ಮಾದಕ ವಸ್ತು ಮಾರಾಟಕ್ಕೆ ಯತ್ನ: 14 ಕೆಜಿ ಗಾಂಜಾ ಜಪ್ತಿ, ನಾಲ್ವರ ಬಂಧನ

By Kannadaprabha NewsFirst Published Sep 21, 2020, 7:58 AM IST
Highlights

ಆಂಧ್ರದಿಂದ ಗಾಂಜಾ ತಂದು ಜಮೀನಿನಲ್ಲಿ ಶೇಖರಿಸಿಟ್ಟಿದ್ದ ಆರೋಪಿ| ಹೊರ ರಾಜ್ಯದಿಂದ ಗಾಂಜಾ ತಂದು ಮಾರಾಟ ಮಾಡುತ್ತಿದ್ದ ಆರೋಪಿಗಳು| ಮಾದಕ ದ್ರವ್ಯದ ಜಾಲದ ವಿರುದ್ಧ ಪೊಲೀಸರ ಕಾರ್ಯಾಚರಣೆ| 

ಬೆಂಗಳೂರು(ಸೆ.21): ನಗರದಲ್ಲಿ ಮಾದಕ ದ್ರವ್ಯದ ಜಾಲದ ವಿರುದ್ಧ ಪೊಲೀಸರು ಕಾರ್ಯಾಚರಣೆ ಮುಂದುವರೆಸಿದ್ದು, ಪ್ರತ್ಯೇಕ ಮೂರು ಪ್ರಕರಣದಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸಿ, ಒಟ್ಟು 14 ಕೆ.ಜಿ. ಗಾಂಜಾ ಜಪ್ತಿ ಮಾಡಲಾಗಿದೆ.
ಬ್ಯಾಡರಹಳ್ಳಿ ಮತ್ತು ಕಲಾಸಿಪಾಳ್ಯ ಠಾಣೆ ವ್ಯಾಪ್ತಿಯಲ್ಲಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಜಯನಗರದ ವಿಜಯ್‌ (24), ಚಂದನ್‌ ಠಾಕೂರ್‌ (24) ಮತ್ತು ಮುಖೇಶ್‌ ಸಿಂಗ್‌ (25) ಬಂಧಿತರು. ಆರೋಪಿಗಳಿಂದ 3 ಲಕ್ಷ ಮೌಲ್ಯದ 6 ಕೆ.ಜಿ.ಗಾಂಜಾ, ಆಟೋರಿಕ್ಷಾ ಮತ್ತು ಬೈಕ್‌ ಜಪ್ತಿ ಮಾಡಲಾಗಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್‌ ಪಾಟೀಲ್‌ ತಿಳಿಸಿದ್ದಾರೆ.

"

ಭರ್ಜರಿ ಬೇಟೆ: 16 ಪೆಡ್ಲರ್‌ಗಳ ಸೆರೆ, 2 ಕ್ವಿಂಟಾಲ್‌ ಗಾಂಜಾ ಜಪ್ತಿ

ಆರೋಪಿ ವಿಜಯ್‌ ಆಟೋ ಚಾಲಕನಾಗಿದ್ದು ದಂಧೆಯಲ್ಲಿ ತೊಡಗಿದ್ದ. ಶನಿವಾರ ರಾತ್ರಿ ಕಲಾಸಿಪಾಳ್ಯದಲ್ಲಿ ಗಾಂಜಾ ಮಾರಾಟ ಮಾಡಲು ಆಟೋದಲ್ಲಿ ಬಂದಿದ್ದ. ಅನುಮಾನದ ಮೇರೆಗೆ ಪರಿಶೀಲಿಸಿದಾಗ ಒಂದೂವರೆ ಕೆ.ಜಿ. ಗಾಂಜಾ ಪತ್ತೆಯಾಗಿದೆ. ಮತ್ತೊಂದು ಪ್ರಕರಣದಲ್ಲಿ ಚಂದನ್‌ ಮತ್ತು ಮುಖೇಶ್‌ ಎಂಬುವರು ಲಿಂಗಧೀರನಹಳ್ಳಿಯ ಕಾಲೇಜೊಂದರ ಬಳಿ ಗಾಂಜಾ ಮಾರಾಟಕ್ಕೆ ಬೈಕ್‌ನಲ್ಲಿ ಬಂದಿದ್ದರು. ಈ ಕುರಿತು ಮಾಹಿತಿ ಆಧರಿಸಿ ದಾಳಿ ನಡೆಸಿ ಪರಿಶೀಲನೆ ನಡೆಸಿದಾಗ ಸಿಕ್ಕಿ ಬಿದ್ದಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ ಕೋಡಿಚಿಕ್ಕನಹಳ್ಳಿಗೆ ಹೋಗುವ ರಸ್ತೆ ನಾಡಮ್ಮ ಲೇಔಟ್‌ನಲ್ಲಿ ಜಮೀನುವೊಂದರಲ್ಲಿ ಗಾಂಜಾ ಶೇಖರಿಸಿಟ್ಟಿದ್ದ ಆರೋಪಿಯೊಬ್ಬ ಬೊಮ್ಮನಹಳ್ಳಿ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಮಲ್ಲಲ ರವೀಂದ್ರ (30) ಬಂಧಿತ. ಆರೋಪಿಯಿಂದ 4 ಲಕ್ಷ ಮೌಲ್ಯದ ಗಾಂಜಾ ಜಪ್ತಿ ಮಾಡಲಾಗಿದೆ. ಆರೋಪಿ ಮೂಲತಃ ಆಂಧ್ರಪ್ರದೇಶದವನಾಗಿದ್ದಾನೆ. ಹೊರ ರಾಜ್ಯದಿಂದ ಗಾಂಜಾ ತಂದು ಮಾರಾಟ ಮಾಡುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.
 

click me!