಲಿ ಖಾಸಗಿ ಎಂಜಿನಿಯರಿಂಗ್‌ ಕಾಲೇಜಿನ ಐವರು ವಿದ್ಯಾರ್ಥಿಗಳ ಹೆಸರಿನಲ್ಲಿ ನಕಲಿ ಖಾತೆ ತೆರೆದು ಮೃತಪಟ್ಟಿರುವುದಾಗಿ ಶ್ರದ್ಧಾಂಜಲಿ ಫೋಟೋ ಅಪ್‌ಲೋಡ್‌ ಮಾಡಿ ಕಿಡಿಗೇಡಿಗಳು ಕುಚೋದ್ಯತನ ತೋರಿಸಿರುವ ಘಟನೆ ನಡೆದಿದೆ.

ಖಾಸಗಿ ಕಾಲೇಜಿನ ಆರ್ಕಿಟೆಕ್ಚರ್‌ ವಿದ್ಯಾರ್ಥಿಗಳು ಸಂತ್ರಸ್ತನಾಗಿದ್ದು, ಪಶ್ಚಿಮ ವಿಭಾಗ ಸೈಬರ್‌ ಕ್ರೈಂ ಠಾಣೆಗೆ ಆತ ದೂರು ನೀಡಿದ್ದಾನೆ. ಕಾಲೇಜಿಗೆ ರಜೆ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಮನೆಯಲ್ಲಿದ್ದಾಗ ಈ ಕೃತ್ಯ ನಡೆದಿದೆ. ಕೃತ್ಯದಲ್ಲಿ ಪರಿಚಯಸ್ಥರ ಕೈವಾಡವಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಕಳ್ಳ ದಾರೀಲಿ ರಾಜ್ಯಕ್ಕೆ ಬರುತ್ತಿರುವ ಜನರು: ಕೊರೋನಾ ಸೋಂಕು ಹರಡುವ ಆತಂಕ..!

ಖಾಸಗಿ ಎಂಜಿನಿಯರಿಂಗ್‌ ಕಾಲೇಜಿನ ವಿದ್ಯಾರ್ಥಿ, ಅನ್ನಪೂರ್ಣೇಶ್ವರಿ ನಗರದಲ್ಲಿ ತಮ್ಮ ಕುಟುಂಬದ ಜತೆ ನೆಲೆಸಿದ್ದಾನೆ. ಮೇ 13ರಂದು ವಿದ್ಯಾರ್ಥಿ ಹೆಸರಿನಲ್ಲಿ ನಕಲಿ ಇನ್‌ಸ್ಟಾಗ್ರಾಂ ಖಾತೆ ತೆರೆದ ದುಷ್ಕರ್ಮಿ, ಕೆಲ ನಿಮಿಷದಲ್ಲೇ ಆತನ 150ಕ್ಕೂ ಅಧಿಕ ಸ್ನೇಹಿತರಿಗೆ ಫ್ರೆಂಡ್‌ ರಿಕ್ವೆಸ್ಟ್‌ ಕಳುಹಿಸಿದ್ದ. ಆನಂತರ ರಾತ್ರಿ ಸುಮಾರು 10.30ಕ್ಕೆ ವಿದ್ಯಾರ್ಥಿ ಮೃತಪಟ್ಟಿದ್ದಾನೆ ಎಂದು ಶ್ರದ್ಧಾಂಜಲಿ ಫೋಟೋ ಆಪ್‌ಲೋಡ್‌ ಮಾಡಿದ ಆರೋಪಿ, ಆ ಫೋಟೋದಡಿ ಆರ್‌ಐಪಿ (ರೆಸ್ಟ್‌ ಇನ್‌ ಎ ಪೀಸ್‌) ಎಂದು ಬರೆದಿದ್ದ.

ಫೋಟೋ ನೋಡಿದ ಸಂತ್ರಸ್ತ ವಿದ್ಯಾರ್ಥಿ ಗೆಳೆಯರು ಸಹ ಶ್ರದ್ಧಾಂಜಲಿ ಸಲ್ಲಿಸಿದ್ದರು. ಆದರೆ ಸಾವಿನ ಬಗ್ಗೆ ಅನುಮಾನಗೊಂಡ ಆತನ ಗೆಳೆಯನೊಬ್ಬ, ರಾತ್ರಿ 12.15ಕ್ಕೆ ಶೋಷಿತ ವಿದ್ಯಾರ್ಥಿಗೆ ಕರೆ ಮಾಡಿ ವಿಚಾರಿಸಿ, ಇನ್‌ಸ್ಟಾಗ್ರಾಂನಲ್ಲಿ ಕಿಡಿಗೇಡಿ ವಿಚಾರ ತಿಳಿಸಿದ್ದಾನೆ. ಅಷ್ಟರಲ್ಲಿ ನಕಲಿ ಖಾತೆಯನ್ನು ಆರೋಪಿ ಡಿಲೀಟ್‌ ಮಾಡಿದ್ದ. ಆ ಹೊತ್ತಿಗಾಗಲೇ ಆ ಖಾತೆಯ ಫೋಟೋಗಳು ಶೋಷಿತ ವಿದ್ಯಾರ್ಥಿಯ ಸ್ನೇಹಿತರ ಬಳಗದಲ್ಲಿ ವೈರಲ್‌ ಆಗಿದ್ದವು. ಪೊಲೀಸರಿಗೆ ದೂರು ನೀಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮತ್ತೆ ನಾಲ್ವರಿಗೆ ತೊಂದರೆ

ಅನ್ನಪೂರ್ಣೇಶ್ವರಿ ನಗರದ ವಿದ್ಯಾರ್ಥಿ ಬಳಿಕ ಮತ್ತೆ ಆತನ ನಾಲ್ವರು ಗೆಳೆಯರ ಹೆಸರಿನಲ್ಲಿ ಸಹ ನಕಲಿ ಖಾತೆ ತೆರೆದು ಸಾವನ್ನಪ್ಪಿರುವ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಲಾಗಿತ್ತು. ಈ ಬಗ್ಗೆ ನಗರದ ವಿವಿಧ ಠಾಣೆಗಳಲ್ಲಿ ದೂರು ದಾಖಲಾಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
 

click me!