* ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕು ಹುಲಗೂರು ಗ್ರಾಮದಲ್ಲಿ ನಡೆದ ಘಟನೆ
* ಸಲ್ಮಾಬಾನು ಮೇಲೆ ಗುಂಡಿನ ದಾಳಿ
* ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಎಸ್‌ಪಿ ಘಟನೆ ಹನುಮಂತರಾಯ
ವರದಿ: ಪವನ್ ಕುಮಾರ್, ಏಷ್ಯಾನೆಟ್ ಸುವರ್ಣ ನ್ಯೂಸ್, ಹಾವೇರಿ
ಹಾವೇರಿಮೇ.26): ಶಾಂತಿ ಸೌಹಾರ್ದತೆಗೆ ಹೆಸರಾದ ಜಿಲ್ಲೆ ಹಾವೇರಿ. ಆದರೆ ಇಂಥಹ ಜಿಲ್ಲೆಯಲ್ಲಿ ಪಿಸ್ತೂಲು, ಬಂದೂಕುಗಳು ಸದ್ದು ಮಾಡುತ್ತಿವೆ. ನೆಮ್ಮದಿಯಿಂದ ಬದುಕುತ್ತಿರುವ ಹಾವೇರಿ ಜಿಲ್ಲೆಯ ಜನತೆ ಗುಂಡಿನ ಸದ್ದಿಗೆ ಬೆಚ್ಚಿ ಬೀಳುತ್ತಿದ್ದಾರೆ. ಹೌದು, ನಿನ್ನೆ(ಬುಧವಾರ) ತಡರಾತ್ರಿ ಶಿಗ್ಗಾವಿ ತಾಲೂಕು ಹುಲಗೂರು ಗ್ರಾಮದಲ್ಲಿ ಮಹಿಳೆ ಮೇಲೆ ಮನಬಂದಂತೆ ಫೈರಿಂಗ್ ಮಾಡಿ ಮುಸುಕುದಾರಿಗಳು ಪರಾರಿಯಾಗಿದ್ದಾರೆ. ಆದರೆ ಅದೃಷ್ಟ ಗಟ್ಟಿ ಇತ್ತು ಅನಿಸುತ್ತೆ. ದೇವರ ಅನುಗ್ರಹವೋ ಏನೋ ಒಂದೂ ಗುಂಡು ತಾಗದೇ ಸಲ್ಮಾಬಾನು ಪಾರಾಗಿದ್ದಾರೆ.
undefined
ನಿನ್ನೆ ರಾತ್ರಿ ಹುಲಗೂರು ಗ್ರಾಮದ ಅಜಾದ್ ಓಣಿಯಲ್ಲಿರುವ ತಮ್ಮ ಮನೆ ಮುಂದೆ ಕುಳಿತಿದ್ದ ಸಲ್ಮಾಬಾನು ಮೇಲೆ ಮುಸುಕು ಧರಿಸಿ ಬಂದಿದ್ದ ಇಬ್ಬರು ಅನಾಮಿಕ ವ್ಯಕ್ತಿಗಳು ಗುಂಡು ಹಾರಿಸಿದ್ದಾರೆ. ಮುಂದೆ ಕುಳಿತಿದ್ದ ವ್ಯಕ್ತಿ ಮುಖಕ್ಕೆ ಕರ್ಚಿಪ್ ಕಟ್ಟಿಕೊಂಡಿದ್ದ. ಹಿಂದೆ ಕುಳಿತ ವ್ಯಕ್ತಿ ಸ್ವಲ್ಪ ದಪ್ಪ ಇದ್ದು, ಜರ್ಕಿನ್ ಹಾಕಿಕೊಂಡು ಬಂದೂಕು ಹಿಡಿದುಕೊಂಡಿದ್ದ ಎಂದು ಸಲ್ಮಾಬಾನು ಸುವರ್ಣ ನ್ಯೂಸ್ ಗೆ ಮಾಹಿತಿ ನೀಡಿದ್ದಾರೆ.
