
ಬೆಂಗಳೂರು (ಜ.8): ರೈಲುಗಳ ಒಳಗೆ ಮತ್ತು ಹೊರಗೆ ಹೋಗುವ ವೇಳೆ ಅನುಚಿತವಾಗಿ ವರ್ತಿಸಿ ಜನರು ಭೀತಿಗೊಳಗಾಗುವ ವಿಡಿಯೋವನ್ನು ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಿದ್ದ ಇನ್ಸ್ಟಾಗ್ರಾಮ್ ಸ್ಟಾರ್'ವೊಬ್ಬನಿಗೆ ನಮ್ಮ ಮೆಟ್ರೋ ಶಿಕ್ಷೆಯ ರುಚಿ ತೋರಿಸಿದೆ.
ನಗರದ ಗೆದ್ದಲಹಳ್ಳಿ ನಿವಾಸಿ ಸಂತೋಷ್ ಕುಮಾರ್ (27) ಎಸ್ಎಸ್ಎಲ್'ಸಿ ಓದಿದ್ದು, Instagram ನಲ್ಲಿ ವಿಡಿಯೋಗಳನ್ನು ಹಾಕುವ ಮೂಲಕ 1.62 ಲಕ್ಷ ಫಾಲೋವರ್ಸ್ ಗಳನ್ನು ಹೊಂದಿದ್ದಾನೆ.
ಈತ ಮೆಟ್ರೋ ರೈಲುಗಳನ್ನು ಹತ್ತಿ ಅಲ್ಲಿ ಇದ್ದಕ್ಕಿದ್ದಂತೆ ಕಿರುಚುತ್ತಿದ್ದ. ಇದರಿಂದ ಸಹ ಪ್ರಯಾಣಿಕರು ಆಘಾತಗೊಳ್ಳುವ ವಿಡಿಯೋಗಳನ್ನು ಸೆರೆ ಹಿಡಿದು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಳ್ಳುತ್ತಿದ್ದ. ಪೋಸ್ಟ್ ಹಲವು ಜನರನ್ನು ತಲುಪಿ, ಮೆಚ್ಚುಗೆಗಳನ್ನು ಪಡೆದ ಕೂಡಲೇ ವಿಡಿಯೋಗಳನ್ನು ತೆಗೆಯುತ್ತಿದ್ದ. ನಂತರ ಕೆಲ ದಿನಗಳ ನಂತರ ಮತ್ತೆ ಅಪ್ಲೋಡ್ ಮಾಡುತ್ತಿದ್ದ. ಇದು ಬಿಎಂಆರ್'ಸಿಎಲ್ ಅಧಿಕಾರಿಗಳ ಗಮನಕ್ಕೆ ಬಂದಿದೆ. ಇದರಂತೆ ಈತನ ಮೇಲೆ ಅಧಿಕಾರಿಗಳು ಕಣ್ಣಿಟ್ಟಿದ್ದರು.
ಇದೇ ರೀತಿ ಸಂತೋಷ್ ಹಾಕುತ್ತಿದ್ದ ವಿಡಿಯೋಗಳನ್ನು ಗಮನಿಸುತ್ತಿದ್ದ ಅಧಿಕಾರಪಿಗಳು, ವಿಡಿಯೋವೊಂದರಲ್ಲಿ ಆತ ವಾಹನದಲ್ಲಿ ಸವಾರಿ ಮಾಡುತ್ತಿದ್ದುದ್ದನ್ನು ನೋಡಿದ್ದಾರೆ. ಇದರಂತೆ ವಾಹನದ ಸಂಖ್ಯೆಯನ್ನು ಹಿಡಿದು, ಆತನ ಕುರಿತು ಮಾಹಿತಿಗಳನ್ನು ಸಂಗ್ರಹಿಸಿದ್ದಾರೆ. ಇದರಂತೆ ಶುಕ್ರವಾರ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ದುರನ್ನು ಸ್ವೀಕಪಿಸಲು ಪೊಲೀಸರು ಆರಂಭದಲ್ಲಿ ಹಿಂದೇಟು ಹಾಕಿದ್ದಾರೆ. ಆದರೆ, ಮೆಟ್ರೋ ಭದ್ರತಾ ಅಧಿಕಾರಿ ಪುಟ್ಟ ಮಾದಯ್ಯ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಬಳಿಕ ದೂರು ಸ್ವೀಕರಿಸಿದ ಪೊಲೀಸರು, ಠಾಣೆಗೆ ಬರುವಂತೆ ಸಂತೋಷ್ ಗೆ ಸೂಚಿಸಿದ್ದಾರೆ. ಬಳಿಕ ಸಂತೋಷ್ ತನ್ನ ತಾಯಿಯೊಂದಿಗೆ ಠಾಣೆಗೆ ಬಂದಿದ್ದಾನೆ. ನಂತರ ಪೊಲೀಸರ ಮುಂದೆ ಕ್ಷಣೆಯಾಚಿಸಿದ್ದಾರೆ. ಅಲ್ಲದೆ, ಲಿಖಿತವಾಗಿಯು ಕ್ಷಮಾಪಣಾ ಪತ್ರವನ್ನು ಸಲ್ಲಿಸಿದ್ದಾರೆಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದಲ್ಲದೆ, ನಮ್ಮ ಮೆಟ್ರೋ ರೈಲಿನಲ್ಲಿ ಅನುಚಿತವಾಗಿ ವರ್ತಿಸಿದ ಹಿನ್ನೆಲೆಯಲ್ಲಿ ಮೆಟ್ರೋ ಕಾಯ್ದೆಯ ಸೆಕ್ಷನ್ 59 (1) ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ. ಇದಕ್ಕಾಗಿ ಅಧಿಕಾರಿಗಳು ರೂ.500 ದಂಡ ಕಟ್ಟಿಸಿಕೊಂಡು, ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ, Instagram ನಿಂದ ನಮ್ಮ ಮೆಟ್ರೋ ರೈಲಿನಲ್ಲಿ ಸೆರೆ ಹಿಡಿದಿರುವ ಎಲ್ಲಾ ಪೋಸ್ಟ್‌ಗಳನ್ನು ತೆಗೆದುಹಾಕುವಂತೆಯೂ ಸೂಚಿಸಿದ್ದಾರೆಂದು ತಿಳಿದುಬಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