ವೃದ್ಧನ ಕತ್ತು ಕೊಯ್ದು ಕಾಲ್ಕಿತ್ತವರ ಬೆನ್ನಟ್ಟಿ ಹಿಡಿದು, ಥಳಿಸಿದ ಜನರು!

By Kannadaprabha NewsFirst Published Sep 21, 2020, 8:50 AM IST
Highlights

ಮನೆಗೆ ನುಗ್ಗಿ ಕೃತ್ಯ| ಬೆಂಗಳೂರಿನ ಸು​ಬೇ​ದಾರ್‌ ಮಸೀ​ದಿ ಸಮೀಪ​ ಘಟನೆ| ವೃದ್ಧನ ಕುತ್ತಿಗೆಗೆ ಗಂಭೀರ ಸ್ವರೂಪದ ಗಾಯ| ಉಳಿದ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ ಪೊಲೀಸರು, ತನಿಖೆ ಆರಂಭ| 

ಬೆಂಗಳೂರು(ಸೆ.21): ಮನೆಗೆ ನುಗ್ಗಿ ವೃದ್ಧರೊಬ್ಬರ ಕತ್ತು ಕೊಯ್ದು ಕೊಲೆ ಮಾಡಲು ಯತ್ನಿಸಿ ಪರಾರಿಯಾಗುತ್ತಿದ್ದ ಆರೋಪಿಯೊಬ್ಬನನ್ನು ಸಾರ್ವಜನಿಕರು ಥಳಿಸಿ, ಪೊಲೀಸರಿಗೆ ಒಪ್ಪಿಸಿರುವ ಘಟನೆ ಶನಿವಾರ ನಡೆದಿದೆ. ಸುಬೇದಾರ್‌ ಮಸೀದಿ ಸಮೀಪ ವಾಸವಿರುವ ಹುಲಿಯಪ್ಪ (77) ಅವರ ಕುತ್ತಿಗೆಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಆರೋಪಿ ರಾಜೇಶ್‌ ಎಂಬಾತನನ್ನು ಬಂಧಿಸಿದ್ದು, ಉಳಿದ ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಹುಲಿಯಪ್ಪ ಅವರು ನಿವೃತ್ತ ಶಿಕ್ಷಕರಾಗಿದ್ದಾರೆ. ಹಲವು ಮನೆಗಳನ್ನು ಬಾಡಿಗೆಗೆ ನೀಡಿದ್ದು, ಇತ್ತೀಚೆಗೆ ಒಂದು ಮನೆ ಖಾಲಿ ಆಗಿತ್ತು. ಮನೆ ಬಾಡಿಗೆಗೆ ಇದೆ ಎಂದು ಹುಲಿಯಪ್ಪ ಅವರು ನಾಮಫಲಕ ಹಾಕಿದ್ದರು. ಬಾಡಿಗೆ ಕೇಳುವ ನೆಪದಲ್ಲಿ ಮನೆಗೆ ಬಂದಿದ್ದ ಆರೋಪಿಗಳು, ಚಾಕುವಿನಿಂದ ಕತ್ತು ಕೊಯ್ದು ತಲೆಗೆ ಹೊಡೆದು ಕೊಲೆ ಮಾಡಲು ಯತ್ನಿಸಿದ್ದರು.

ಗಾಯಗೊಂಡ ಹುಲಿಯಪ್ಪ ಚೀರಾಡಿದ್ದರು. ಸ್ಥಳೀಯರು ಸಹಾಯಕ್ಕೆ ಬರುತ್ತಿದ್ದಂತೆ ಆರೋಪಿಗಳು ಪರಾರಿಯಾಗಲು ಯತ್ನಿಸಿದ್ದರು. ಅವರನ್ನು ಸ್ಥಳೀಯರು ಬೆನ್ನಟ್ಟಿದ್ದು, ರಾಜೇಶ್‌ ಸಿಕ್ಕಿ ಬಿದ್ದಿದ್ದಾನೆ. ಮತ್ತೊಬ್ಬ ಆರೋಪಿ ಸುಹೇಲ್‌ ಪರಾರಿಯಾಗಿದ್ದಾನೆ.

ಆನ್‌ಲೈನ್‌ನಲ್ಲಿ ಪರಿಚಯ: ಲಕ್ಷಾಂತರ ರೂ. ಪಡೆದು ಟೆಕ್ಕಿಗೆ ವಂಚಿಸಿದ ಯುವತಿ

ಬಾಡಿಗೆ ಜಾಗದ ವಿಚಾರಕ್ಕೆ ಕೃತ್ಯ?

ಆರ್‌.ಎಂ.ಸಿ. ಯಾರ್ಡ್‌ ಬಳಿ ಹುಲಿಯಪ್ಪ ಅವರಿಗೆ ಸೇರಿದ್ದ ಖಾಲಿ ಜಾಗ ಇದೆ. ಅದನ್ನು ಆರೋಪಿ ಸುಹೇಲ್‌ನ ತಂದೆ ವಜೀರ್‌ಗೆ ಗುಜರಿ ವ್ಯಾಪಾರ ಮಾಡಲು ಬಾಡಿಗೆಗೆ ನೀಡಿದ್ದರು. ವಜೀರ್‌ ಬಳಿಯೇ ಆರೋಪಿ ರಾಜೇಶ್‌ ಕೆಲಸ ಮಾಡುತ್ತಿದ್ದ. ಅವಧಿ ಮುಗಿದಿದ್ದರಿಂದ ಜಾಗವನ್ನು ಖಾಲಿ ಮಾಡುವಂತೆ ಹುಲಿಯಪ್ಪ, ವಜೀರ್‌ಗೆ ತಿಳಿಸಿದ್ದರು. ಅಷ್ಟಕ್ಕೆ ಕುಪಿತಗೊಂಡ ಆರೋಪಿಗಳು, ಸಂಚು ರೂಪಿಸಿ ಕೃತ್ಯ ಎಸಗಿರುವ ಅನುಮಾನವಿದೆ. ಎಲ್ಲ ಆಯಾಮಾಗಳಲ್ಲೂ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
 

click me!