ಮದುವೆ ಸಂಭ್ರಮದಲ್ಲಿ ಗಾಳಿಯಲ್ಲಿ ಗುಂಡು ಹಾರಿಸಿದ ವಧು
ಬಂದೂಕು ಎತ್ತಿ ಗುರಿ ಇಡಬೇಕು ಅನ್ನುವಷ್ಟರಲ್ಲಿ ಎಚ್ಚೆತ್ತುಕೊಂಡ ಸಲ್ಮಾಬಾನು ಗುಂಡೇಟಿನಿಂದ ತಪ್ಪಿಸಿಕೊಂಡಿದ್ದಾರೆ. ಢಂ ಎಂದು ಗುಂಡು ಹಾರಿದ ರಭಸಕ್ಕೆ ಮನೆಯ ಕಿಟಕಿ ತಗಡು ರಂಧ್ರವಾಗಿವೆ. ಮನೆಯ ಒಳಭಾಗದಲ್ಲಿ ಗೋಡೆಗೆ ನುಗ್ಗಿರೋ ಗುಂಡುಗಳು ಗೋಡೆಯನ್ನೂ ರಂಧ್ರ ಮಾಡಿವೆ. ಗೋಡೆ ಮೇಲೆ 6 ಗುಂಡಿನ ಗುರುತುಗಳಿವೆ. ಎಷ್ಟು ಸುತ್ತು ಫೈರಿಂಗ್ ನಡೆದಿದೆ ಎಂಬ ಬಗ್ಗೆ ಅಧಿಕೃತವಾಗಿ ಪೊಲೀಸ್ ಇಲಾಖೆ ಮಾಹಿತಿ ನೀಡಬೇಕಿದೆ. ಘಟನೆ ನಡೆದ ಸ್ವಲ್ಪ ಹೊತ್ತಿಗೆ ಹಾವೇರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮಹಿಳೆ ಸಲ್ಮಾಬಾನು ಅವರನ್ನು ಕೆಲವು ವರ್ಷಗಳ ಹಿಂದಷ್ಟೇ ಹುಬ್ಬಳ್ಳಿ ತಾಲೂಕು ಅರಳಿಕಟ್ಟಿ ಗ್ರಾಮದ ಅಬ್ದುಲ್ ಖಾದರ್ ಎಂಬ ವ್ಯಕ್ತಿಗೆ ಮದುವೆ ಮಾಡಿಕೊಡಲಾಗಿತ್ತು. ಮದುವೆ ಬಳಿಕ ಗಂಡ ಅಬ್ದುಲ್ ಖಾದರ್ ವರದಕ್ಷಿಣೆ ಕಿರುಕುಳ ನೀಡುತ್ತಿದ್ರು. ನಮ್ಮ ತಂದೆ ಮಾಬೂ ಸಾಬ್ ಬಡವರಿದ್ದು, ವಯಸ್ಸಾಗಿದೆ. ಹಣ ಕೊಡೋಕೆ ಆಗಲ್ಲ ಎಂದು ಸಲ್ಕಾಬಾನು ಹೇಳ್ತಾನೇ ಬಂದಿದ್ರಂತೆ. ಆದರೂ ಗಂಡ ಅಬ್ದುಲ್ ಖಾದರ್ ಮನೆಯವರು ಕಿರುಕುಳ ಕೊಡುತ್ತಲೇ ಬಂದಿದ್ರು. ನಿನ್ನ ಜೀವ ಸಹಿತ ಬಿಡಲ್ಲ ಅಂತ ಧಮ್ಕಿ ಹಾಕಿದ್ರು. ನಾವು ಯಾರ ಜೊತೆಗೂ ದ್ವೇಷ ಇಟ್ಟುಕೊಂಡಿಲ್ಲ. ಆದರೆ ನನ್ನನ್ನು ಕೊಂದು ನನ್ನ ಪತಿ ಅಬ್ದುಲ್ ಖಾದರ್ ಗೆ ಇನ್ನೊಂದು ಮದುವೆ ಮಾಡಬೇಕು ಅನ್ನೋದು ಅವರ ಮನೆಯವರ ಆಸೆಯಾಗಿತ್ತು ಅಂತ ಪತಿ ಅಬ್ದುಲ್ ಖಾದರ್ ಹಾಗೂ ಅವರ ಕುಟುಂಬಸ್ಥರ ಮೇಲೆ ಆರೋಪ ಮಾಡಿದ್ದಾರೆ ಸಲ್ಮಾಭಾನು.
Firing: ಕೆಜಿಎಫ್ 2 ಪ್ರದರ್ಶನದ ವೇಳೆ ಶೂಟೌಟ್: ಹಾವೇರಿಯಲ್ಲಿ ತಲ್ಲಣ..!
ಥಿಯೇಟರ್‌ನಲ್ಲಿ ನಡೆದ ಶೂಟೌಟ್ ಪ್ರಕರಣದ ಬಳಿಕ ಇದು ಎರಡನೇ ಪ್ರಕರಣ
ಕಳೆದ ಒಂದು ತಿಂಗಳ ಹಿಂದಷ್ಟೇ ಶಿಗ್ಗಾವಿ ಪಟ್ಟಣದ ರಾಜಶ್ರೀ ಥಿಯೇಟರ್ ನಲ್ಲಿ ಶೂಟೌಟ್ ನಡೆದಿತ್ತು. ಕೆ.ಜೆ.ಎಫ್ ಫಿಲಂ ನೋಡುವಾಗಲೇ ಕ್ಷುಲ್ಲಕ ಕಾರಣಕ್ಕಾಗಿ ವಸಂತ್ ಅನ್ನುವ ಯುವಕನ ಮೇಲೆ ಮಂಜುನಾಥ್ ಅಲಿಯಾಸ್ ಮಲೀಕ್ ಪಾಟೀಲ್ ಎನ್ನುವ ವ್ಯಕ್ತಿ ಪಿಸ್ತೂಲ್ ನಿಂದ ಗುಂಡು ಹಾರಿಸಿ ಪರಾರಿಯಾಗಿದ್ದ. ಸಾವುಬದುಕಿನ ನಡುವೆ ಹೋರಾಡಿ ವಸಂತ್ ಸಾವು ಗೆದ್ದಿದ್ದಾರೆ. ಇತ್ತ ಗುಂಡು ಹಾರಿಸಿದ್ದ ಆರೋಪಿಯನ್ನು ಪೊಲೀಸರು ಕೆಲ ದಿನಗಳ ಹಿಂದಷ್ಟೆ ಬಂಧಿಸಿದ್ದರು. ಈಗ ಈ ಪ್ರಕರಣ ಮಾಸುವ ಬೆನ್ನಲ್ಲೇ ಶಿಗ್ಗಾವಿ ತಾಲೂಕಿನ ಪುಟ್ಟ ಗ್ರಾಮ ಹುಲಗೂರಿನಲ್ಲಿ ಫೈರಿಂಗ್ ನಡೆದಿರೋದು ಜನರನ್ನು ಬೆಚ್ಚಿ ಬೀಳಿಸಿದೆ.
ಬಂದೂಕುಗಳು ದುಷ್ಕರ್ಮಿಗಳ ಕೈಗೆ ಸಿಗ್ತಾ ಇರೋದಾದರೂ ಹೇಗೆ?
ಶಿಗ್ಗಾವಿ ಪಟ್ಟಣದ ರಾಜಶ್ರೀ ಚಿತ್ರಮಂದಿರದಲ್ಲಿ ಯುವಕ ವಸಂತ್ ಮೇಲೆ ಗುಂಡು ಹಾರಿಸಿ ಮಂಜುನಾಥ್ ಅಲಿಯಾಸ್ ಮಲೀಕ್ ಪಾಟೀಲ್ ಪರಾರಿಯಾಗಿದ್ದ. ಆರೋಪಿ ಕೈಗೆ ಪಿಸ್ತೂಲು ಹೇಗೆ ಸಿಕ್ತು ಎಂಬ ಚರ್ಚೆ ಸಾರ್ವಜನಿಕ ವಲಯದಲ್ಲಿ ಬಹಳ ಜೋರಾಗೇ ನಡೆದಿತ್ತು. ಈಗ ಹುಲಗೂರು ಗ್ರಾಮದಲ್ಲಿ ಮಹಿಳೆ ಮೇಲೆ ಬಂದೂಕಿನಿಂದ ಗುಂಡು ಹಾರಿದೆ. ಹಾಗಾದರೆ ಮುಸುಕು ದಾರಿಗಳಿಗೆ ಬಂದೂಕು ಸಿಕ್ಕಿದ್ದಾದರೂ ಹೇಗೆ? ಅದು ಪರವಾನಿಗೆ ಪಡೆದ ಬಂದೂಕಾ? ಅಥವಾ ಅನದೀಕೃತವಾಗಿ ಸಿಕ್ಕಿತ್ತಾ? ಪದೇ ಪದೇ ಇಂಥ ಘಟನೆಗಳು ನಡೆಯುತ್ತಿರೋದ್ಯಾಕೆ? ಇಷ್ಟು ದಿನ ಕೇವಲ ಚಲನಚಿತ್ರಗಳಲ್ಲಿ ಕೇಳಿದ್ದ ಗುಂಡಿನ ಸದ್ದು ಈಗ ನಮ್ಕ ನಡುವೆಯೇ ಕೇಳಿ ಬರುತ್ತಿದೆ ಎಂದು ಜನ ಆತಂಕಗೊಂಡಿದ್ದಾರೆ.